ADVERTISEMENT

ಹುಬ್ಬಳ್ಳಿ: ಬನಶಂಕರಿ‌ ದೇವಿಯ ಸಂಭ್ರಮದ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2023, 13:11 IST
Last Updated 5 ಫೆಬ್ರುವರಿ 2023, 13:11 IST
   

ಹುಬ್ಬಳ್ಳಿ: ಇಲ್ಲಿಯ ಬನಶಂಕರಿ ಬಡಾವಣೆಯ ಬನಶಂಕರಿ‌ ದೇವಿಯ ರಥೋತ್ಸವ ಭಾನುವಾರ ಭಕ್ತ ಸಮೂಹದ ನಡುವೆ ವಿಜೃಂಭಣೆಯಿಂದ ನೆರವೇರಿತು.

ದೇವಿಯ ಮೂರ್ತಿಯನ್ನು ರಥದಲ್ಲಿ ಕುಳ್ಳಿರಿಸಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ರಥ ಸಾಗುವ ಮಾರ್ಗದುದ್ದಕ್ಕೂ ರಂಗೋಲಿ ಹಾಕಲಾಗಿತ್ತು. ವಾದ್ಯ-ಮೇಳ, ಮಂತ್ರ-ಪಠಣದೊಂದಿಗೆ ರಥ ಬನಶಂಕರಿ ಬಡಾವಣೆಯ ರಾಜಮಾರ್ಗದಲ್ಲಿ ಅದ್ಧೂರಿಯಾಗಿ ಸಾಗಿತು. ಭಕ್ತರು ರಥಕ್ಕೆ ಉತ್ತತ್ತಿ, ಬಾಳೆ ಹಣ್ಣು, ಭಂಡಾರ ಎಸೆದು ಹರಕೆ ತೀರಿಸಿದರು. ಕೆಲವರು ಕಟ್ಟಡದ ಮೇಲೆ ನಿಂತು ರಥಕ್ಕೆ ಪುಷ್ಪವೃಷ್ಟಿಗೈದರು.

ಸಿದ್ದೇಶ್ವರ‌ ಪಾರ್ಕ್, ಕಾಳಿದಾಸ ನಗರ, ನೇಕಾರ ಕಾಲೊನಿ, ಶಿರೂರ ಪಾರ್ಕ್ ಹಾಗೂ ಸುತ್ತಲಿನ ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿ, ಇಷ್ಟಾರ್ಥಗಳ ಈಡೇರಿಕೆಗೆ ಪ್ರಾರ್ಥಿಸಿಕೊಂಡರು. ಮಕ್ಕಳು ಬಲೂನು, ಆಟಿಕೆ ಸಾಮಗ್ರಿಗಳನ್ನು ಖರೀದಿಸಿ ಸಂಭ್ರಮಿಸಿದರು.

ADVERTISEMENT

ಬೆಳಿಗ್ಗೆ ಸಾಮೂಹಿಕ ಸತ್ಯನಾರಾಯಣ ಪೂಜೆ, ನವಗ್ರಹ ಸಹಿತ ಚಂಡಿಹೋಮ, ಸಹಸ್ರ ಕುಂಕುಮಾರ್ಚನೆ, ಹೋಮ ಪೂರ್ಣಾಹುತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬಡಾವಣೆಯ ಸುತ್ತ ಶ್ರೀದೇವಿಯ ಬೆಳ್ಳಿ ಪಲ್ಲಕ್ಕಿ ಉತ್ಸವ ಮೆರವಣಿಗೆ ಮಾಡಲಾಯಿತು. ಹೆಬ್ಬಳ್ಳಿಯ ಗೋಂದಾವಳೆಮಠದ ದತ್ತಾವಧೂತ ಮಹಾರಾಜರು ಮತ್ತು ಶಂಕರಭಟ್ ಜೋಶಿ ಅವರಿಂದ ಪ್ರವಚನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.