
ಹುಬ್ಬಳ್ಳಿ: ‘ಇತ್ತೀಚಿಗೆ ಹಿಂದೂ ಧರ್ಮ ಹಾಗೂ ಹಿಂದೂಗಳ ಮೇಲೆ ದಾಳಿ ನಡೆಯುತ್ತಿದ್ದು, ಮುಂದೊಂದು ದಿನ ನಾವೇ ಅಲ್ಪಸಂಖ್ಯಾತರಾಗಬಹುದು. ಸಮಸ್ತ ಹಿಂದೂಗಳು ಜಾಗೃತರಾಗಬೇಕು’ ಎಂದು ಆರ್‌ಎಸ್‌ಎಸ್ ಕರ್ನಾಟಕ ಉತ್ತರ ಪ್ರಾಂತ ಪ್ರಚಾರ ಪ್ರಮುಖ ಕೃಷ್ಣಾ ಜೋಶಿ ಹೇಳಿದರು.
ಮೂರು ಸಾವಿರಮಠ ನಗರ ಹಿಂದೂ ಸಮ್ಮೇಳನ ಸಮಿತಿಯಿಂದ ನಗರದ ಮೂರುಸಾವಿರ ಮಠದ ಪ್ರೌಢಶಾಲಾ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹಿಂದೂ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಲವ್ ಜಿಹಾದ್ ಜತೆಗೆ ಇನ್ನಿತರ ಮಾರ್ಗದ ಮೂಲಕ ಹಿಂದೂ ಸಮಾಜ ಒಡೆಯಲು ಷಡ್ಯಂತ್ರ ನಡೆಸುತ್ತಿದ್ದಾರೆ. ಎಲ್ಲರೂ ಒಂದಾಗಿ ಮುನ್ನಡೆಯಬೇಕು’ ಎಂದರು.
ಮೂರುಸಾವಿರಮಠದ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ‘ಯೋಗ ಭೂಮಿ ಭಾರತದಲ್ಲಿ ಹಿಂದೂ ಧರ್ಮದ ಆಚರಣೆ ಅನಾದಿ ಕಾಲದಿಂದ ಇದೆ. ನಮ್ಮ ಆಚರಣೆ, ಪದ್ಧತಿಗಳನ್ನು ಪಾಲಿಸಬೇಕು. ಕೀಳರಿಮೆ ಬಿಟ್ಟು, ಒಂದಾಗಿ ಬಾಳಬೇಕು’ ಎಂದು ಹೇಳಿದರು.
ಸಮಾಜದ ಮುಖಂಡ ವಿಠ್ಠಲ ಲದ್ವಾ ಪ್ರಾಸ್ತಾವಿಕವಾಗಿ ಮಾತನಾಡಿದರು. ರಮೇಶ ದಿವಟೆ, ಬಸವರಾಜ ಕುಂದಗೋಳ, ನಾಗರಾಜ ಕಲಾಲ, ಭಾಸ್ಕರ ಜಿತೂರಿ, ವಿನಾಯಕ ಲದ್ವಾ ಇದ್ದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಪೂರ್ಣಕುಂಭ ಶೋಭಾಯಾತ್ರೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.