
ಹುಬ್ಬಳ್ಳಿ: ಪುಣೆಯಲ್ಲಿ ಈಚೆಗೆ ನಡೆದಸವಾಯಿ ಗಂಧರ್ವ ಸಂಗೀತ ಮಹೋತ್ಸವದಲ್ಲಿ ಗಾಯಕ ಅನಿರುದ್ಧ ಐತಾಳ ಅವರ ಗಾಯನಕ್ಕೆ ಎಲ್ಲರೂ ತಲೆದೂಗಿದರು. ಅವರಿಗೆ ಸಂಗೀತದ ಪಾಠ ಹೇಳಿಕೊಟ್ಟ ಗುರು ಅಶೋಕ ಹುಗ್ಗಣ್ಣವರ ಅವರನ್ನೂ ಕೊಂಡಾಡಿದರು.
ಅಶೋಕ ಹುಗ್ಗಣ್ಣವರ ಅವರ ನೇರ ಶಿಷ್ಯ ಅನಿರುದ್ಧ ಅವರು, ಹಿಂದೂಸ್ತಾನಿ ಸಂಗೀತದಲ್ಲಿ ಸದ್ಯ ಹೆಸರು ಮಾಡುತ್ತಿರುವ ಕಲಾವಿದ. ಇಂತಹ ಅನೇಕ ಶಿಷ್ಯರನ್ನು ಬೆಳೆಸಿದ ಕೀರ್ತಿ ಹುಗ್ಗಣ್ಣವರಿಗೆ ಸಲ್ಲುತ್ತದೆ.
ಅಶೋಕ ಹುಗ್ಗಣ್ಣವರ ಮತ್ತು ನಮ್ಮ ಕುಟುಂಬದ ಒಡನಾಟ ನಾಲ್ಕು ದಶಕಗಳಿಗೂ ಹೆಚ್ಚಿನದ್ದು. ನನ್ನ ಅಜ್ಜಿ ಗಂಗೂಬಾಯಿ ಹಾನಗಲ್ ಅವರ ಜತೆಗೂ ಅವರ ಒಡನಾಟವಿತ್ತು. ಎಂ.ಎ ಓದುವಾಗ ಅಜ್ಜಿ ಅವರಿಗೆ ಗುರುವಾಗಿದ್ದರು.
ಗಂಗೂಬಾಯಿ ಹಾನಗಲ್ ಅವರಿಗೆ ಬೆರಳೆಣಿಕೆಯಷ್ಟು ಮಾತ್ರ ಶಿಷ್ಯರಿದ್ದರು. ಆದರೆ, ಹುಗ್ಗಣ್ಣವರ ಐದುನೂರಕ್ಕೂ ಹೆಚ್ಚು ಶಿಷ್ಯರಿಗೆ ಹಿಂದೂಸ್ತಾನಿ ಸಂಗೀತವನ್ನು ಧಾರೆ ಎರೆದಿದ್ದಾರೆ. ಅವರು ಅಪರೂಪದ ಹಿಂದೂಸ್ತಾನಿ ಗಾಯಕ ಮತ್ತು ಅಪರೂಪದ ಗುರು.
ಹುಗ್ಗಣವರ ಬಳಿ ಸಂಗೀತಾಭ್ಯಾಸ ಮಾಡಿದವರು ರಾಷ್ಟ್ರ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ. ಅವರ ಶಿಷ್ಯರಲ್ಲಿ ರೇಷ್ಮಾ ಭಟ್, ರಮ್ಯಾ ಭಟ್, ಶಶಿಕಲಾ ಭಟ್ ಪ್ರಮುಖರು.
ಹುಗ್ಗಣ್ಣವರ ಅವರು ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಯರಗುಪ್ಪಿ ಗ್ರಾಮದಲ್ಲಿ ರಾಮಪ್ಪ ಮತ್ತು ಸಂಕಮ್ಮ ದಂಪತಿಯ ಪುತ್ರನಾಗಿ 1962ರಲ್ಲಿ ಜನಿಸಿದರು. ಅವರ ತಂದೆ, ತಾಯಿ ಸಂಗೀತಗಾರರಲ್ಲ. ಆದರೆ, ಅವರ ಸೋದರಮಾವ ಪಂ.ಲಿಂಗರಾಜ ಬುವಾ ಯರಗುಪ್ಪಿ ಅವರಿಂದ ಆರನೇ ವಯಸ್ಸಿನಲ್ಲಿ ಪ್ರಾಥಮಿಕ ಸಂಗೀತ ಶಿಕ್ಷಣ ಪಡೆದ ಅವರು, ಪಂ.ಬಸವರಾಜ ರಾಜ ಗುರು, ಪಂ.ಸಂಗಮೇಶ್ವರ ಗುರವ ಅವರ ಬಳಿ ಸಂಗೀತಾಭ್ಯಾಸ ಮಾಡಿದರು.
ನಮ್ಮ ನಡುವೆ ಅನೇಕ ಖ್ಯಾತ ಗಾಯಕರು ಇದ್ದಾರೆ. ಆದರೆ, ಸರಳ, ಸಾತ್ವಿಕ ವ್ಯಕ್ತಿತ್ವದ ಹುಗ್ಗಣ್ಣವರ ಸಮರ್ಪಣಾ ಭಾವದಿಂದ ಗಾಯನದ ಜತೆಗೆ ಸಂಗೀತ ವಿದ್ಯೆಯನ್ನು ಧಾರೆ ಎರೆದರು. ಸಂಗೀತ ಗಾಳಿ ವಿದ್ಯೆ. ಅದನ್ನು ಕಲಿಸುವುದು ಕಠಿಣ ಕೆಲಸ. ಆದರೆ, ಆ ಕೆಲಸವನ್ನು ಸುಲಭವಾಗಿ ಮಾಡಿ, ಶಿಷ್ಯರನ್ನು ಬೆಳೆಸಿ ತಾವೂ ಬೆಳೆದರು. ಹಿಂದೂಸ್ತಾನಿ ಸಂಗೀತವನ್ನು ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಅವರು ಮಹತ್ವದ ಕೆಲಸ ಮಾಡಿದ್ದಾರೆ.
ನಿವೃತ್ತಿ ನಂತರ ಹುಬ್ಬಳ್ಳಿಗೆ ಬಂದು ನೆಲಸಿದ್ದ ಅವರು, ಸಂಗೀತ ಪಾಠ ಮುಂದುವರಿಸಿದ್ದರು. ಅವರು ಇನ್ನೂ ಶಿಷ್ಯ ಪರಂಪರೆ ಬೆಳೆಸಬೇಕಿತ್ತು. ಆದರೆ, ಅರ್ಧಕ್ಕೆ ಎದ್ದು ಹೋಗಿದ್ದಾರೆ. ಅವರ ನಿಧನ ಹಿಂದೂಸ್ತಾನಿ ಸಂಗೀತ ಕ್ಷೇತ್ರಕ್ಕೆ ಬಹುದೊಡ್ಡ ನಷ್ಟ. ಹಾಡುವವರು ಸಿಗುತ್ತಾರೆ. ಆದರೆ, ಕಲೆಯನ್ನು ಮುಂದಿನ ಪೀಳಿಗೆಗೆ ದಾಟಿಸುವವರು ವಿರಳ.
(ಲೇಖಕಿ: ಪ್ರಾಧ್ಯಾಪಕಿ, ಡಾ.ಗಂಗೂ ಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಹುಬ್ಬಳ್ಳಿ ಪ್ರಾದೇಶಿಕ ಕೇಂದ್ರ, ಹುಬ್ಬಳ್ಳಿ)
ಅಶೋಕ ಹುಗ್ಗಣ್ಣವರ ನಿಧನ
ಹುಬ್ಬಳ್ಳಿ: ಹಿಂದೂಸ್ತಾನಿ ಗಾಯಕ ಅಶೋಕ ಹುಗ್ಗಣ್ಣವರ (64) ಅನಾರೋಗ್ಯದಿಂದ ಬುಧವಾರ ರಾತ್ರಿ ದಾವಣಗೆರೆಯಲ್ಲಿ ನಿಧನರಾದರು. ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕಿನ ಯರಗುಪ್ಪಿ ಗ್ರಾಮದ ಹುಗ್ಗಣ್ಣವರ ಹೊನ್ನಾವರದ ಎಂಪಿಇ ಸೊಸೈಟಿಯ ಎಸ್.ಡಿ.ಎಂ ಕಾಲೇಜಿನಲ್ಲಿ ಸಂಗೀತ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ 2021ರಲ್ಲಿ ನಿವೃತ್ತಿ ಹೊಂದಿದ್ದರು. ನಿವೃತ್ತಿ ಬಳಿಕ ಹುಬ್ಬಳ್ಳಿಯ ಉಣಕಲ್‌ನ ಶಿವಗಿರಿ ಪ್ಲಾಟ್‌ನಲ್ಲಿ ವಾಸವಾಗಿದ್ದರು. ಅವರಿಗೆ ಪತ್ನಿ ಇಂಗ್ಲಿಷ್ ಪ್ರಾಧ್ಯಾಪಕಿ ವೀಣಾ ಮತ್ತು ಪುತ್ರ ವಿಜ್ಞಾನಿ ಗಾಯಕ ವಿನಾಯಕ ಹುಗ್ಗಣ್ಣವರ ಇದ್ದಾರೆ. ಅಂತ್ಯಕ್ರಿಯೆ ಶುಕ್ರವಾರ ಬೆಳಿಗ್ಗೆ 11.30ಕ್ಕೆ ಹುಬ್ಬಳ್ಳಿಯ ವಿದ್ಯಾನಗರದ ರುದ್ರಭೂಮಿಯಲ್ಲಿ ನಡೆಯಲಿದೆ. ಹುಗ್ಗಣ್ಣವರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಂಗೀತ ವಿಷಯದಲ್ಲಿ ಚಿನ್ನದ ಪದಕದೊಂದಿದೆ ಎಂ.ಎ ‘ಸಂಗೀತ ರತ್ಮ’ ಡಿಪ್ಲೊಮಾ ಮತ್ತು ಸಸ್ಯಶಾಸ್ತ್ರದಲ್ಲಿ ಎಂ.ಎಸ್ಸಿ ಪದವಿ ಪಡೆದಿದ್ದರು. ‘ಕುಂದಗೋಳ ಪರಿಸರದ ಹಿಂದೂಸ್ತಾನಿ ಸಂಗೀತಗಾರರು’ ವಿಷಯ ಕುರಿತು ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದಿದ್ದ ಅವರು ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಆಕಾಶವಾಣಿ ದೂರದರ್ಶನದ ‘ಬಿ’ ಹೈಗ್ರೇಡ್ ಕಲಾವಿದರಾಗಿದ್ದ ಅವರು ಜೈಪುರ ಗ್ವಾಲಿಯರ್ ದೆಹಲಿ ಕೋಲ್ಕತ್ತ ಮುಂಬೈ ಮಾತ್ರವಲ್ಲದೆ ಫ್ರಾನ್ಸ್ ಸೇರಿದಂತೆ ವಿದೇಶಗಳಲ್ಲೂ ಸಂಗೀತ ಕಛೇರಿ ನೀಡಿದ್ದಾರೆ. ಕರ್ನಾಟಕ ಕಲಾಶ್ರೀ ಅನನ್ಯ ಮನ್ಸೂರ್ ಪ್ರಶಸ್ತಿ ರಾಗಶ್ರೀ ಗುರುಕುಮಾರ ಪಂಚಾಕ್ಷರಿ ಗವಾಯಿ ಸೇರಿದಂತೆ ಅನೇಕ ಪ್ರಶಸ್ತಿಗಳು ಅವರಿಗೆ ಸಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.