
ಹುಬ್ಬಳ್ಳಿ: ‘ಧಾರವಾಡದ ಕೃಷಿ ಮೇಳದಂತೆ, ಇಲ್ಲಿಯ ಫಲಪುಷ್ಪ ಪ್ರದರ್ಶನವೂ ರಾಜ್ಯದಲ್ಲಿ ಖ್ಯಾತಿ ಗಳಿಸುವಂತೆ ಮುಂದಿನ ದಿನಗಳಲ್ಲಿ ಅಚ್ಚುಕಟ್ಟಾಗಿ ಆಯೋಜನೆ ಮಾಡಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಲ್ಲಿಕರ್ಜುನ ತೊದಲಬಾಗಿ ಹೇಳಿದರು.
ಇಲ್ಲಿನ ಇಂದಿರಾ ಗಾಜಿನ ಮನೆಯಲ್ಲಿ ತೋಟಗಾರಿಕೆ, ಕೃಷಿ ಇಲಾಖೆ, ಜಿಲ್ಲಾ ಪಂಚಾಯಿತಿ, ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ, ಉದ್ಯಾನ ಹಾಗೂ ಫಲಪುಷ್ಪ ಪ್ರದರ್ಶನ ಸಮಿತಿ ಸಂಯುಕ್ತಾಶ್ರಯದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಧಾರವಾಡ ಜಿಲ್ಲಾಮಟ್ಟದ ಫಲಪುಷ್ಪ ಪ್ರದರ್ಶನ ಮತ್ತು ಸರಸ್ ಮೇಳದ ಸಮಾರೋಪ, ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕಳೆದ ವರ್ಷಕ್ಕಿಂತ ಈ ಬಾರಿ ವಿಭಿನ್ನವಾಗಿ ಮೇಳವನ್ನು ಆಯೋಜಿಸಲಾಗಿದೆ. ಕೃಷಿ, ತೋಟಗಾರಿಕೆ, ಮೀನುಗಾರಿಕೆ ಇಲಾಖೆ ಜತೆಗೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಕೈಜೋಡಿಸಿದೆ. ಮುಂದಿನ ವರ್ಷ ಪಶು ವೈದ್ಯಕೀಯ ಇಲಾಖೆ, ಗ್ರಾಮೀಣ ಭಾಗದ ರೈತರನ್ನೂ ಒಳಗೊಳ್ಳಲಾಗುವುದು’ ಎಂದರು.
ಮಹಿಳೆಯರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು 60 ಮಳಿಗೆಗಳ ವ್ಯವಸ್ಥೆ ಮಾಡಲಾಗಿತ್ತು. ದೇಶದ ನಿಜವಾದ ನಾಯಕ ರೈತ. ಮಕ್ಕಳು, ಕುಟುಂಬಕ್ಕಾಗಿ ಶ್ರಮಿಸುವ ಮಹಿಳೆಯರೇ ನಿಜವಾದ ನಾಯಕಿಯರು’ ಎಂದು ಅಭಿಪ್ರಾಯಪಟ್ಟರು.
ಉದ್ಯಾನ ಮತ್ತು ಫಲಪುಷ್ಪ ಪ್ರದರ್ಶನ ಸಮಿತಿಯ ಸಂಚಾಲಕ ಎ.ಜಿ.ದೇಶಪಾಂಡೆ ಮಾತನಾಡಿ, ‘ಇಂದಿರಾ ಗಾಜಿನ ಮನೆ, ಉಣಕಲ್ ಕೆರೆ, ನೃಪತುಂಗ ಬೆಟ್ಟ ಮತ್ತು ಇಲ್ಲಿನ ದೇವಾಲಯಗಳು ಅಭಿವೃದ್ಧಿಯಾಗಬೇಕು. ಜನರು ತಮ್ಮ ಗ್ರಾಮದ ಅಭಿವೃದ್ಧಿಯ ಬಗ್ಗೆ ಕಾಳಜಿ ವಹಿಸಬೇಕು’ ಎಂದರು.
‘ಫಲಪುಷ್ಪ ಪ್ರದರ್ಶನ ಮತ್ತು ಸರಸ್ ಮೇಳ ಯಶಸ್ವಿಯಾಗಲು ಮಹಾನಗರ ಪಾಲಿಕೆ ಸೇರಿದಂತೆ ಎಲ್ಲರ ಸಹಕಾರ, ಪ್ರೋತ್ಸಾಹ ಮುಖ್ಯ. ಮೇಳಕ್ಕೆ ಶ್ರಮಿಸುವವರಿಗೆ ಊಟ, ವಸತಿ ವ್ಯವಸ್ಥೆ ಕಲ್ಪಿಸುವ ಜತೆಗೆ ಅಗತ್ಯ ಅನುದಾನ ನೀಡಬೇಕು’ ಎಂದು ಹೇಳಿದರು.
ಇದೇ ವೇಳೆ ಸ್ಮರಣೆ ಸಂಚಿಕೆ ಬಿಡುಗಡೆ ಮಾಡಲಾಯಿತು. ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಡೀನ್ ವಿ.ಎಸ್.ಪಾಟೀಲ, ಕೆಎಂಸಿಆರ್‌ಐ ಪ್ರಾಧ್ಯಾಪಕ ಸೂರ್ಯಕಾಂತ ಕಲ್ಲೂರ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಕಾಶೀನಾಥ್ ಭದ್ರಣ್ಣವರ, ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್ ಮಹ್ಮದ್ ಫೀರೋಜ್, ಸಹಾಯಕ ಕೃಷಿ ನಿರ್ದೇಶಕಿ ಮಂಜುಳಾ ತೆಂಬದ, ತೋಟಗಾರಿಕೆ ಇಲಾಖೆಯ ಯೋಗೇಶ ಕಿಲಾರಿ, ಶ್ರೀಕಾಂತ ಪತ್ತಾರ, ವರುಣ ಅಮೀನಗಡ, ರೈತ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಉದ್ಯಾನ ಸ್ಪರ್ಧೆ; ಟಿಪಿಎಂಎಲ್‌ಗೆ ಪ್ರಶಸ್ತಿ ಮೂರು ದಿನಗಳ ಫಲಪುಷ್ಪ ಪ್ರದರ್ಶನದಲ್ಲಿ ನಡೆದ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ರೈತರು ಸಂಸ್ಥೆಗಳು ಕಲಾವಿದರಿಗೆ ಬಹುಮಾನ ವಿತರಿಸಲಾಯಿತು. ಅಲ್ಲದೆ ಅವಳಿ ನಗರಗಳ ಫಲಪುಷ್ಪ ಪ್ರದರ್ಶನಗಳ ಉದ್ಯಾನಗಳ ಸ್ಪರ್ಧೆಯ ವಿಜೇತ ಸಂಸ್ಥೆಗಳಿಗೂ ಬಹುಮಾನ ವಿತರಿಸಲಾಯಿತು. ಉದ್ಯಾನ ಸ್ಪರ್ಧೆಯ ದೊಡ್ಡ ಕಾರ್ಖಾನೆ ವಿಭಾಗದಲ್ಲಿ ಬೇಲೂರಿನ ‘ದಿ ಮೈಸೂರು ಪ್ರಿಂಟರ್ಸ್ ಪ್ರೈವೇಟ್ ಲಿಮಿಟೆಡ್’ (ಟಿಪಿಎಂಎಲ್) ಸಂಸ್ಥೆ ಚಾಂಪಿಯನ್ ಸ್ಥಾನ ಪಡೆಯಿತು. ಉದ್ಯಾನಗಳ ಸ್ಪರ್ಧೆಯಲ್ಲಿ ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ ಚಾಂಪಿಯನ್ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ರನ್ನರ್ ಅಪ್ ಸ್ಥಾನ ಗಳಿಸಿತು. ಫಲಪುಷ್ಪ ಪ್ರದರ್ಶನದಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಚಾಂಪಿಯನ್ ಮತ್ತು ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಗೆ ರನ್ನರ್ ಅಪ್ ಸ್ಥಾನ ಪಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.