ADVERTISEMENT

ಸೈಬರ್ ವಂಚನೆಗೆ ಹುಬ್ಬಳ್ಳಿ ಬ್ಯಾಂಕ್ ಖಾತೆ ಬಳಕೆ: ಕೋಟ್ಯಂತರ ರೂಪಾಯಿ ವರ್ಗಾವಣೆ

ಆನ್‌ಲೈನ್‌ನಲ್ಲಿ ಕೋಟ್ಯಂತರ ರೂಪಾಯಿ ವರ್ಗಾವಣೆ, ಪ್ರಕರಣ ದಾಖಲು

ನಾಗರಾಜ್ ಬಿ.ಎನ್‌.
Published 4 ಫೆಬ್ರುವರಿ 2026, 20:04 IST
Last Updated 4 ಫೆಬ್ರುವರಿ 2026, 20:04 IST
ಸೈಬರ್‌
ಸೈಬರ್‌   

ಹುಬ್ಬಳ್ಳಿ: ದೇಶದ ವಿವಿಧೆಡೆ ನಡೆದಿರುವ ಹಲವು ಸೈಬರ್‌ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೋಟ್ಯಂತರ ರೂಪಾಯಿ ವರ್ಗಾವಣೆಗೆ ಹುಬ್ಬಳ್ಳಿಯ ಕೇಶ್ವಾಪುರದ ಬ್ಯಾಂಕ್ ಆಫ್ ಬರೋಡಾ ಶಾಖೆಯ ಖಾತೆಯು (54910200000346) ಹಲವು ಬಾರಿ ಬಳಕೆಯಾಗಿರುವುದು ಬಯಲಾಗಿದೆ.

ಇದೇ ಖಾತೆಯಿಂದ ದೇಶದ ವಿವಿಧ ಬ್ಯಾಂಕ್‌ಗಳ ಖಾತೆಗಳು ಮತ್ತು ಹಲವು ಬ್ಯಾಂಕ್‌ಗಳಿಂದ ಈ ಖಾತೆಗೆ ಹಣ ವರ್ಗಾವಣೆಯಾಗಿದೆ. ಎರಡು ವರ್ಷಗಳಿಂದ ಈ ಖಾತೆ ಸಕ್ರಿಯವಾಗಿತ್ತು. ಸದ್ಯ ಸ್ಥಗಿತಗೊಳಿಸಲಾಗಿದೆ.

ಈ ಖಾತೆಯನ್ನು ಹೊಂದಿರುವ ಇಲ್ಲಿನ ಗೋಪನಕೊಪ್ಪದ ನಿವಾಸಿ ಇರ್ಫಾನ್ ಎಂಬವನನ್ನು ಸೈಬರ್‌ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ. 

ADVERTISEMENT

ಈ ಖಾತೆ ತೆರೆದಿರುವ ಆರಂಭದಿಂದ ಕೊನೆ ವಹಿವಾಟಿನವರೆಗೆ ನಡೆದಿರುವ ಹಣಕಾಸಿನ ವ್ಯವಹಾರದ ಸಂಪೂರ್ಣ ವಿವರವನ್ನು ನೀಡುವಂತೆ ಪೊಲೀಸರು ಬ್ಯಾಂಕ್‌ ಶಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 

ಸೈಬರ್ ವಂಚನೆಗೆ ಒಳಗಾಗಿ ಹಣ ಕಳೆದುಕೊಂಡಿದ್ದ ಪ್ರಕರಣಗಳಲ್ಲಿ ಹಲವಾರು ಮಂದಿ 1930 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ, ಈ ಖಾತೆಗೇ ಹಣ ವರ್ಗಾವಣೆ ಆಗಿರುವ ಬಗ್ಗೆ ಡಿಜಿಟಲ್ ಸಾಕ್ಷ್ಯಸಹಿತ ದೂರು ನೀಡಿದ್ದಾರೆ. 

‘ಕುಕ್ಕಿಂಗ್ ವಿತ್ ಕೇಟರಿಂಗ್’ ಹೆಸರಿನಲ್ಲಿ ಬ್ಯಾಂಕ್‌ ಆಫ್‌ ಬರೋಡಾದ ಶಾಖೆಯಲ್ಲಿ ಇರ್ಫಾನ್ ಈ ಖಾತೆ ತೆರೆದಿದ್ದರು. ಖಾತೆ ಮೂಲಕ 50ಕ್ಕೂ ಹೆಚ್ಚು ಬಾರಿ ವಿವಿಧ ಬ್ಯಾಂಕ್‌ಗಳ ಖಾತೆಗಳಿಗೆ, ವಿವಿಧ ಬ್ಯಾಂಕ್‌ಗಳ ಖಾತೆಯಿಂದ ಅದಕ್ಕೆ ಕೋಟ್ಯಂತರ ರೂಪಾಯಿ ವರ್ಗಾವಣೆಯಾಗಿದೆ. ಬೆಂಗಳೂರಿನಿಂದ ಅಲ್ಲದೇ ದೆಹಲಿ, ಮುಂಬೈ, ಒಡಿಶಾ ಸೇರಿ ಇತರ ಹೊರ ರಾಜ್ಯಗಳಿಂದ ಹತ್ತಾರು ಪ್ರಕರಣಗಳು ಈ ಖಾತೆ ವಿರುದ್ಧ ದಾಖಲಾಗಿವೆ.

‘ಆರೋಪಿ ಇರ್ಫಾನ್, ಅಕ್ರಮವಾಗಿ ಲಾಭಮಾಡಿಕೊಳ್ಳಲು ಬ್ಯಾಂಕ್‌ನಲ್ಲಿ ಖಾತೆಯನ್ನು ತೆರೆದಿದ್ದು, ಸೈಬರ್‌ ವಂಚಕರಿಗೆ ನೀಡಿದ್ದಾನೆ. ಹೀಗಾಗಿ ಆತನ ವಿರುದ್ಧ ಸೈಬರ್‌ ವಂಚನೆ ಹಾಗೂ ಐಟಿ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ. ಖಾತೆಯನ್ನು ಯಾರೆಲ್ಲ, ಎಲ್ಲೆಲ್ಲಿ ಬಳಸಿದ್ದಾರೆ ಎನ್ನುವ ವಿವರ ಸಂಗ್ರಹಿಸುತ್ತಿದ್ದು, ಇದು ಮುಖ್ಯ ಆರೋಪಿ ಸೆರೆಗೆ ನೆರವಾಗಲಿದೆ’ ಎಂದು ಸೈಬರ್ ಅಪರಾಧ ವಿಭಾಗದ ಎಸಿಪಿ ಶಿವರಾಜ್‌ ಕಟಕಭಾವಿ ಅವರು ತಿಳಿಸಿದರು.

‘ಇರ್ಫಾನ್ ಸಂಬಂಧಿಕರೂ ಈ ಪ್ರಕರಣದಲ್ಲಿ ಶಾಮೀಲಾಗಿರುವ ಶಂಕೆ ಇದೆ. ಈ ಖಾತೆಯ ಸಂಖ್ಯೆಯನ್ನು ಪುಣೆಯಲ್ಲಿರುವ ತನ್ನ ಸಂಬಂಧಿಕರಿಗೂ ನೀಡಿದ್ದ ಎಂಬುದು ವಿಚಾರಣೆಯಿಂದ ಗೊತ್ತಾಗಿದೆ. ಪುಣೆಯಲ್ಲಿ ಯಾರ‍್ಯಾರು ಈ ಖಾತೆಯನ್ನು ಬಳಸಿದ್ದಾರೆ ಎಂಬುದು ಗೊತ್ತಾಗಬೇಕಿದೆ. ಇನ್ನೂ ಯಾರೆಲ್ಲರೂ ಇದರಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನೂ ತಿಳಿಯಬೇಕಿದೆ. ತನಿಖೆ ನಡೆದಿದೆ’ ಎಂದು ತಿಳಿಸಿದರು. 

‘ಖಾತೆದಾರರ ಪತ್ತೆ ಸುಲಭವಲ್ಲ’
ಸೈಬರ್ ವಂಚನೆ ಪ್ರಕರಣದಲ್ಲಿ ಬಳಕೆಯಾಗುವ ಬ್ಯಾಂಕ್‌ ಖಾತೆಯನ್ನು ಹೊಂದಿರುವ ನೈಜ ವ್ಯಕ್ತಿಯು ಪತ್ತೆ ಆಗುವುದು ವಿರಳ. ಒಂದು ವೇಳೆ ಪತ್ತೆಯಾದರೂ ಆಧಾರ್‌ ಕಾರ್ಡ್‌ ವಿಳಾಸ ಅಥವಾ ಮೊಬೈಲ್ ಫೋನ್‌ ನಂಬರ್ ಬೇರೆ ರಾಜ್ಯಕ್ಕೆ ಸಂಬಂಧಪಟ್ಟಿರುತ್ತದೆ. ವಿಳಾಸದಲ್ಲಿ ಇರುವ ವ್ಯಕ್ತಿಗೂ, ಆತನ ಭಾವಚಿತ್ರಕ್ಕೂ ಹೋಲಿಕೆ ಆಗುವುದಿಲ್ಲ. ಶೇ 95ರಷ್ಟು ಖಾತೆಗಳ ವಿಳಾಸ ನಕಲಿಯಾಗಿರುತ್ತದೆ. ಆದರೆ, ಇರ್ಫಾನ್ ಹೆಸರಲ್ಲಿರುವ ಈ ಖಾತೆಗೆ, ಪೂರಕವಾಗಿ ಸಲ್ಲಿಕೆಯಾಗಿರುವ ಎಲ್ಲ ದಾಖಲೆಗಳು ಅಸಲಿಯಾಗಿವೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಸಹಾಯವಾಣಿ 1930ಕ್ಕೆ ಕರೆ ಮಾಡಿದಾಗ, ನೀಡಲಾಗುವ ಬ್ಯಾಂಕ್ ಖಾತೆ ಸಂಖ್ಯೆಗಳನ್ನು ಪರಿಶೀಲಿಸುತ್ತೇವೆ. ಕೆವೈಸಿ ಹೊಂದಿಕೆಯಾದ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುತ್ತೇವೆ.
– ಶಿವರಾಜ್ ಕಟಕಭಾವಿ, ಎಸಿಪಿ, ಸೈಬರ್ ಠಾಣೆ, ಹುಬ್ಬಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.