
ಧಾರವಾಡ: ‘ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಅ. 31 ಮತ್ತು ನ. 1ರಂದು ವಿವಿಧ ಕಾರ್ಯಕ್ರಮಗಳು ನಡೆಯಲಿವೆ’ ಎಂದು ಮೇಯರ್ ಜ್ಯೋತಿ ಪಾಟೀಲ ತಿಳಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅ. 31ರಂದು ಧಾರವಾಡದಲ್ಲಿ ಭುವನೇಶ್ವರಿ ಮಾತೆಯ ಭಾವಚಿತ್ರದ ಮೆರವಣಿಗೆ ನಡೆಯಲಿದೆ. ಶಿವಾಜಿ ವೃತ್ತದಿಂದ ಮಧ್ಯಾಹ್ನ 3.30ಕ್ಕೆ ಹೊರಟು ಮರಾಠಾ ಕಾಲೊನಿ ಮಾರ್ಗವಾಗಿ ಹಾಯ್ದು ಪಾಲಿಕೆ ಕಚೇರಿಗೆ ತಲುಪಲಿದೆ’ ಎಂದರು.
‘ಸಂಜೆ 5ಕ್ಕೆ ಕಡಪಾ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ವಿಧಾನಪರಿಷತ್ ಸದಸ್ಯರಾಗಿ ಹೆಚ್ಚುಬಾರಿ ಆಯ್ಕೆಯಾಗಿ ದಾಖಲೆ ಮಾಡಿರುವ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಸನ್ಮಾನಿಸಲಾಗುವುದು’ ಎಂದು ಹೇಳಿದರು.
‘ಹಳೇ ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮಿ ಮಠದಲ್ಲಿ ನ. 1ರಂದು ಬೆಳಿಗ್ಗೆ 8ಕ್ಕೆ ವೇದಿಕೆ ಕಾರ್ಯಕ್ರಮ ನಡೆಯಲಿದೆ. 9ಕ್ಕೆ ಭುವನೇಶ್ವರಿ ಮಾತೆಯ ಭಾವಚಿತ್ರದ ಮೆರವಣಿಗೆ ನಡೆಯಲಿದೆ. ಸಿದ್ಧಾರೂಢ ಸ್ವಾಮಿ ಮಠದಿಂದ ಹೊರಟು ಸಂಗೊಳ್ಳಿ ರಾಯಣ್ಣ, ಚನ್ನಮ್ಮ ವೃತ್ತದ ಮೂಲಕ ಹಾಯ್ದು ಇಂದಿರಾ ಗಾಜಿನಮನೆ ತಲುಪಲಿದೆ. ಪ್ರಚಾರ ಮತ್ತು ಸಂಘಟನೆ, ಮೆರವಣಿಗೆ ಸಹಿತ ವಿವಿಧ ಕಾರ್ಯಕ್ರಮಗಳ ಆಯೋಜನೆಗೆ ಸಮಿತಿಗಳನ್ನು ರಚಿಸಲಾಗಿದೆ’ ಎಂದು ತಿಳಿಸಿದರು.
‘70 ಸಾಧಕರಿಗೆ ಧೀಮಂತ ಪುರಸ್ಕಾರ: 23 ವಿವಿಧ ಕ್ಷೇತ್ರಗಳ 70 ಸಾಧಕರಿಗೆ ಧೀಮಂತ ಪುರಸ್ಕಾರ ಪ್ರದಾನ ಮಾಡಲಾಗುವುದು. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಾಧನೆ ಮೆರೆದ ಪ್ರತಿಭಾವಂತ ಮಕ್ಕಳಿಗೂ ಈ ಬಾರಿ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.
‘ನಗರದ ರಸ್ತೆಗಳ ಗುಂಡಿಗಳನ್ನು ಮುಚ್ಚಲು ಕ್ರಮ ವಹಿಸಲಾಗುವುದು. ರಾಜ್ಯೋತ್ಸವಕ್ಕೆ ನಗರವನ್ನು ಸಜ್ಜುಗೊಳಿಸಲಾಗುವುದು’ ಎಂದು ಪಾಲಿಕೆ ಆಯುಕ್ತ ರುದ್ರೇಶ ಘಾಳಿ ತಿಳಿಸಿದರು.
ಕನ್ನಡ ಫಲಕ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈಚೆಗೆ ಹೊರಡಿಸಿರುವ ಆದೇಶ (ಶೇ 60 ಕನ್ನಡ ಮತ್ತು 40 ಇತರ ಭಾಷೆ) ಪಾಲನೆಗೆ ಕ್ರಮ ವಹಿಸಲಾಗುವುದು. ಈಗಾಗಲೇ ವಲಯ ಕಚೇರಿಗಳಿಗೂ ಸೂಚನೆ ನೀಡಲಾಗಿದೆ’ ಎಂದು ಸಭಾ ನಾಯಕ ಈರೇಶ ಅಂಚಟಗೇರಿ ತಿಳಿಸಿದರು.
ಉಪಮೇಯರ್ ಸಂತೋಷ ಚವಾಣ್, ಶಂಕರ ಶೇಳಕೆ, ಶಂಭುಗೌಡ ಸಾಲಮನಿ, ಶಿವು ಹಿರೇಮಠ ಸುದ್ದಿಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.