ADVERTISEMENT

ಧಾರವಾಡ: ವಿದ್ಯಾರ್ಥಿಗಳಿಗೆ ಬೇಕಿದೆ ಇನ್ನಷ್ಟು ಹಾಸ್ಟೆಲ್

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2025, 5:35 IST
Last Updated 4 ಆಗಸ್ಟ್ 2025, 5:35 IST
ಹುಬ್ಬಳ್ಳಿಯ ಶಿರಡಿ ನಗರದಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಪರಿಶಿಷ್ಟ ವರ್ಗದ ಮೆಟ್ರಿಕ್‌ ನಂತರದ ಬಾಲಕರ ವಸತಿ ನಿಲಯ
ಪ್ರಜಾವಾಣಿ ಚಿತ್ರ: ಗುರು ಹಬೀಬ 
ಹುಬ್ಬಳ್ಳಿಯ ಶಿರಡಿ ನಗರದಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಪರಿಶಿಷ್ಟ ವರ್ಗದ ಮೆಟ್ರಿಕ್‌ ನಂತರದ ಬಾಲಕರ ವಸತಿ ನಿಲಯ ಪ್ರಜಾವಾಣಿ ಚಿತ್ರ: ಗುರು ಹಬೀಬ    

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಶಿಕ್ಷಣ ಪಡೆಯಲು ಬೇರೆ ಜಿಲ್ಲೆಗಳಿಂದ ಬರುವ ಬಡ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ವಿದ್ಯಾರ್ಥಿ ನಿಲಯ ಪ್ರವೇಶ ಕೋರಿ ಅರ್ಜಿ ಸಲ್ಲಿಸುವ ವಿವಿಧ ಸಮುದಾಯದ ಒಟ್ಟು ವಿದ್ಯಾರ್ಥಿಗಳಲ್ಲಿ ಶೇ 30ರಿಂದ ಶೇ 40ರಷ್ಟು ಮಂದಿಗೆ ಪ್ರವೇಶ ಸಿಗುತ್ತಿಲ್ಲ. 

ಜಿಲ್ಲೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯ, ಕಾನೂನು ವಿಶ್ವವಿದ್ಯಾಲಯ, ಎಸ್‌ಡಿಎಂ ಮಹಾವಿದ್ಯಾಲಯ, ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯ ಸೇರಿ ವಿವಿಧ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆ, ಕಾಲೇಜುಗಳಿವೆ.

ಹಾಸ್ಟೆಲ್‌ ಪ್ರವೇಶ ಕೋರಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ವಿದ್ಯಾರ್ಥಿ ನಿಲಯಗಳ ಕೊರತೆ ಇದೆ. ಜಿಲ್ಲೆಯಲ್ಲಿ ಪ್ರಸ್ತುತ ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಹಾಗೂ ಸಮಾಜ ಕಲ್ಯಾಣ ಇಲಾಖೆಯಡಿ ಒಟ್ಟು 99 ಮೆಟ್ರಿಕ್‌ ನಂತರದ ವಿದ್ಯಾರ್ಥಿನಿಲಯಗಳಿವೆ. ಇದು ಸಾಲುತ್ತಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ADVERTISEMENT

ಹುಬ್ಬಳ್ಳಿ ಸೇರಿ ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಸರ್ಕಾರಿ ಮೆಟ್ರಿಕ್‌ ಪೂರ್ವ, ನಂತರದ ಬಾಲಕ ಹಾಗೂ ಬಾಲಕಿಯರಿಗೆ ಸೇರಿದ ವಿದ್ಯಾರ್ಥಿನಿಲಯಗಳು ಬಹುತೇಕ ಸ್ವಂತ ಕಟ್ಟಡದಲ್ಲಿದ್ದು, ಸುಸಜ್ಜಿತವಾಗಿವೆ. ವಿದ್ಯಾರ್ಥಿಗಳಿಗೆ ಸಕಾಲಕ್ಕೆ ಊಟ, ಉಪಾಹಾರ ಸಿಗುತ್ತದೆ. ‘ಶುಚಿ ಸಂಭ್ರಮ’ ಮತ್ತು ‘ಸಿರಿಗಂಧ’ ಕಿಟ್, ಗ್ರಂಥಾಲಯ ವ್ಯವಸ್ಥೆ, ನೋಟ್‌ಬುಕ್‌ ಸ್ಟೇಶನರಿ, ಸಮವಸ್ತ್ರ ಮತ್ತು ಶೂ-ಸಾಕ್ಸ್‌ ಅಗತ್ಯ ಶೈಕ್ಷಣಿಕ ಪರಿಕರ ನೀಡಲಾಗಿದೆ. ಆದರೆ, ಬಿಸಿಎಂ ಹಾಗೂ ಅಲ್ಪಸಂಖ್ಯಾತರ ಇಲಾಖೆಗೆ ಸೇರಿದ ಕೆಲ ಹಾಸ್ಟೆಲ್‌ಗಳು ಬಾಡಿಗೆ ಕಟ್ಟಡದಲ್ಲಿವೆ, ಸೌಲಭ್ಯಗಳ ಕೊರತೆ ಇದೆ ಎನ್ನುವುದು ವಿದ್ಯಾರ್ಥಿಗಳ ದೂರು. 

ಅಳ್ನಾವರ ತಾಲ್ಲೂಕು ಕೇಂದ್ರದಲ್ಲಿ ವಿದ್ಯಾರ್ಥಿ ನಿಲಯಗಳ ಕೊರತೆ ಇದೆ. ಮೆಟ್ರಿಕ್‌ ನಂತರ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಹಾಸ್ಟೆಲ್‌ ಅವಶ್ಯವಿದೆ. ಇಲ್ಲಿನ ವಿದ್ಯಾನಗರ ಬಡಾವಣೆಯಲ್ಲಿ ಹಿಂದುಳಿದ ವರ್ಗ ಇಲಾಖೆಯ ಮೆಟ್ರಿಕ್‌ ಪೂರ್ವ ಬಾಲಕ ಹಾಸ್ಟೆಲ್‌ ಇದೆ. ಆದರೆ, ಮೆಟ್ರಿಕ್ ನಂತರ ವಿದ್ಯಾರ್ಥಿ ನಿಲಯದ ಬೇಡಿಕೆಗೆ ಇನ್ನೂ ಮನ್ನಣೆ ದೊರೆಯುತ್ತಿಲ್ಲ ಎನ್ನುವುದು ವಿದ್ಯಾರ್ಥಿಗಳ ದೂರಾಗಿದೆ. 

ಅಣ್ಣಿಗೇರಿ ಪಟ್ಟಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸೇರಿದ ಎರಡು ವಸತಿ ನಿಲಯಗಳಿವೆ. ಒಂದು ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ. ಮತ್ತೊಂದು ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ. ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಈ ವಸತಿ ನಿಲಯದಲ್ಲಿ ದಾಖಲಾತಿ ಸಂಖ್ಯೆ ಕಡಿಮೆಯಾದ ಕಾರಣ, ಬಂದ್ ಮಾಡಲಾಗಿದೆ. ಸದ್ಯ ಮೆಟ್ರಿಕ್ ಪೂರ್ವ ಇರುವ ವಸತಿ ನಿಲಯವನ್ನು ಮೆಟ್ರಿಕ್ ನಂತರದ ವಸತಿ ನಿಲಯವನ್ನಾಗಿ ಪರಿವರ್ತನೆ ಮಾಡಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಸ್ವಂತ ಕಟ್ಟಡದಲ್ಲಿ ನಡೆಯುತ್ತಿದೆ ಎಂದು ನವಲಗುಂದದ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಎಸ್‌.ಆರ್‌.ಗಣಾಚಾರಿ ಹೇಳುತ್ತಾರೆ. 

ನವಲಗುಂದದ ಪಟ್ಟಣದಲ್ಲಿ ಬಿಸಿಎಂಗೆ ಸೇರಿದ ಡಿ.ದೇವರಾಜ ಅರಸು ಮೆಟ್ರಿಕ್‌ ನಂತರದ ಬಾಲಕರ ವಸತಿ ನಿಲಯವಿದ್ದು, ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳ ಕೊರತೆ ಇದೆ. ಆದರೆ, ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ನಿಲಯ ಸ್ವಂತ ಕಟ್ಟಡದಲ್ಲಿದ್ದು, ಸುಸಜ್ಜಿತವಾಗಿದೆ. ಬಾಲಕರ ವಸತಿ ನಿಲಯ ಸದ್ಯ ಹಳೆಯ ಕಟ್ಟಡದಲ್ಲಿದ್ದು, ನೂತನ ಕಟ್ಟಡದ ಉದ್ಘಾಟನೆ ಆಗಬೇಕಿದೆ ಎನ್ನುತ್ತಾರೆ ಇಲಾಖೆಯ ಅಧಿಕಾರಿಗಳು. 

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಸತಿನಿಲಯಗಳಿಗೆ ಅರ್ಜಿ ಸಲ್ಲಿಸಿದ ಎಲ್ಲ ಅರ್ಹ ವಿದ್ಯಾರ್ಥಿಗಳಿಗೆ ಸ್ಥಳಾವಕಾಶದ ಆಧಾರದಲ್ಲಿ ಪ್ರವೇಶ ನೀಡುವಂತೆ ಸರ್ಕಾರದ ಸೂಚನೆ ಇದೆ. ಇದರಿಂದಾಗಿ ಎಲ್ಲಾ ವಿದ್ಯಾರ್ಥಿಗಳಿಗೆ ನಿಲಯದ ಸೌಲಭ್ಯ ಕಲ್ಪಿಸಲಾಗುತ್ತದೆ. ಆದರೆ, ಬಿಸಿಎಂ ಹಾಗೂ ಅಲ್ಪಸಂಖ್ಯಾತರ ಇಲಾಖೆಗೆ ಸೇರಿದ ಕೆಲ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೆಚ್ಚುವರಿ ವಿದ್ಯಾರ್ಥಿ ನಿಲಯಗಳಿಗಾಗಿ ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎನ್ನುತ್ತಾರೆ ಇಲಾಖೆಯ ಉಪ ನಿರ್ದೇಶಕರೊಬ್ಬರು. 

‘ಮೆಟ್ರಿಕ್‌ ನಂತರದ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಆರಂಭವಾಗುವ ಮುನ್ನವೇ ಸೌಲಭ್ಯ ಕೊರತೆ ಇರುವ ಹಾಸ್ಟೆಲ್‌ಗಳಲ್ಲಿ ಅಗತ್ಯ ಸೌಕರ್ಯ ಕಲ್ಪಿಸಿಕೊಡಬೇಕು. ಜೊತೆಗೆ ಹಾಸ್ಟೆಲ್‌ ಪ್ರವೇಶ ಕೋರಿ ಮೂರು ಇಲಾಖೆಗಳಿಗೆ ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಆಯಾ ಇಲಾಖೆಗಳ ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶ ದೊರೆತರೆ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಉತ್ತಮವಾಗುತ್ತದೆ‘ ಎನ್ನುತ್ತಾರೆ ವಸತಿ ನಿಲಯದ ಪಾಲಕರೊಬ್ಬರು. 

18,910 ವಿದ್ಯಾರ್ಥಿಗಳು ವಂಚಿತ

‘ಸರ್ಕಾರಿ ಶಾಲೆ, ಕಾಲೇಜು ಸೇರಿ ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ 2024–25ನೇ ಸಾಲಿನಲ್ಲಿ 99,174 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಇವರಲ್ಲಿ 35,255 ವಿದ್ಯಾರ್ಥಿಗಳು ವಿವಿಧ ಜಿಲ್ಲೆಗಳಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಿಗೆ ಪ್ರವೇಶ ಕೋರಿ ಅರ್ಜಿ ಸಲ್ಲಿಸಿದ್ದರು. ಅವರಲ್ಲಿ 16,345 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಸಿಕ್ಕಿದೆ. ಉಳಿದ 18,910 ವಿದ್ಯಾರ್ಥಿಗಳು ನಿಲಯದ ಪ್ರವೇಶದಿಂದ ವಂಚಿತರಾಗಿದ್ದಾರೆ’ ಎಂದು ಮೂರೂ ಇಲಾಖೆಗಳ ಅಧಿಕಾರಿಗಳು ಜಿಲ್ಲಾಧಿಕಾರಿಗೆ ಸಲ್ಲಿಸಿದ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. 

ಹೆಚ್ಚುವರಿ 46 ಹಾಸ್ಟೆಲ್‌ಗಳಿಗೆ ಬೇಡಿಕೆ

‘ಮೂರು ವರ್ಷಗಳಿಂದ ಪ್ರತಿ ವರ್ಷ ವಿದ್ಯಾರ್ಥಿನಿಲಯಗಳ ಪ್ರವೇಶ ಕೋರಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಪ್ರವೇಶ ಕೋರಿ ಅರ್ಜಿ ಸಲ್ಲಿಸುವ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಧಾರವಾಡ ಜಿಲ್ಲೆಗೆ 100 ಸಂಖ್ಯಾಬಲದ ಆಧಾರದ ಮೇಲೆ ಮೂರು ಇಲಾಖೆಗಳಿಗೆ ಇನ್ನೂ ಹೆಚ್ಚುವರಿಯಾಗಿ ಒಟ್ಟು 46 ಮೆಟ್ರಿಕ್‌ ನಂತರದ ಹೊಸ ವಿದ್ಯಾರ್ಥಿ ನಿಲಯಗಳ ಮಂಜೂರು ಮಾಡುವಂತೆ ಮೂರು ಇಲಾಖೆಗಳ ಅಧಿಕಾರಿಗಳ ಮೂಲಕ ಕಳೆದ ಜನವರಿಯಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ’ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಗಂಗಾಧರ ದೊಡ್ಮನಿ ತಿಳಿಸಿದರು.

ಸಮಾಜ ಕಲ್ಯಾಣ ಹಿಂದುಳಿದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಹೆಚ್ಚುವರಿ 46 ಹಾಸ್ಟೆಲ್‌ಗಳ ಅವಶ್ಯವಿದೆ. ಹಾಸ್ಟೆಲ್‌ಗಳ ನಿರ್ಮಾಣಕ್ಕೆ 21 ನಿವೇಶನ ಗುರುತಿಸಲಾಗಿದೆ.
ದಿವ್ಯಪ್ರಭು, ಜಿಲ್ಲಾಧಿಕಾರಿ
ವಿದ್ಯಾರ್ಥಿಗಳ ಸಂಖ್ಯೆ ಅನುಗುಣವಾಗಿ ಹಾಸ್ಟೆಲ್‌ಗಳ ಕೊರತೆ ಇದೆ. ಹೆಚ್ಚುವರಿ ಹಾಸ್ಟೆಲ್‌ಗಳಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಮಂಜೂರಾದರೆ ಎಲ್ಲರಿಗೂ ಅನುಕುಲ.
ಭುವನೇಶ ಪಾಟೀಲ, ಸಿಇಒ, ಜಿಲ್ಲಾ ಪಂಚಾಯಿತಿ.
ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಮೆಟ್ರಿಕ್‌ ಪೂರ್ವ ನಂತರದ ಒಟ್ಟು 41 ಹಾಸ್ಟೆಲ್‌ಗಳಿವೆ. ಇನ್ನೂ ಹೆಚ್ಚುವರಿಯಾಗಿ 20 ಹಾಸ್ಟೆಲ್‌ಗಳ ಅಗತ್ಯವಿದೆ.
–ಪಿ.ಶುಭ ಜಂಟಿ ನಿರ್ದೇಶಕ. ಸಮಾಜ ಕಲ್ಯಾಣ ಇಲಾಖೆ ಧಾರವಾಡ
ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸೇರಿದ 17 ಮೆಟ್ರಿಕ್‌ ನಂತರದ ವಿದ್ಯಾರ್ಥಿ ನಿಲಯಗಳಿವೆ. ಹೆಚ್ಚುವರಿಯಾಗಿ ಇನ್ನೂ 10 ಹಾಸ್ಟೆಲ್‌ಗಳ ಅವಶ್ಯವಿದೆ.
ಪೂರ್ಣಿಮಾ ಚೂರಿ, ಜಿಲ್ಲಾ ಅಧಿಕಾರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಧಾರವಾಡ
ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸೇರಿದ ಮೆಟ್ರಿಕ್‌ ಪೂರ್ವ ಹಾಗೂ ನಂತರದ ಒಟ್ಟು 82 ಹಾಸ್ಟೆಲ್‌ಗಳಿವೆ. ಇನ್ನೂ 16 ಹಾಸ್ಟೆಲ್‌ಗಳ ಅವಶ್ಯಕತೆ ಇದೆ.
–ಗಂಗಾಧರ ದೊಡ್ಮನಿ ಉಪ ನಿರ್ದೇಶಕರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಧಾರವಾಡ
ನವಲಗುಂದದ ಪಟ್ಟಣದಲ್ಲಿ ಬಿಸಿಎಂಗೆ ಸೇರಿದ ಡಿ.ದೇವರಾಜ ಅರಸು ಮೆಟ್ರಿಕ್‌ ನಂತರದ ಬಾಲಕರ ವಸತಿ ನಿಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.