ADVERTISEMENT

ಹುಬ್ಬಳ್ಳಿ | ಅಡುಗೆ ಅನಿಲ‌ ಸೋರಿಕೆಯಿಂದ ಅಗ್ನಿ ಅವಘಡ: ನಾಲ್ವರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 7:58 IST
Last Updated 24 ಜುಲೈ 2025, 7:58 IST
   

ಹುಬ್ಬಳ್ಳಿ: ನಗರದ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಕ್ತಿಕಾಲೊನಿಯ ಕಾರುಣ್ಯ ಅಪಾರ್ಟ್ ಮೆಂಟ್ 2ನೇ ಮಹಡಿಯಲ್ಲಿನ ಮನೆಯಲ್ಲಿ ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ಅಡುಗೆ ಅನಿಲ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡ ಪರಿಣಾಮ ನಾಲ್ವರು ಗಾಯಗೊಂಡಿದ್ದಾರೆ.

ಘಟನೆಯಲ್ಲಿ ಮಹಾಂತೇಶ ಬಳ್ಳಾರಿ (40) ಅವರಿಗೆ ಶೇ 15ರಷ್ಟು, ಅವರ ಪತ್ನಿ ಗಂಗಮ್ಮ ಬಳ್ಳಾರಿ(38) ಅವರಿಗೆ ಶೇ 65ರಷ್ಟು, ಮಕ್ಕಳಾದ ಕಾರಣ್ಯ ಎಂ. ಬಳ್ಳಾರಿಗೆ (9) ಶೇ 8ರಷ್ಟು ಹಾಗೂ ಮನೋರಂಜನ್ ಬಳ್ಳಾರಿಗೆ (7) ಶೇ13ರಷ್ಟು ಸುಟ್ಟ ಗಾಯಗಳಾಗಿವೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಗುರುವಾರ‌ ಸುದ್ದಿಗಾರರಿಗೆ ತಿಳಿಸಿದರು.

'ರಾತ್ರಿ ಕುಟುಂಬದವರು ಮಲಗಿದ್ದಾಗ ಅಡುಗೆ ಅನಿಲ ಸೋರಿಕೆಯಾಗಿದೆ. ಮೊಬೈಲ್ ಫೋನ್ ಆನ್ ಮಾಡಿದಾಗ ಬೆಂಕಿ ಹೊತ್ತಿಕೊಂಡಿದೆ ಎಂಬುದಾಗಿ ತಿಳಿದುಬಂದಿದೆ. ಘಟನೆ ಕುರಿತಾಗಿ ಗಂಗಮ್ಮನ ಕುಟುಂಬದವರಲ್ಲಿ ಅನುಮಾನವಿದೆ. ಹೆಚ್ಚು ಗಾಯಗೊಂಡಿರುವ ಗಂಗಮ್ಮ ಹೇಳಿಕೆ ನೀಡುವ ಸ್ಥಿತಿಯಲ್ಲಿದ್ದರೆ ಅವರಿಂದ ಮಾಹಿತಿ ಪಡೆಯಲಾಗುವುದು' ಎಂದರು.

ADVERTISEMENT

ಪತಿ ಹಾಗೂ ಕುಟುಂಬದವರಿಂದ ಕೃತ್ಯ ಆರೋಪ:

'ಮಹಾಂತೇಶ ಹಾಗೂ ಗಂಗಮ್ಮ ಇಬ್ಬರೂ ಶಿಕ್ಷಕರಾಗಿದ್ದು, ಆಗಾಗ ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು.‌ ಮಹಾಂತೇಶ, ಪತ್ನಿ‌ ಮೇಲೆ ಹಲ್ಲೆ ನಡೆಸುತ್ತಿದ್ದ. ಕುಟುಂಬದವರೊಂದಿಗೆ ಸೇರಿಕೊಂಡು ಪತ್ನಿ ಕೊಲೆಗೆ ಯತ್ನಿಸಿದ್ದಾನೆ' ಎಂದು ಗಂಗಮ್ಮನ ಕುಟುಂಬದವರು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.