ADVERTISEMENT

ಹುಬ್ಬಳ್ಳಿ: RTI ಹೆಸರಲ್ಲಿ ಬೆದರಿಕೆಯೊಡ್ಡಿ ಹಣಕ್ಕೆ ಬೇಡಿಕೆ- ಐವರ ಬಂಧನ

ಆರ್‌ಟಿಐ ಕಾರ್ಯಕರ್ತರ ಹೆಸರಲ್ಲಿ ಕೃತ್ಯ: ₹1.5 ಕೋಟಿ ನೀಡಲು ಕೋ– ಆಪ್‌ರೇಟಿವ್ ಸೊಸೈಟಿಗೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 4:44 IST
Last Updated 7 ನವೆಂಬರ್ 2025, 4:44 IST
<div class="paragraphs"><p>ಬಂಧನ (ಸಾಂದರ್ಭಿಕ ಚಿತ್ರ)</p></div>

ಬಂಧನ (ಸಾಂದರ್ಭಿಕ ಚಿತ್ರ)

   

ಹುಬ್ಬಳ್ಳಿ: ‘ಆರ್‌ಟಿಐ ಕಾರ್ಯಕರ್ತರ ಹೆಸರಿನಲ್ಲಿ ಕೋ–ಆಪ್‌ರೇಟಿವ್ ಸೊಸೈಟಿ  ವ್ಯವಸ್ಥಾಪಕರಿಗೆ ಬೆದರಿಕೆಯೊಡ್ಡಿ ₹1.5 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಹು–ಧಾ ಮಹಾನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದರು.

‘ಆರೋಪಿಗಳಾದ ಗದಗ– ಬೆಟಗೇರಿಯ ಮಂಜುನಾಥ ಹದ್ದಣ್ಣವರ, ಮುಂಡಗೋಡಿನ ವೀರೇಶ ಲಿಂಗದಾಳ, ಮಹಾದೇಶ್ವರ ಲಿಂಗದಾಳ, ಮಹಾಬಲೇಶ್ವರ ಮಂಕಾಳ ಶಿರೂರಕರ್, ಶಿವಪ್ಪ ಬೊಮ್ಮನಳ್ಳಿ ಅವರನ್ನು ಬಂಧಿಸಲಾಗಿದೆ. ನ.5ರಂದು ಗೋಕುಲ ರಸ್ತೆಯ ಕೇಂದ್ರ ಬಸ್ ನಿಲ್ದಾಣದ ಬಳಿ ₹1.70 ಲಕ್ಷ ಪಡೆಯುವಾಗ ಪೊಲೀಸರು ದಾಳಿ ಮಾಡಿ ಇವರನ್ನು ಬಂಧಿಸಿ, ಹಣ ವಶಪಡಿಸಿಕೊಂಡಿದ್ದಾರೆ. ಇನ್ನೂ ನಾಲ್ವರಿಗಾಗಿ ಶೋಧ ನಡೆದಿದೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ADVERTISEMENT

ಪ್ರಕರಣದ ಹಿನ್ನೆಲೆ: ‘ಗೋಕುಲ ರಸ್ತೆಯ ಸಮೃದ್ಧಿ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿಯಲ್ಲಿ ಮಹಿಳಾ ಕೆಲಸಗಾರರನ್ನು ಮುಂದಿಟ್ಟುಕೊಂಡು ವ್ಯವಹಾರ ಮಾಡಲಾಗುತ್ತಿದೆ. ಮೆಚ್ಯುರಿಟಿ ಹಣವನ್ನು ಜನರಿಗೆ ಸರಿಯಾಗಿ ನೀಡುತ್ತಿಲ್ಲ. ಈ ಕುರಿತು ದಾಖಲೆಗಳಿವೆ. ನಮಗೆ ₹1.5 ಕೋಟಿ ನೀಡಿದರೆ ಬಿಡುತ್ತೇವೆ. ನಮಗೆ ದಲಿತ ಸಂಘಟನೆ ಹಾಗೂ ಶಾಸಕರ ಬೆಂಬಲವಿದೆ’ ಎಂದು ಸೊಸೈಟಿಯ ವ್ಯವಸ್ಥಾಪಕ ಮಂಜುನಾಥ ಸೊನ್ನದ ಅವರಿಗೆ ಆರೋಪಿಗಳು ಬೆದರಿಕೆ ಹಾಕಿದ್ದರು’ ಎಂದರು.

‘ಸೊಸೈಟಿಯ ಸೇಲ್ಸ್ ವಿಭಾಗದ ಮುಖ್ಯಸ್ಥ ಭರಣೀಧರ್ ಪಿ.ಕೆ. ಅವರು ನೀಡಿದ ದೂರಿನ ಅನ್ವಯ ಗೋಕುಲ ರಸ್ತೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ’ ಎಂದು ತಿಳಿಸಿದರು.

ಎಸಿಪಿ ಶಿವಪ್ರಕಾಶ ನಾಯ್ಕ್‌, ಗೋಕುಲ ರಸ್ತೆ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಪ್ರವೀಣ ನೀಲಮ್ಮನವರ, ವಿದ್ಯಾನಗರ ಠಾಣೆ ಇನ್‌ಸ್ಪೆಕ್ಟರ್ ಜಾಕ್ಸನ್ ಡಿಸೋಜಾ ಇದ್ದರು.

ಆಸ್ತಿಗಾಗಿ ಮಗನಿಂದಲೇ ತಾಯಿ ಕೊಲೆ: ‘ಇಲ್ಲಿನ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಉಣಕಲ್‌ನ ಅಂಬಿಕಾ ನಗರದಲ್ಲಿ ಮಗನೇ ತಾಯಿಯನ್ನು ಕೊಲೆ ಮಾಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಎನ್.ಶಶಿಕುಮಾರ್ ಹೇಳಿದರು.

‘ನ.4ರಂದು ರಾತ್ರಿ ನಿಂಗವ್ವ ಮುಳಗುಂದ (78) ಅವರ ಕೊಲೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಮೃತರ ಮಗ ಅಶೋಕ ಮಲ್ಲಪ್ಪ ಮುಳಗುಂದ (61) ಎಂಬಾತನೇ ಕಟ್ಟಿಗೆಯ ಮಣೆಯಿಂದ ಹೊಡೆದು ಕೊಲೆ ಮಾಡಿರುವುದು ತಿಳಿದುಬಂದಿದೆ’ ಎಂದು ತಿಳಿಸಿದರು.

‘ನಿಂಗವ್ವ ಅವರು ತಮ್ಮ ನಾಲ್ವರು ಪುತ್ರಿಯರಿಗೆ ಚಿನ್ನದ ಆಭರಣ ನೀಡಿದ್ದರು. ಅಲ್ಲದೆ, ಉಣಕಲ್‌ನ ಸಂಕಣ್ಣವರ ಓಣಿಯಲ್ಲಿರುವ ಖುಲ್ಲಾ ಜಾಗವನ್ನು ಕೂಡ ಪುತ್ರಿಯರಿಗೆ ಕೊಡುವುದಾಗಿ ಆಗಾಗ್ಗೆ ಹೇಳುತ್ತಿದ್ದರು. ಇದರಿಂದ ಕೋಪಗೊಂಡ ಅಶೋಕ, ತಾಯಿ ನಿಂಗವ್ವ ಮನೆಯಲ್ಲಿ ಮಲಗಿದ್ದಾಗ ಮುಂಬಾಗಿಲಿನ ಬೀಗ ಹಾಕಿ ಹಿಂಬಾಗಿಲಿನಿಂದ ಒಳಬಂದು ಕೊಲೆ ಮಾಡಿ ಪರಾರಿಯಾಗಿದ್ದ. ವಿದ್ಯಾನಗರ ಠಾಣೆ ಪೊಲೀಸರು ತನಿಖೆ ನಡೆಸಿ ಗುರುವಾರ ಬೆಳಿಗ್ಗೆ ಗಾಮನಗಟ್ಟಿಯ ಗಣೇಶ ಕಾಲೊನಿಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.