ADVERTISEMENT

ಹುಬ್ಬಳ್ಳಿ– ಧಾರವಾಡ ಮಹಾನಗರ | ಆಸ್ತಿಗಳ 3ಡಿ ಜಿಐಎಸ್‌ ಸರ್ವೆಗೆ ಮುಂದಾದ ಪಾಲಿಕೆ

ಜೆನೆಸಿಸ್ ಇಂಟರ್‌ ನ್ಯಾಷನಲ್‌ ಕಂಪನಿಗೆ ಟೆಂಡರ್; ₹23.5 ಕೋಟಿ ವೆಚ್ಚ

ಸತೀಶ ಬಿ.
Published 11 ಮಾರ್ಚ್ 2025, 5:15 IST
Last Updated 11 ಮಾರ್ಚ್ 2025, 5:15 IST
ಹುಬ್ಬಳ್ಳಿಯಲ್ಲಿನ ಮಹಾನಗರ ಪಾಲಿಕೆ ಕಚೇರಿ
ಹುಬ್ಬಳ್ಳಿಯಲ್ಲಿನ ಮಹಾನಗರ ಪಾಲಿಕೆ ಕಚೇರಿ   

ಹುಬ್ಬಳ್ಳಿ: ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆಯ ಆಸ್ತಿಗಳನ್ನು ನಿಖರವಾಗಿ ಗುರುತಿಸಿ, ಅವುಗಳಿಂದ ಸಮರ್ಪಕವಾಗಿ ತೆರಿಗೆ ಸಂಗ್ರಹಿಸುವ ದೃಷ್ಟಿಯಿಂದ 3ಡಿ ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್‌) ಸರ್ವೆಗೆ ಪಾಲಿಕೆ ಮುಂದಾಗಿದೆ.

ಸರ್ವೆಗೆ ₹23.5 ಕೋಟಿ ವೆಚ್ಚ ಮಾಡಲಾಗುತ್ತಿದ್ದು, ಮುಂಬೈ ಮೂಲದ ಜೆನೆಸಿಸ್ ಇಂಟರ್‌ ನ್ಯಾಷನಲ್‌ ಕಂಪನಿ ಟೆಂಡರ್ ಪಡೆದಿದೆ. ಸರ್ವೆ ಕಾರ್ಯಕ್ಕೆ ಪಾಲಿಕೆಯಿಂದ ಈಗಾಗಲೇ ಕಾರ್ಯಾದೇಶ ಸಹ ನೀಡಲಾಗಿದೆ.

ಪಾಲಿಕೆಯ ಆಸ್ತಿ ತೆರಿಗೆ ಜಾಲದಲ್ಲಿ ಸದ್ಯ ಅಧಿಕೃತವಾಗಿ 3.39 ಲಕ್ಷ ಆಸ್ತಿಗಳು ಇವೆ. ಆದರೆ, ನಳ ಸಂಪರ್ಕ, ಹೆಸ್ಕಾಂನಿಂದ ವಿದ್ಯುತ್ ಸಂಪರ್ಕ ಪಡೆದಿರುವುದರ ಆಧಾರದ ಮೇಲೆ ಒಟ್ಟು 4.50 ಲಕ್ಷ ಆಸ್ತಿಗಳು ಇವೆ ಎಂದು ಅಂದಾಜಿಸಲಾಗಿದೆ.

ADVERTISEMENT

3ಡಿ ಜಿಐಎಸ್ ಮ್ಯಾಪಿಂಗ್‌ ಮಾಡಿದರೆ ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದ ಆಸ್ತಿಗಳನ್ನು ಸುಲಭವಾಗಿ ಗುರುತಿಸಬಹುದು. ಸದ್ಯ ಪಾಲಿಕೆಗೆ ಆಸ್ತಿ ತೆರಿಗೆಯಿಂದ ₹140 ಕೋಟಿ ಆದಾಯ ಬರುತ್ತಿದೆ. ಸರ್ವೆ ಆದ ನಂತರ ಪ್ರತಿ ವರ್ಷ ₹350 ಕೋಟಿಯಿಂದ ₹400 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ಅಧಿಕಾರಿಗಳು.

‘ಟೆಂಡರ್ ಪಡೆದಿರುವ ಕಂಪನಿಯ ಸಿಬ್ಬಂದಿ ಈಗಾಗಲೇ ದಾಖಲೆ, ಅಂಕಿ ಅಂಶ ಸಂಗ್ರಹ, ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ಪಡೆಯುವ ಕೆಲಸ ಆರಂಭಿಸಿದ್ದಾರೆ. ನಂತರ ಸೆನ್ಸರ್ ಅಳವಡಿಸಿದ ವಿಮಾನಗಳ ಮೂಲಕ ಏರಿಯಲ್ ಸರ್ವೆ ಮಾಡಲಾಗುತ್ತದೆ. ಇನ್ನು 15 ದಿನಗಳಲ್ಲಿ ಅವಳಿ ನಗರದ ಮೇಲೆ ವಿಮಾನಗಳು ಹಾರಾಟ ನಡೆಸಿ ಸಮೀಕ್ಷೆ ನಡೆಸಲಿವೆ’ ಎಂದು ಪಾಲಿಕೆ ಉಪ ಆಯುಕ್ತ (ಅಭಿವೃದ್ಧಿ) ವಿಜಯಕುಮಾರ್ ತಿಳಿಸಿದರು.

‘ಸಣ್ಣ ಸಣ್ಣ ಗಲ್ಲಿಗಳಲ್ಲಿನ ಆಸ್ತಿಗಳನ್ನು ದ್ವಿಚಕ್ರ ವಾಹನಗಳು, ಅಗಲವಾದ ರಸ್ತೆಗಳಲ್ಲಿ ಸ್ಕಾರ್ಪಿಯೋ, ಬೊಲೆರೊದಂತಹ ವಾಹನಗಳಲ್ಲಿ 3ಡಿ ಪನೋರಮಾ ವೀವ್‌ ಸೆನ್ಸರ್‌ ಮೂಲಕ ಕ್ಯಾಪ್ಚರ್ ಮಾಡಲಾಗುತ್ತದೆ. ನಂತರ ಅವಳಿ ನಗರದ 3ಡಿ ಮಾದರಿ ರೂಪಿಸಲಾಗುತ್ತದೆ’ ಎಂದರು.

‘ಅವಳಿ ನಗರದ ಪ್ರತಿ ಮನೆಗೂ ಜಿಐಎಸ್‌ ತಾಂತ್ರಿಕ ತಂಡ ಮತ್ತು ಮಹಾನಗರ ಪಾಲಿಕೆ ಸಿಬ್ಬಂದಿ ತೆರಳಿ ಮೊಬೈಲ್ ಆ್ಯಪ್‌ನಲ್ಲಿ ಆಸ್ತಿಗಳ ಮಾದರಿ, ಮಾಲೀಕರ ಹೆಸರು, ಮೊಬೈಲ್‌ ಸಂಖ್ಯೆ ಮತ್ತು ಇನ್ನಿತರ ಮಾಹಿತಿಯನ್ನು ದಾಖಲಿಸುತ್ತದೆ. ಸ್ಮಾರ್ಟ್ ಸಿಟಿಯ ಐ–ಸಿಸಿಸಿ ಕಟ್ಟಡದಲ್ಲಿ ಜಿಐಎಸ್ ಸರ್ವೆಯ ಕಚೇರಿ ತೆರೆಯಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಮೈಸೂರು ಮಹಾನಗರ ಪಾಲಿಕೆಯಲ್ಲಿ ವಾರ್ಷಿಕ ₹240 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗುತ್ತದೆ. ಆದರೆ, ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಎಂಬ ಹೆಗ್ಗಳಿಗೆ ಹೊಂದಿರುವ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಆಸ್ತಿ ತೆರಿಗೆ ಸಂಗ್ರಹದಲ್ಲಿ ಮೈಸೂರಿಗಿಂತ ಹಿಂದೆ ಇದೆ. ತೆರಿಗೆ ಪಾವತಿಸದೆ ಆಸ್ತಿಯನ್ನು ಅನುಭವಿಸುವುದು, ಸರಿಯಾದ ಮಾಹಿತಿ ನೀಡದೆ ಕಡಿಮೆ ತೆರಿಗೆ ಪಾವತಿ ಮಾಡಿದ್ದನ್ನು ಸರ್ವೆ ಮೂಲಕ ಪತ್ತೆ ಮಾಡಲಾಗುತ್ತದೆ. ಇದರಿಂದ ಪಾಲಿಕೆಯ ಆದಾಯ ಹೆಚ್ಚುತ್ತದೆ’ ಎಂದರು.

ಜಿಐಎಸ್‌ ಸರ್ವೆಯಿಂದ ಪಾಲಿಕೆಯ ಆರ್ಥಿಕ ಸಬಲೀಕರಣ ಸಾಧ್ಯ. ಸರ್ವೆ ಕಾರ್ಯವನ್ನು ಪ್ರತಿ ಹಂತದಲ್ಲಿ ಪರಿಶೀಲನೆ ನಡೆಸಬೇಕು. ಎಲ್ಲ ಕಾರ್ಯವನ್ನು ಅಧಿಕಾರಿಗಳ ಮೇಲೆ ಬಿಡದೆ ಪರಿಶೀಲನೆ ಸಮಿತಿ ರಚಿಸಬೇಕು
ಈರೇಶ ಅಂಚಟಗೇರಿ ಸದಸ್ಯ ಹು–ಧಾ ಮಹಾನಗರ ಪಾಲಿಕೆ

ಅಭಿವೃದ್ಧಿಯ ಅಸಮಾನತೆ ನಿವಾರಣೆ

ಜಿಐಎಸ್‌ ಸರ್ವೆಯ ಮುಖ್ಯ ಉದ್ದೇಶ ಆಸ್ತಿ ತೆರಿಗೆ ಸಂಗ್ರಹ. ಅದರ ಜತೆಗೆ ಪಾಲಿಕೆ ವ್ಯಾಪ್ತಿಯಲ್ಲಿ ಅಭಿವೃದ್ಧಿಯ ಅಸಮಾನತೆ ನಿವಾರಿಸಲು ಇದರಿಂದ ಸಹಾಯವಾಗುತ್ತದೆ ಎಂದು ವಿಜಯಕುಮಾರ್‌ ತಿಳಿಸಿದರು. ಸರ್ವೆ ಆದ ನಂತರ ಒಂದೇ ಕ್ಲಿಕ್‌ನಲ್ಲಿ ಯಾವ ವಾರ್ಡ್‌ನಲ್ಲಿ ಯಾವ ಕಟ್ಟಡ ಇದೆ ಮುಖ್ಯರಸ್ತೆ ಒಳ ರಸ್ತೆ ವಿದ್ಯುತ್ ಕಂಬ ಉದ್ಯಾನ ಸ್ಮಶಾನ ಕೊಳೆಗೇರಿ ಎಷ್ಟಿವೆ ಯಾವ ರಸ್ತೆ ಒಳಚರಂಡಿಯನ್ನು ಯಾವಾಗ ದುರಸ್ತಿ ಮಾಡಲಾಗಿತ್ತು ಎಂಬುದನ್ನು ತಿಳಿಯಬಹುದು. ಅನುದಾನ ಹಂಚಿಕೆ ಮಾಡುವಾಗ ಒಂದೇ ಕಡೇ ಹಂಚಿಕೆಯಾಗುವುದು ತಪ್ಪುತ್ತದೆ ಎಂದರು.  ವಾರ್ಡ್‌ ಹಂತದಲ್ಲಿ ಸಹ ಸಭೆಗಳನ್ನು ನಡೆಸಿ ಮಹಾನಗರ ಪಾಲಿಕೆ ಸದಸ್ಯರಿಗೆ ಈ ಬಗ್ಗೆ ಮಾಹಿತಿ ನೀಡಲಾಗುವುದು. ವಾರ್ಡ್‌ಗಳಲ್ಲಿ ಹೆಚ್ಚು ತೆರಿಗೆ ಸಂಗ್ರಹವಾದರೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಮೊದಲ ಬಾರಿಗೆ 3ಡಿ ಜಿಐಎಸ್ ಸರ್ವೆ

ರಾಜ್ಯದಲ್ಲಿ ಇದೇ ಮೊದಲು ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯಲ್ಲಿ ಆಸ್ತಿಯಗಳ 3ಡಿ ಜಿಐಎಸ್‌ ಸರ್ವೆ ಮಾಡಲಾಗುತ್ತಿದೆ. ಬೆಂಗಳೂರಿನ ಬಿಬಿಎಂಪಿಯ ಒಂದು ವಾರ್ಡ್‌ನಲ್ಲಿ ಪ್ರಾಯೋಗಿಕವಾಗಿ 2ಡಿ ಸರ್ವೆ ಮಾಡಲಾಗಿತ್ತು ಎನ್ನುತ್ತಾರೆ ಅಧಿಕಾರಿಗಳು. 15 ತಿಂಗಳಲ್ಲಿ ಸರ್ವೆ ಕಾರ್ಯ ಪೂರ್ಣಗೊಳ್ಳಲಿದೆ. ಟೆಂಡರ್ ಪಡೆದಿರುವ ಜೆನೆಸಿಸ್‌ ಕಂಪನಿಯ ಕೇಂದ್ರ ಕಚೇರಿ ಮುಂಬೈನಲ್ಲಿದೆ. ಕಂಪನಿ ಈಗಾಗಲೇ ದುಬೈ ಲ್ಯಾಂಡ್ ಮ್ಯಾಪಿಂಗ್ ವಾರಾಣಸಿಯ 3ಡಿ ಡಿಜಿಟಲ್ ಮ್ಯಾಪಿಂಗ್ ಮಾಡಿದೆ. 3ಡಿ ಜಿಐಎಸ್‌ ಸರ್ವೆಯಲ್ಲಿ ಕಂಪನಿ ಜಾಗತಿಕವಾಗಿ ಹೆಸರು ಮಾಡಿದ್ದು ಲಿಡಾರ್ ಸೆನ್ಸರ್‌ ಇರುವ ನಾಲ್ಕು ವಿಮಾನಗಳನ್ನು ಹೊಂದಿದೆ ಎಂದು ಮಾಹಿತಿ ನೀಡಿದರು. 2011ರ ಜನಗಣತಿ ಪ್ರಕಾರ ಮಹಾನಗರ ಪಾಲಿಕೆ ವ್ಯಾಪ್ತಿ 202 ಚದರ ಕಿ.ಮೀ ಇದೆ. ಆದರೆ ಹುಡಾ ಪ್ರಕಾರ 400 ಚ.ಕಿ.ಮೀ ಇದೆ. ಸರ್ವೆ ಆದ ಬಳಿಕ ಪಾಲಿಕೆ ವ್ಯಾಪ್ತಿಯ ನಿಖರ ಮಾಹಿತಿ ತಿಳಿಯಲಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.