
ಹುಬ್ಬಳ್ಳಿ: ಶಬ್ದ ಮಾಲಿನ್ಯ ಉಂಟು ಮಾಡುವ ಕರ್ಕಶ ಹಾರ್ನ್‌ನ್ನು ವಾಹನಗಳಲ್ಲಿ ಅಳವಡಿಸಬಾರದು ಎಂಬ ನಿಯಮವಿದ್ದರೂ ಅದು ಪಾಲನೆ ಆಗುತ್ತಿಲ್ಲ. ಇದರಿಂದ ಸಾರ್ವಜನಿಕರು, ವಾಹನ ಸವಾರರಿಗೆ ತೊಂದರೆಯಾಗಿದೆ.
ಮೋಟಾರು ವಾಹನ ಕಾಯ್ದೆ ಪ್ರಕಾರ, ವಾಹನಗಳಲ್ಲಿ ಕರ್ಕಶ ಹಾರ್ನ್ (ಏರ್ ಹಾರ್ನ್) ಬಳಸುವಂತಿಲ್ಲ. ಗರಿಷ್ಠ 80 ಡೆಸಿಬಲ್ ಶಬ್ದ ಮಾಡುವ ಎಲೆಕ್ಟ್ರಿಕ್ ಹಾರ್ನ್ ಮಾತ್ರ ಬಳಸಬೇಕು. ಆದರೆ, ಈ ನಿಯಮ ಗಾಳಿಗೆ ತೂರಲಾಗುತ್ತಿದ್ದು, ಸರ್ಕಾರಿ ವಾಹನಗಳು ಮತ್ತು ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿಯೂ ಈ ರೀತಿಯ ಹಾರ್ನ್ ಬಳಸಲಾಗುತ್ತಿದೆ.
2024–25ನೇ ಸಾಲಿನಲ್ಲಿ ಧಾರವಾಡ ಪೂರ್ವ ಪ್ರಾದೇಶಿಕ ಸಾರಿಗೆ ಕಚೇರಿಯಿಂದ 14,484 ವಾಹನಗಳನ್ನು ತಪಾಸಣೆ ನಡೆಸಿ, 66 ಪ್ರಕರಣ ದಾಖಲಿಸಲಾಗಿದೆ. ₹1.89 ಲಕ್ಷ ದಂಡ ವಿಧಿಸಲಾಗಿದೆ. ಧಾರವಾಡ ಪೂರ್ವ ಪ್ರಾದೇಶಿಕ ಸಾರಿಗೆ ಕಚೇರಿಯಿಂದ 544 ವಾಹನಗಳ ತಪಾಸಣೆ ಮಾಡಲಾಗಿದ್ದು, 40 ಪ್ರಕರಣ ದಾಖಲಿಸಿ, ₹1.21 ಲಕ್ಷ ದಂಡ ಸಂಗ್ರಹಿಸಲಾಗಿದೆ.
‘ಬಹುತೇಕರು ವಾಹನಗಳಲ್ಲಿ ಎಲೆಕ್ಟ್ರಿಕ್, ಏರ್ ಹಾರ್ನ್ ಎರಡನ್ನೂ ಅಳವಡಿಸಿಕೊಂಡಿರುತ್ತಾರೆ. ಆದರೆ, ಕೆಲವರು ಮಾತ್ರ ಎಲೆಕ್ಟ್ರಿಕ್ ಹಾರ್ನ್ ಬಳಸುತ್ತಾರೆ. ಈ ಬಗ್ಗೆ ಕಾರ್ಯಾಚರಣೆ ನಡೆಸಿ, ದಂಡ ವಿಧಿಸಿ, ಜಾಗೃತಿ ಮೂಡಿಸಿದರೂ ಇವುಗಳ ಬಳಕೆ ಕಡಿಮೆಯಾಗಿಲ್ಲ’ ಎಂದು ಧಾರವಾಡ ಪೂರ್ವ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಕಾಂತ ಬಡಿಗೇರ ಹೇಳಿದರು.
‘ಶಾಲೆ, ಕಾಲೇಜು, ಆಸ್ಪತ್ರೆ, ದೇವಸ್ಥಾನ, ಮಸೀದಿ, ಪ್ರಾರ್ಥನಾ ಮಂದಿರಗಳು, ನ್ಯಾಯಾಲಯದ ಬಳಿ ಯಾವುದೇ ರೀತಿಯ ಹಾರ್ನ್ ಬಳಸುವಂತಿಲ್ಲ. ಈ ನಿಯಮ ಉಲ್ಲಂಘನೆಯಾಗುತ್ತಿದೆ. ಕರ್ಕಶ ಹಾರ್ನ್ ಬಳಸಿದರೆ ಅವುಗಳನ್ನು ತೆರವುಗೊಳಿಸಿ, ಗರಿಷ್ಠ ₹3 ಸಾವಿರ ದಂಡ ವಿಧಿಸಲಾಗುವುದು. ಇದರ ಜೊತೆಗೆ ಸೈಲೆನ್ಸರ್ ವಿರೂಪಗೊಳಿಸಿ ಸಂಚರಿಸುವ ಪ್ರಕರಣಗಳು ಹೆಚ್ಚುತ್ತಿವೆ’ ಎಂದರು.
ನಿಯಮದ ಅನ್ವಯ ಕರ್ಕಶ ಹಾರ್ನ್ ಬಳಸುವಂತಿಲ್ಲ. ಈ ಬಗ್ಗೆ ನಿರಂತರವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಇದು ಮುಂದುವರಿಯಲಿದೆ. ನಿಯಮ ಉಲ್ಲಂಘಿಸಿದ್ದು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು.ಶ್ರೀಕಾಂತ ಬಡಿಗೇರ, ಸಾರಿಗೆ ಅಧಿಕಾರಿ, ಧಾರವಾಡ ಪೂರ್ವ ಪ್ರಾದೇಶಿಕ
ಕಿವಿಯ ತಮಟೆ ಕಿತ್ತು ಹೋಗುವಂತಹ ಕರ್ಕಶ ಹಾರ್ನ್‌ಗಳನ್ನು ವಾಹನಗಳಲ್ಲಿ ಅಳವಡಿಸಿಕೊಳ್ಳಲಾಗುತ್ತದೆ. ಇದರಿಂದ ಮಕ್ಕಳು, ಹಿರಿಯ ನಾಗರಿಕರು, ಹೃದ್ರೋಗ ಸಮಸ್ಯೆ ಇರುವವರಿಗೆ ತುಂಬಾ ತೊಂದರೆ ಆಗುತ್ತದೆ.ಜಗದೀಶ ಹೊಂಬಳ, ನಿವಾಸಿ, ಸರಸ್ವತಿಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.