
ಹುಬ್ಬಳ್ಳಿ: ‘ಮರ್ಯಾದೆಗೇಡು ಹತ್ಯೆ ತಡೆಗೆ ಮಾನ್ಯಾ ಹೆಸರಿನಲ್ಲಿ ಪ್ರತ್ಯೇಕ ಕಾಯ್ದೆ ತರಲು ಚಿಂತನೆ ನಡೆಸಲಾಗುವುದು’ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು.
ಮರ್ಯಾದೆಗೇಡು ಹತ್ಯೆ ನಡೆದ ತಾಲ್ಲೂಕಿನ ಇನಾಂ ವೀರಾಪುರ ಗ್ರಾಮಕ್ಕೆ ಗುರುವಾರ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಏಳು ತಿಂಗಳ ಗರ್ಭಿಣಿಯನ್ನು ಅವರ ಕುಟುಂಬಸ್ಥರೇ ಕೊಲೆ ಮಾಡಿರುವುದು ಮೃಗೀಯ, ಅಮಾನವೀಯ, ನಾಗರಿಕ ಸಮಾಜ ತಲೆತಗ್ಗಿಸುವ ಘಟನೆ. ಸರ್ಕಾರ ಇದನ್ನು ಸಹಿಸುವುದಿಲ್ಲ. ಮನುವಾದದ ಮನಸ್ಸುಗಳನ್ನು ಹತ್ತಿಕ್ಕಬೇಕು. ಈ ಪ್ರಕರಣದಲ್ಲಿ ಭಾಗಿಯಾಗಿದವರು, ಅದಕ್ಕೆ ಉತ್ತೇಜನ ಕೊಟ್ಟವರ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಇಂತಹ ಘಟನೆಗಳು ರಾಜಸ್ತಾನ, ಹರಿಯಾಣದಂತಹ ರಾಜ್ಯಗಳಲ್ಲಿ ಹೆಚ್ಚು ನಡೆಯುತ್ತಿದ್ದವು. ನಮ್ಮ ರಾಜ್ಯದಲ್ಲಿ ಹೆಚ್ಚಾಗಿ ನಡೆಯುತ್ತಿರಲಿಲ್ಲ. ನಮ್ಮದು ನಾಗರಿಕ ಮತ್ತು ಮುಂದುವರಿದ ರಾಜ್ಯ. ಪ್ರಾಯಕ್ಕೆ ಬಂದ ಯುವಕ, ಯುವತಿ ತಮ್ಮ ಒಪ್ಪಿಗೆ ಮೇರೆಗೆ ಯಾವುದೇ ಧರ್ಮ, ಜಾತಿಯವರನ್ನು ಮದುವೆಯಾಗಲು ಮುಕ್ತವಾದ ಅವಕಾಶವಿದೆ. ಅದು ಅವರ ಮೂಲಭೂತ ಹಕ್ಕು, ಇದನ್ನು ಹತ್ತಿಕ್ಕುವ ಕೆಲಸ ಮಾಡಬಾರದು ಎಂದರು.
ಈ ಪ್ರಕರಣದಲ್ಲಿ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ. ಇಂತಹ ಕೃತ್ಯಗಳನ್ನು ಬೆಂಬಲಿಸುವ ವ್ಯಕ್ತಿಗಳನ್ನು ಸರ್ಕಾರ ಬಿಡುವುದಿಲ್ಲ. ಈ ಬಗ್ಗೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ. ಈ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು ಎಂಬುದು ನಮ್ಮ ಆಶಯ ಎಂದು ತಿಳಿಸಿದರು.
ಸಂತ್ರಸ್ಥ ಕುಟುಂಬಕ್ಕೆ ಅಗತ್ಯ ನೆರವು ನೀಡಲಾಗುವುದು. ರಾಜ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಯಾವ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಸಿಎಂ, ಗೃಹ ಸಚಿವರೊಂದಿಗೆ ಚರ್ಚಿಸಲಾಗುವುದು. ಈ ಬಗ್ಗೆ ಉಗ್ರವಾದ ಕಾನೂನು ತರಲು ಮುಂದಿನ ಅಧಿವೇಶನದಲ್ಲಿ ಪ್ರಯತ್ನ ಮಾಡಲಾಗುವುದು ಎಂದರು.
ಯುವತಿಯ ಇಚ್ಚೆಯ ವಿರುದ್ದವಾಗಿ ವಿವಾಹ ಮಾಡಬಾರದು. ಆಕೆಯ ಆಸೆಯಂತೆ ಮದುವೆ ಆಗಬೇಕು ಎಂದು ಅಂಬೇಡ್ಕರ್ ಅವರು ಹಿಂದೂ ಕೋಡ್ ಬಿಲ್‌ನಲ್ಲಿ ಅಂಬೇಡ್ಕರ್ ಅವರು ಹೇಳಿದ್ದರು ಎಂದು ಹೇಳಿದರು.
ಘಟನೆ ನಡೆದ ಕೂಡಲೇ ಪರಿಶಿಷ್ಟ ಜಾತಿ, ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಅಡಿಯಲ್ಲಿ ಸಂತ್ರಸ್ತರಿಗೆ ಪರಿಹಾರ ಕೊಡುವಂತೆ ಜಿಲ್ಲಾಧಿಕಾರಿಗೆ ಕರೆ ಮಾಡಿ ಸೂಚನೆ ಕೊಟ್ಟಿದ್ದೆ. ಈ ಘಟನೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರೇ ಅವರ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರಕರಣದಲ್ಲಿ ಎಂಟು ಜನ ಸಂತ್ರಸ್ತರಿಗೆ ತಲಾ ₹2 ಲಕ್ಷದಂತೆ ₹16 ಲಕ್ಷ ಪರಿಹಾರದ ಚೆಕ್ ಅನ್ನು ಕುಟುಂಬಸ್ಥರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.