ADVERTISEMENT

ಹುಬ್ಬಳ್ಳಿ | ಚರ್ಮ ವಾದ್ಯ ಮರೆಸಿದ ಫೈಬರ್ ಹಲಗೆ: ಸಂಕಷ್ಟದಲ್ಲಿ ಚರ್ಮಕಾರರ ಬದುಕು

ಗಣೇಶ ವೈದ್ಯ
Published 3 ಮಾರ್ಚ್ 2026, 3:15 IST
Last Updated 3 ಮಾರ್ಚ್ 2026, 3:15 IST
ಹುಬ್ಬಳ್ಳಿಯ ಹಳೆಯ ಕೋರ್ಟ್ ವೃತ್ತದಲ್ಲಿ ಮಾರಾಟಕ್ಕೆ ಇಡಲಾದ ಬಗೆಬಗೆಯ ಫೈಬರ್ ಹಲಗೆಗಳು ಪ್ರಜಾವಾಣಿ ಚಿತ್ರ: ಗುರು ಹಬೀಬ
ಹುಬ್ಬಳ್ಳಿಯ ಹಳೆಯ ಕೋರ್ಟ್ ವೃತ್ತದಲ್ಲಿ ಮಾರಾಟಕ್ಕೆ ಇಡಲಾದ ಬಗೆಬಗೆಯ ಫೈಬರ್ ಹಲಗೆಗಳು ಪ್ರಜಾವಾಣಿ ಚಿತ್ರ: ಗುರು ಹಬೀಬ   

ಹುಬ್ಬಳ್ಳಿ: ಹೋಳಿ ಹಬ್ಬದಲ್ಲಿ ಎರಚುವ ಬಣ್ಣಕ್ಕೆ ಇರುವಷ್ಟೇ ಮಹತ್ವ ಹಲಗೆ, ಜಗ್ಗಲಗಿ, ಕಣಿಯಂಥ ವಾದ್ಯಗಳಿಗೂ ಇವೆ. ಹಿಂದೆಲ್ಲ ಚರ್ಮದಿಂದ ಸಿದ್ಧವಾಗುತ್ತಿದ್ದ ಈ ವಾದ್ಯಗಳು ಇಂದು ಫೈಬರ್ ರೂಪ ತಾಳಿವೆ.

ಕೆಲವು ವರ್ಷಗಳಿಂದ ಹೋಳಿ ದಿನ ಎಲ್ಲಿ ನೋಡಿದರಲ್ಲಿ ಫೈಬರ್ ಹಲಗೆಯ ಸದ್ದು ಸಾಮಾನ್ಯವಾಗಿದೆ, ಮೋಜಿನ ಭಾಗವಾಗಿದೆ. ಆದರೆ ಚರ್ಮ ವಾದ್ಯ ತಯಾರಿಸಿ ಹಬ್ಬದ ಮೆರುಗು ಹೆಚ್ಚಿಸುವ ಜತೆಗೆ ಹೊಟ್ಟೆಪಾಡಿಗೆ ನಾಲ್ಕು ಕಾಸು ಸಂಪಾದಿಸುತ್ತಿದ್ದ ಚರ್ಮಕಾರರ ಬದುಕಿನ ಸಂಭ್ರಮವನ್ನು ದೂರವಾಗಿಸಿದೆ.

ನಗರದ ಹಳೆಯ ಕೋರ್ಟ್ ವೃತ್ತದಲ್ಲಿ ಭಾರಿ ಪ್ರಮಾಣದಲ್ಲಿ ಫೈಬರ್ ಹಲಗೆ ಮಾರಾಟಕ್ಕಿಡಲಾಗಿದೆ. ಹಾವೇರಿ ಜಿಲ್ಲೆಯ ಶಿಗ್ಗಾವಿ, ಗದಗ ಜಿಲ್ಲೆಯ ಮುಂಡರಗಿ, ನರಗುಂದ ಹಾಗೂ ಮಹಾರಾಷ್ಟ್ರದ ಮಿರಜ್‌ನಿಂದ ಬಂದು ಇಲ್ಲಿ ವ್ಯಾಪಾರ ಮಾಡುತ್ತಾರೆ.

ADVERTISEMENT

ಮೂಲತಃ ಈ ಕುಟುಂಬದವರು ಚರ್ಮ ವಾದ್ಯ ತಯಾರಕರು. ಹಾರ್ಮೋನಿಯಂ, ತಬಲಾ ಮತ್ತಿತರ ವಾದ್ಯಗಳನ್ನು ಸಿದ್ಧಪಡಿಸುವುದು ಹಾಗೂ ದುರಸ್ತಿ ಮಾಡುವುದು ಇವರ ಕುಲಕಸುಬು. ಬದಲಾದ ಕಾಲಕ್ಕೆ ತಕ್ಕಂತೆ ಅವರೂ ಫೈಬರ್ ವಾದ್ಯ ಮಾರಾಟ ಮಾಡುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಮರಳಿ ಊರಿಗೆ ಹೋದ ಬಳಿಕ ತಮ್ಮ ಕುಲಕಸುಬನ್ನೇ ಮುಂದುವರಿಸುತ್ತಾರೆ.

ಚರ್ಮ ವಾದ್ಯ ಸಿದ್ಧಪಡಿಸಲು ಹೆಚ್ಚಿನ ಶ್ರಮ, ಸಮಯ, ಕೌಶಲ ಬೇಡುತ್ತದೆ. ವಾದ್ಯ ತಯಾರಿಸುವ ಗುಣಮಟ್ಟದ ಚರ್ಮ ದೊರೆಯುವುದೂ ವಿರಳವಾಗಿದೆ. ಫೈಬರ್ ಹಲಗೆಯು ಕಾರ್ಖಾನೆಗಳಲ್ಲಿ ಭಾರಿ ಪ್ರಮಾಣದಲ್ಲಿ ಸಿದ್ಧವಾಗುತ್ತವೆ. ಪರಿಣಾಮವಾಗಿ ಉತ್ಪಾದನಾ ವೆಚ್ಚವೂ ಕಡಿಮೆ. ಈ ಎಲ್ಲ ಕಾರಣಗಳಿಂದ ಫೈಬರ್ ಹಲಗೆಗೆ ಹೋಲಿಸಿದರೆ ಚರ್ಮ ವಾದ್ಯಗಳ ಬೆಲೆಯೂ ಹೆಚ್ಚು.

‘ಫೈಬರ್ ಹಲಗೆಗಳನ್ನು ಕಾರ್ಖಾನೆಗಳಲ್ಲಿ ಸಿದ್ಧಪಡಿಸುತ್ತಾರೆ. ನಾವು ಮಾರಾಟ ಮಾಡಿ ಹೊಟ್ಟೆ ಹೊರೆದುಕೊಂಡರೂ ಹೆಚ್ಚಿನ ಲಾಭ ಕಾರ್ಖಾನೆಯವರಿಗೆ ಆಗುತ್ತದೆ. ಚರ್ಮ ವಾದ್ಯವನ್ನೇ ಜನರು ಬಳಸಿದರೆ ಅವುಗಳ ತಯಾರಿಸುವ ಕೈಗಳಿಗೆ ಕೆಲಸ, ನಾಲ್ಕು ಕಾಸು ಸಿಗುತ್ತಿತ್ತು. ಕಾಲ ಬದಲಾಗಿದೆ. ಕಲಾವಿದರ ಬದುಕು ಕಷ್ಟದಲ್ಲಿದೆ’ ಎಂದು ಮಂಜುನಾಥ ಹನುಮಂತಪ್ಪ ಬಗರಿಕಾರ ಬೇಸರ ವ್ಯಕ್ತಪಡಿಸಿದರು.

ಮಂಜುನಾಥ ಬಗರಿಕಾರ
ಕೆಲವು ವರ್ಷಗಳ ಹಿಂದೆ ಸಾಕಷ್ಟು ಚರ್ಮ ವಾದ್ಯಗಳನ್ನೇ ತಂದಿದ್ದೆವು. ಅವು ವ್ಯಾಪಾರ ಆಗದೆ ನಷ್ಟ ಅನುಭವಿಸಿ ವಾದ್ಯಗಳನ್ನೆಲ್ಲ ವಾಪಸ್ ತೆಗೆದುಕೊಂಡು ಹೋಗುವಂತಾಯಿತು
ಮಂಜುನಾಥ ಹನುಮಂತಪ್ಪ ಬಗರಿಕಾರ ಶಿಗ್ಗಾವಿಯಿಂದ ಬಂದ ಹಲಗೆ ವ್ಯಾಪಾರಿ
ವಿಜಯ ಕರ‍್ರಾ
‘ಉದ್ಯಮ ಮೇಲ್ವರ್ಗದವರ ಕೈಯಲ್ಲಿ’
‘ಚಪ್ಪಲಿ ಪ್ಲಾಸ್ಟಿಕ್ ಫೈಬರ್ ದಲಿತ ಸಮುದಾಯದವರದ್ದು ಎನಿಸಿಕೊಂಡಿದ್ದ ಚರ್ಮದ ಉದ್ಯಮ– ಎಲ್ಲವೂ ಈಗ ಮೇಲ್ವರ್ಗದವರ ಕೈ ಸೇರಿದೆ. ನಮ್ಮ ಕುಲಕಸುಬನ್ನು ಕಸಿದಿದ್ದಾರೆ. ಸರ್ಕಾರ ಅವರಿಗೆ ಕಾರ್ಖಾನೆ ಸ್ಥಾಪಿಸಲು ಪರವಾನಗಿ ನೀಡಿ ನಮಗೆ ಅನ್ಯಾಯ ಮಾಡಿದೆ’ ಎಂದು ದಲಿತ ಕಾರ್ಮಿಕರ ಅಸಂಘಟಿತ ಒಕ್ಕೂಟದ ಅಧ್ಯಕ್ಷ ವಿಜಯ ಕರ‍್ರಾ ಹೇಳಿದರು. ‘ಈ ಹಿಂದೆ ಸತ್ತ ದನಗಳ ಚರ್ಮ ಬಳಸಿಕೊಂಡು ಕೆಲಸ ಮಾಡುತ್ತಿದ್ದೆವು. ಈಗ ಹಾಗಿಲ್ಲ. ವಯಸ್ಸಾಗುತ್ತಿದ್ದಂತೆ ದನಗಳನ್ನು ಮಾರಾಟ ಮಾಡುತ್ತಾರೆ. ಅವು ಕಸಾಯಿಖಾನೆಗೆ ಹೋಗಿ ಅಲ್ಲಿಂದ ಚರ್ಮ ಸಂಸ್ಕರಣೆ ಆಗಿ ದೊಡ್ಡ ದೊಡ್ಡ ಕಾರ್ಖಾನೆಗಳಿಗೆ ಹೋಗುತ್ತದೆ. ವಿದೇಶಗಳಿಗೆ ರಫ್ತಾಗುತ್ತವೆ. ಮೊದಲಿನಂತೆ ಚರ್ಮವೂ ಸಿಗದೆ ನಾವು ಅಸಹಾಯಕರಾಗಿದ್ದೇವೆ’ ಎಂದು ಅವರು ತಿಳಿಸಿದರು.

ಹಲಗೆಯ ಹಲವು ಮುಖಗಳು...

ಗ್ರಾಹಕರ ಅಭಿರುಚಿಗೆ ತಕ್ಕಂತೆ ಭಿನ್ನ ಗಾತ್ರ ಚಿತ್ರ ಬಣ್ಣಗಳಲ್ಲಿ ಫೈಬರ್ ಹಲಗೆ ಲಭ್ಯವಿದೆ. ₹80ರಿಂದ ₹1200ರ ವರೆಗೂ ಹಲಗೆ ಮಾರಾಟವಾಗುತ್ತಿವೆ. ವಿರಾಟ್ ಕೊಹ್ಲಿ ರೋಹಿತ್ ಶರ್ಮಾ ಶಿವಾಜಿ ಮಹಾರಾಜ ಹುಲಿ ಸಿಂಹ ತಬಲಾ ಸ್ಯಾಕ್ಸೊಫೋನ್ ವೀಣೆ ಮಕ್ಕಳ ನೆಚ್ಚಿನ ಮೋಟು– ಪತ್ಲು ಸ್ಪೈಡರ್ ಮ್ಯಾನ್ ಕಾರ್ಟೂನ್ ಹೀಗೆ ಹಲವು ಬಗೆಯ ಆಕರ್ಷಕ ಚಿತ್ರಗಳಿರುವ ಹಲಗೆಗಳು ಗ್ರಾಹಕರಿಗಾಗಿ ಎದುರುನೋಡುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.