ಹುಬ್ಬಳ್ಳಿ: ನಗರದ ಬಸವ ವನದಿಂದ ಹಳೇ ಕೋರ್ಟ್ ವೃತ್ತದವರೆಗಿನ ಮೇಲ್ಸೇತುವೆ ಕಾಮಗಾರಿಯನ್ನು ನಾಲ್ಕು ತಿಂಗಳ ಗಡುವಿನ ಒಳಗೆ (ಏಪ್ರಿಲ್ 20 ರಿಂದ ಆಗಸ್ಟ್ 19) ಪೂರ್ಣಗೊಳಿಸಬೇಕು ಎಂದು ಗುತ್ತಿಗೆ ಪಡೆದ ಕಂಪನಿಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಕಾಮಗಾರಿ ವಿಳಂಬ ಗಮನಿಸಿ, ಹತ್ತು ದಿನ ಹೆಚ್ಚುವರಿ ಕಾಲಾವಕಾಶ ಸಹ ನೀಡಲಾಗಿದೆ. ಆದರೆ, ಸದ್ಯದ ಕಾಮಗಾರಿ ಗಮನಿಸಿದರೆ ಆಗಸ್ಟ್ 29ರ ಒಳಗೂ ಪೂರ್ಣಗೊಳ್ಳುವ ಯಾವ ಲಕ್ಷಣಗಳೂ ಕಂಡುಬರುತ್ತಿಲ್ಲ.
ನಾಲ್ಕು ತಿಂಗಳ ಕಾಲಮಿತಿಯಲ್ಲಿ 650 ಮೀಟರ್ ಉದ್ದದ ಮೇಲ್ಸೇತುವೆಗೆ 80 ಗರ್ಡರ್ ಹಾಗೂ 16 ಸ್ಲ್ಯಾಬ್ ಅಳವಡಿಕೆ, ಚನ್ನಮ್ಮ ವೃತ್ತದ ಬಳಿ ರೋಟರ್ ಹಾಗೂ ನಾಲ್ಕು ಬೃಹತ್ ಫಿಲ್ಲರ್ ನಿರ್ಮಾಣ ಹಾಗೂ ರಸ್ತೆ, ಒಳಚರಂಡಿ, ಗಟಾರ ನಿರ್ಮಿಸಬೇಕೆನ್ನುವ ಷರತ್ತು ಹಾಕಲಾಗಿತ್ತು. ಗುತ್ತಿಗೆ ಪಡೆದ ಜೆಂಡು ಕಂಪನಿ ಸಹ ಷರತ್ತಿಗೆ ಬದ್ಧವಾಗಿ, ಕಾಲಮಿತಿಯಲ್ಲಿ ನಿಗದಿತ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಬಸವ ವನದಿಂದ ಹಳೇ ಕೋರ್ಟ್ ವೃತ್ತದವರೆಗಿನ ಪ್ರಮುಖ ರಸ್ತೆಯನ್ನು ಬಂದ್ ಮಾಡಿ, ಕಾಮಗಾರಿಗೆ ಅವಕಾಶ ಕಲ್ಪಿಸಿತ್ತು.
ಮೂರು ತಿಂಗಳ ಹಿಂದಷ್ಟೇ ಉದ್ಘಾಟನೆಯಾಗಿದ್ದ ಹಳೇ ಬಸ್ ನಿಲ್ದಾಣ (ಉಪನಗರ ಸಾರಿಗೆ)ವನ್ನು ಸಹ ಬಂದ್ ಮಾಡಲಾಗಿತ್ತು. ಆದರೆ, ಕಾಮಗಾರಿ ನಿರೀಕ್ಷಿತ ವೇಗ ಪಡೆಯದೆ ಇರುವುದು ಸುತ್ತಮುತ್ತಲಿನ ವ್ಯಾಪಾರಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ದಮ್ಮನಗಿ ಪ್ಲಾಜಾ, ಬಸವವನ ಹಾಗೂ ಸುತ್ತಲಿನ ಸಂಕೀರ್ಣದಲ್ಲಿದ್ದ ವಾಣಿಜ್ಯ ಮಳಿಗೆಗಳ ವ್ಯಾಪಾರಸ್ಥರು ಬಾಡಿಗೆ ತುಂಬಲಾಗದೆ, ಮಳಿಗೆಗಳನ್ನು ಬಿಟ್ಟು ಹೋಗಿದ್ದಾರೆ. ಸ್ವಂತ ಕಟ್ಟಡದ ಮಾಲೀಕರು ತೆರಿಗೆ ಪಾವತಿಸಲೂ ಸಾಧ್ಯವಾಗದೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
‘ರಸ್ತೆ ಬಂದ್ ಮಾಡಿ ಮೂರುವರೆ ತಿಂಗಳು ಕಳೆದಿವೆ. ಸೂಚಿಸಿದ ಕಾಮಗಾರಿಯಲ್ಲಿ ಅರ್ಧದಷ್ಟು ಸಹ ಮುಕ್ತಾಯವಾಗಿಲ್ಲ. ಜನರ ಓಡಾಟವಿಲ್ಲದೆ ಅಂಗಡಿ, ಮಳಿಗೆಗಳನ್ನು ಬಂದ್ ಮಾಡಿ ನಷ್ಟ ಅನುಭವಿಸುತ್ತಿದ್ದೇವೆ. ಬಾಡಿಗೆ ಹಾಗೂ ಇಎಂಐ ತುಂಬಲೂ ಆಗದೆ ಪರದಾಡುತ್ತಿದ್ದೇವೆ. ನಾಲ್ಕು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಜನಪ್ರತಿನಿಧಿಗಳು, ಅಧಿಕಾರಿಗಳು ಭರವಸೆ ನೀಡಿದ್ದರು. ಗರ್ಡರ್‌ಗಳೇ ಇನ್ನೂ ಸರಿಯಾಗಿ ಅಳವಡಿಕೆಯಾಗಿಲ್ಲ. ರಸ್ತೆ, ಚರಂಡಿ ಕಾಮಗಾರಿ ಯಾವಾಗ ನಡೆಯಬೇಕು’ ಎಂದು ಬಸವವನ ಬಳಿಯ ವ್ಯಾಪಾರಿ ಚೇತನ ರಾಮಜಿ ಪ್ರಶ್ನಿಸಿದರು.
‘ಆಗಸ್ಟ್ 27ರಿಂದ ಗಣೇಶ ಹಬ್ಬ ಆರಂಭ. ಹಬ್ಬದ ಸಂದರ್ಭದಲ್ಲಿ ವ್ಯಾಪಾರ–ವಹಿವಾಟು ಜೋರಾಗಿರುತ್ತದೆ. ಹಬ್ಬದ ಒಳಗೆ ಕಾಮಗಾರಿ ಮುಗಿಸುವ ಭರವಸೆಯೊಂದಿಗೆ, ನಾವು ಸಹ ಸಹಕಾರ ನೀಡಿದ್ದೆವು. ಕಾರ್ಮಿಕರಿಲ್ಲದೆ ಕಾಮಗಾರಿ ಕುಂಟುತ್ತ ಸಾಗುತ್ತಿದೆ. ನಾಲ್ಕು ದಿನಗಳಿಂದ ಕೆಲಸ ನಡೆಯುತ್ತಿಲ್ಲ. ನೆನಪಾದಾಗೊಮ್ಮೆ ಜನಪ್ರತಿನಿಧಿಗಳು ಬರುತ್ತಾರೆ, ವ್ಯಾಪಾರಸ್ಥರ ಎದುರು ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡ ಹಾಗೆ ಮಾಡಿ ವಾಪಸ್ ಹೋಗುತ್ತಾರೆ. ಹೆಚ್ಚುವರಿ ಕಾರ್ಮಿಕರನ್ನು ಬಳಸಿಕೊಂಡರೆ ಬೇಗ ಕಾಮಗಾರಿ ಮುಗಿಯುತ್ತಿತ್ತು’ ಎಂದು ಚನ್ನಮ್ಮ ವೃತ್ತದ ಬಳಿಯ ಬೇಕರಿ ಅಂಗಡಿ ಮಾಲೀಕ ನಿಜಗುಣಸ್ವಾಮಿ ಹೇಳುತ್ತಾರೆ.
ನಿಗದಿತ ಕಾಮಗಾರಿ ಪೂರ್ಣಗೊಳಿಸಲು ಆ.29 ಗಡವು ಇನ್ನೂ ಆರಂಭವಾಗದ ರಸ್ತೆ, ಗಟಾರ, ಚರಂಡಿ ಕಾಮಗಾರಿ ಬಾಡಿಗೆ ತುಂಬಲಾಗದೆ ವಾಣಿಜ್ಯ ಮಳಿಗೆಗಳಿಗೆ ಬೀಗ
‘ಕಾಮಗಾರಿ ಪರಿಶೀಲನೆ ಇಂದು’ ‘ಗುತ್ತಿಗೆ ಪಡೆದ ಕಂಪನಿಗೆ ಗಡುವು ನೀಡಿದ್ದಕ್ಕಿಂತ ಹೆಚ್ಚುವರಿಯಾಗಿ ಹತ್ತು ದಿನ ನೀಡಿದ್ದು ಆ ಅವಧಿಯೊಳಗೆ ನಿಗದಿಪಡಿಸಿದ ಕಾಮಗಾರಿ ಮುಗಿಸುವ ಭರವಸೆ ನೀಡಿದ್ದಾರೆ. ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳ ಜೊತೆ ಪರಿಶೀಲನೆ ನಡೆಸುತ್ತೇನೆ’ ಎಂದು ಶಾಸಕ ಮಹೇಶ ಟೆಂಗಿನಕಾಯಿ ತಿಳಿಸಿದರು. ‘ಅಯೋಧ್ಯಾ ಹೋಟೆಲ್ ಎದುರು ಗರ್ಡರ್ ಅಳವಡಿಕೆ ಕಾಮಗಾರಿ ಮುಕ್ತಾಯವಾಗಿದ್ದು ಬಸವವನ ಬಳಿ ಮಾತ್ರ ಬಾಕಿಯಿದೆ. ಒಂದು ವಾರದಲ್ಲಿ ಗರ್ಡರ್ ಹಾಗೂ ಸ್ಲ್ಯಾಬ್ ಅಳವಡಿಕೆ ಕಾರ್ಯ ಮುಕ್ತಾಯವಾಗಲಿದೆ. ನಂತರ ರಸ್ತೆ ಗಟಾರ ಒಳಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಅಯೋಧ್ಯಾ ಹೋಟೆಲ್ ಎದುರುಗಡೆಯ ರಸ್ತೆ ಕಾಮಗಾರಿಯನ್ನು ಆರಂಭಿಸಿ ಆಗಸ್ಟ್ 29ರ ನಂತರ ಹಳೇಬಸ್ ನಿಲ್ದಾಣದ ಎದುರಿನ ರಸ್ತೆಯನ್ನು ವಾಹನಗಳ ಓಡಾಟಕ್ಕೆ ಮುಕ್ತ ಮಾಡುತ್ತೇವೆ. ಗಣೇಶ ಹಬ್ಬಕ್ಕೆ ಸಮಸ್ಯೆಯಾಗದಂತೆ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.