ಹುಬ್ಬಳ್ಳಿ: ನಗರದಲ್ಲಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿಯಿಂದಾಗಿ ನಾಲ್ಕೂವರೆ ತಿಂಗಳಿನಿಂದ ಸ್ಥಗಿತವಾಗಿದ್ದ ಇಲ್ಲಿನ ಉಪನಗರ ಕೇಂದ್ರ (ಹಳೇ) ಬಸ್ ನಿಲ್ದಾಣ ಬುಧವಾರದಿಂದ ಪುನರಾರಂಭವಾಗಿದೆ. ಬಂದ್ ಮಾಡಲಾಗಿದ್ದ ಬಸ್ ನಿಲ್ದಾಣದ ಎದುರಿನ ರಸ್ತೆಯನ್ನು ಚನ್ನಮ್ಮ ವೃತ್ತದಿಂದ ಹುಬ್ಬಳ್ಳಿ ಆಪ್ಟಿಕಲ್ಸ್‌ವರೆಗೆ ಮುಕ್ತಗೊಳಿಸಲಾಗಿದೆ.
ಬಸ್ ನಿಲ್ದಾಣ ಪುನರಾರಂಭ ಹಾಗೂ ಭಾಗಶಃ ರಸ್ತೆ ಮುಕ್ತಗೊಳಿಸಿರುವುದರಿಂದ ನಗರ ಪ್ರದೇಶದೊಳಗೆ ಸಂಚರಿಸುವ ಪ್ರಯಾಣಿಕರು ಹಾಗೂ ವಾಹನ ಸವಾರರು ತುಸು ನಿರಾಳರಾಗಿದ್ದಾರೆ. ಬಸ್ ನಿಲ್ದಾಣದ ಎದುರು ಆಟೊ ಸೌಲಭ್ಯ ಸಹ ಮತ್ತೆ ಆರಂಭವಾಗಿದೆ. ಇಷ್ಟುದಿನ ಚನ್ನಮ್ಮ ವೃತ್ತದಲ್ಲಿ ಏರ್ಪಡುತ್ತಿದ್ದ ಸಂಚಾರ ದಟ್ಟಣೆ ಕಡಿಮೆಯಾಗಿದೆ. ಲಕ್ಷ್ಮಿ ವೇ ಬ್ರಿಡ್ಜ್ ಬಳಿ ಹಾಗೂ ಬಸವವನ ಬಳಿ ತುಸು ಸಂಚಾರ ದಟ್ಟಣೆ ಹೆಚ್ಚಾಗಿದೆ.
ಬಸ್ ನಿಲ್ದಾಣದಲ್ಲಿ ಬೆಳಿಗ್ಗೆ ಆರಕ್ಕೆ ನಿಧಾನವಾಗಿ ಆರಂಭವಾದ ಬಸ್‌ಗಳ ಸಂಚಾರ, ಸಂಜೆ ವೇಳೆಗೆ ಅರ್ಧ ಪ್ರಮಾಣದಲ್ಲಿ ಮುಂದುವರಿದಿತ್ತು. ನಗರ ಪ್ರದೇಶದಲ್ಲಿ ಸಂಚರಿಸುವ ಬಸ್‌ಗಳ ಜೊತೆಗೆ, ಗದಗ, ವಿಜಯಪುರ, ಬಾಗಲಕೋಟೆ ಭಾಗಗಳಿಂದ ಬರುವ ಬಸ್‌ಗಳು ಮಾತ್ರ ನಿಲ್ದಾಣ ಪ್ರವೇಶಿಸಿದವು. ಸಂಚಾರ ದಟ್ಟಣೆಯಾಗುವ ಹಿನ್ನೆಲೆಯಲ್ಲಿ ಮಂಗಳೂರು, ಕಾರವಾರ ಭಾಗಗಳಿಂದ ಬರುವ ಬಸ್‌ಗಳಿಗೆ ನಿಷೇಧ ಹೇರಲಾಗಿದೆ.
‘ಮುಕ್ತಗೊಳಿಸಿದ ರಸ್ತೆಯಲ್ಲಿ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಸಾರಿಗೆ ಬಸ್‌ಗಳ ಜೊತೆಗೆ, ಬೇಂದ್ರೆ ಬಸ್, ಕಾರು, ಆಟೊ, ಬೈಕ್ ಸೇರಿದಂತೆ ಲಘು ವಾಹನಗಳು ಸಂಚರಿಸುತ್ತಿವೆ. ಇದು ಸಹ ಪ್ರಾಯೋಗಿಕ ಸಂಚಾರವಾಗಿದ್ದು, ಪರಿಸ್ಥಿತಿ ಪರಿಶೀಲಿಸಿ ಹೆಚ್ಚಿಗೆ ಸಾರಿಗೆ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು. ರಸ್ತೆ ಮುಕ್ತಗೊಳಿಸಿದ್ದರಿಂದ ಕೆಲವು ಕಡೆ ಸಂಚಾರ ದಟ್ಟಣೆ ಎದುರಾಗುತ್ತಿರುವುದು ಗಮನಕ್ಕೆ ಬಂದಿದೆ’ ಎಂದು ಪೊಲೀಸ್ ಸಿಬ್ಬಂದಿ ತಿಳಿಸಿದರು.
‘ನಾಲ್ಕೂವರೆ ತಿಂಗಳಿನಿಂದ ಆದಾಯವಿಲ್ಲದೆ ಪರದಾಡುತ್ತಿದ್ದೆವು. ಬಸ್ ನಿಲ್ದಾಣ ಪುನರಾರಂಭ ಆಗಿರುವುದರಿಂದ ಪ್ರಯಾಣಿಕರ ಓಡಾಟ ಮತ್ತೆ ಶುರುವಾಗಿದೆ. ಆಟೊಗಳಿಗೆ ಬಾಡಿಗೆ ಸಿಗುತ್ತಿದೆ. ಆದಷ್ಟು ಬೇಗ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ಆಟೊ ಚಾಲಕ ಶಂಕರ ನಂದನಗಡ ಆಗ್ರಹಿಸಿದರು.
‘ಜಿಲ್ಲಾಡಳಿತ, ಗುತ್ತಿಗೆ ಪಡೆದ ಕಂಪನಿ ಹಾಗೂ ಜನಪ್ರತಿನಿಧಿಗಳು ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ನಾಲ್ಕು ತಿಂಗಳಿನಲ್ಲಿ ನಿಗದಿತ ಕಾಮಗಾರಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿ, ಪ್ರಮುಖ ರಸ್ತೆಯನ್ನು ಹಾಗೂ ಬಸ್ ನಿಲ್ದಾಣವನ್ನು ಬಂದ್ ಮಾಡಿಸಿದ್ದರು. ಆದರೆ, ಮೇಲ್ಸೇತುವೆ ಸಂಬಂಧಿಸಿ ಇನ್ನೂ ಶೇ 30ರಷ್ಟು ಕಾಮಗಾರಿ ಬಾಕಿಯಿದೆ. ರಸ್ತೆ ಹಾಗೂ ಗಟಾರು ಕೆಲಸ ನಡೆದೇ ಇಲ್ಲ. ಈ ಭಾಗದಲ್ಲಿ ನಡೆಯುತ್ತಿರುವ ವ್ಯಾಪಾರ ವಹಿವಾಟು ಸಂಪೂರ್ಣ ಬಂದ್ ಆಗಿದೆ’ ಎಂದು ವಾಣಿಜ್ಯ ಮಳಿಗೆಯೊಂದರ ಮಾಲೀಕ ರಾಜೇಂದ್ರ ಜೆಸ್ವಾಲ್ ಅಸಮಾಧಾನ ವ್ಯಕ್ತಪಡಿಸಿದರು.
ನಾಲ್ಕೂವರೆ ತಿಂಗಳಿನಿಂದ ಸ್ಥಗಿತವಾಗಿದ್ದ ಬಸ್ ನಿಲ್ದಾಣ 300 ಮೀಟರ್ ರಸ್ತೆ ಮಾತ್ರ ಸಂಚಾರಕ್ಕೆ ಮುಕ್ತ ಏಕಮುಖ ಸಂಚಾರ, ಲಘು ವಾಹನಗಳಿಗೆ ಮಾತ್ರ ಪ್ರವೇಶ
ಸ್ಥಗಿತವಾಗಿದ್ದ ಉಪನಗರ ಕೇಂದ್ರ ಬಸ್ ನಿಲ್ದಾಣ ಪುನರಾರಂಭವಾಗಿದೆ. ನಗರ ಹಾಗೂ ಉಪನಗರ ಸಾರಿಗೆ ಬಸ್‌ಗಳ ಸಂಚಾರವನ್ನು ಹಂತಹಂತವಾಗಿ ಹೆಚ್ಚಿಸಲಾಗುವುದುಪ್ರಿಯಾಂಗಾ ಎಂ. ವ್ಯವಸ್ಥಾಪಕ ನಿರ್ದೇಶಕಿ ವಾಕರಸಾಸಂ
ಭಾಗಶಃ ರಸ್ತೆ ಮುಕ್ತಗೊಳಿಸಿದ್ದು ಲಘು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಮೇಲ್ಸೇತುವೆಯ ಬಾಕಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸೂಚಿಸಲಾಗಿದೆಮಹೇಶ ಟೆಂಗಿನಕಾಯಿ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.