
ಹುಬ್ಬಳ್ಳಿ: ‘ಎರಡೂವರೆ ವರ್ಷದ ನಂತರ ಅಧಿಕಾರ ಹಸ್ತಾಂತರದ ಒಪ್ಪಂದವಾಗಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಟ್ಟ ಮಾತಿನಂತೆ ನಡೆದುಕೊಂಡು, ಸುಗಮ ಆಡಳಿತಕ್ಕೆ ಸಹಕರಿಸಬೇಕು’ ಎಂದು ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಹೇಳಿದರು.
‘ಉತ್ತಮ ಆಡಳಿತ ನೀಡಲಿ ಎಂಬ ಉದ್ದೇಶದಿಂದ ರಾಜ್ಯದ ಜನ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ನೀಡಿದ್ದಾರೆ. ಆದರೆ, ಮುಖ್ಯಮಂತ್ರಿ ಸ್ಥಾನಕ್ಕಾಗಿ ಡೊಂಬರಾಟ ನಡೆದಿದೆ. ಅಭಿವೃದ್ಧಿಯನ್ನು ನಿರ್ಲಕ್ಷಿಸಿರುವ ರಾಜ್ಯ ಸರ್ಕಾರ ಜನರಿಗೆ ವಂಚನೆ ಮಾಡುತ್ತಿದೆ’ ಎಂದು ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
‘ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವಂತೆ ರೈತರ ಹೋರಾಟ ತೀವ್ರಗೊಂಡಿದೆ. ಅತಿವೃಷ್ಟಿಯಿಂದ ಬೆಳೆಹಾನಿಯಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಸಿದ್ದರಾಮಯ್ಯ ಅನುಭವಿ ರಾಜಕಾರಣಿ. ಉತ್ತಮ ಆಡಳಿತ ಕೊಡುವ ಅವಕಾಶವನ್ನು ಕೈಚೆಲ್ಲಿದ್ದಾರೆ’ ಎಂದು ಟೀಕಿಸಿದರು.
‘ಗ್ಯಾರಂಟಿ ಹೆಸರು ಹೇಳಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಆದರೆ, ಆ ಯೋಜನೆಗಳನ್ನು ಸಹ ಸರಿಯಾಗಿ ಅನುಷ್ಠಾನಗೊಳಿಸುತ್ತಿಲ್ಲ. ಅನುದಾನ ಕೊರತೆಯಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಅನುದಾನ ನೀಡುತ್ತಿಲ್ಲ ಎಂದು ಆ ಪಕ್ಷದ ಶಾಸಕರೇ ಧ್ವನಿ ಎತ್ತಿದ್ದಾರೆ’ ಎಂದು ಹೇಳಿದರು.
ರಾಜ್ಯ ಸರ್ಕಾರದ ದುರಾಡಳಿತ, ರೈತ ವಿರೋಧಿ ನೀತಿ ಖಂಡಿಸಿ ಇದೇ 27, 28ರಂದು ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಹೋರಾಟ ನಡೆಸಲಾಗುವುದು ಎಂದರು.
ರವಿ ನಾಯಕ, ಎಸ್.ಕೆ. ಆದಪ್ಪನವರ, ಪ್ರಶಾಂತ ಹಾವಣಗಿ, ದೀಪಕ್ ಪತ್ರಕಾಗೋಷ್ಠಿಯಲ್ಲಿ ಇದ್ದರು.
ನನ್ನ ಅನುಭವ ಹಿರಿತನವನ್ನು ವರಿಷ್ಠರು ಪರಿಗಣಿಸಲಿದ್ದಾರೆ. ಟಿಕೆಟ್‌ಗಾಗಿ ನನ್ನ ಹಾಗೂ ಎಸ್.ವಿ.ಸಂಕನೂರ ನಡುವೆ ಮಾತ್ರ ಪೈಪೋಟಿ ಇದೆಲಿಂಗರಾಜ ಪಾಟೀಲ ಅಧ್ಯಕ್ಷ ಬಿಜೆಪಿ ರಾಜ್ಯ ಶಿಸ್ತು ಸಮಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.