ADVERTISEMENT

ಹೆಸರು ಕಾಳು ಖರೀದಿ: ಎಫ್‍ಎಕ್ಯು ಮಾನದಂಡ ಕೈಬಿಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 2:57 IST
Last Updated 23 ಡಿಸೆಂಬರ್ 2025, 2:57 IST
ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರಿನ ರಸ್ತೆಯಲ್ಲಿ ಹೆಸರುಕಾಳು ಸುರಿದು ರೈತರು ಪ್ರತಿಭಟನೆ ನಡೆಸಿದರು 
ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರಿನ ರಸ್ತೆಯಲ್ಲಿ ಹೆಸರುಕಾಳು ಸುರಿದು ರೈತರು ಪ್ರತಿಭಟನೆ ನಡೆಸಿದರು    

ಧಾರವಾಡ: ಬೆಂಬಲ ಬೆಲೆ ಯೋಜನೆಯಡಿ (ಎಂಎಸ್‌ಪಿ) ಹೆಸರು ಕಾಳು ಖರೀದಿಗೆ ಎಫ್‍ಎಕ್ಯು ಮಾನದಂಡ ಕೈಬಿಡಬೇಕು ಎಂದು ಆಗ್ರಹಿಸಿ ಕುಂದಗೋಳ ತಾಲ್ಲೂಕಿನ ಹಿರೇಗುಂಜಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು ಸೋಮವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಸಮಾವೇಶಗೊಂಡ ಪ್ರತಿಭಟನಕಾರರು ರಸ್ತೆಯಲ್ಲಿ ಹೆಸರು ಕಾಳು ಸುರಿದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ಧರಣಿ ಆರಂಭಿಸಿದರು. 

‘ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ಹೆಸರು ಬೆಳೆದಿದ್ದಾರೆ. ಸತತ ಮಳೆಯಿಂದ ಬೆಳೆಗೆ ಹಾನಿಯಾಗಿ ಹೆಕ್ಟೇರ್‌ಗೆ 3 ರಿಂದ 4 ಕ್ವಿಂಟಲ್ ಇಳುವರಿ ಬಂದಿದೆ. ಎಫ್‍ಎಕ್ಯು ಗುಣಮಟ್ಟದ ನೆಪ ಹೇಳಿ ಕನಿಷ್ಠ ಬೆಂಬಲ ಬೆಲೆ ಯೋಜನೆಯ ಅಡಿ ತೆರೆದಿರುವ ಕೇಂದ್ರಗಳಲ್ಲಿ ಹೆಸರುಕಾಳು ಖರೀದಿಸುತ್ತಿಲ್ಲ’ ಎಂದು ಪ್ರತಿಭಟನಕಾರರು ದೂರಿದರು.

ADVERTISEMENT

‘ಈ ಬಾರಿ ಮಳೆಯಿಂದ ಕಾಳು ಕಪ್ಪು ಬಣ್ಣಕ್ಕೆ ತಿರುಗಿವೆ. ಗುಣಮಟ್ಟವಿಲ್ಲ ಎಂಬ ಕಾರಣಕ್ಕೆ ಖರೀದಿಸುತ್ತಿಲ್ಲ. ಮಾನದಂಡ ಸಡಿಲಗೊಳಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರಿಗೆ ಮನವಿ ಸಲ್ಲಿಸಿದರೂ ಈವರೆಗೂ ಕ್ರಮ ವಹಿಸಿಲ್ಲ. ಎಫ್‍ಎಕ್ಯು ಮಾನದಂಡ ಕೈಬಿಟ್ಟು ರೈತರ ಹೆಸರುಕಾಳುಗಳನ್ನು ಯಥಾವತ್ತಾಗಿ ಖರೀದಿಸಬೇಕು’ ಎಂದು ಒತ್ತಾಯಿಸಿದರು.

ಚಂದ್ರಶೇಖರ ಬಿಸಿರೊಟ್ಟಿ, ಸತೀಶಗೌಡ ಪಾಟೀಲ, ಬಸವರಾಜ ಸಂಕಲಿಪುರ, ಹೊಳಲ್ಲಪ್ಪಗೌಡ ಪಾಟೀಲ, ಶಿವಶಂಕರಪ್ಪ ಮುಳಗುಂದ, ನಾಗನಗೌಡ ನೆಂಗಳೂರ, ಉಮೇಶ ಸಂಶಿ, ಚನ್ನಪ್ಪಗೌಡ ಪಾಟೀಲ, ಪಕ್ಕೀರಗೌಡ ಪಾಟೀಲ, ಉಮೇಶ ಅಂಗಡಿ, ಮಂಜುನಾಥ ನಡವನಳ್ಳಿ, ಮಂಜುನಾಥ ಕಿಲ್ಲೆದ ಮುತ್ತಪ್ಪ ಕೊಡ್ಲಿ, ಶಂಕರಗೌಡ ಹಾಲಪ್ಪಗೌರ, ಶಂಕರ ಮರಿಗೌಡ್ರ, ಚಂದ್ರಶೇಖರ ಶೆರೆವಾಡ, ನಿಂಗಪ್ಪ ದೊಡ್ಡರ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.