ADVERTISEMENT

ಹುಬ್ಬಳ್ಳಿ: ಮತ್ತೆ ಪಾಳು ಬಿದ್ದ ಜನತಾ ಬಜಾರ್‌ ಸಂಕೀರ್ಣ

ಮಾರಾಟ ಕಟ್ಟೆಗಳ ಹಂಚಿಕೆಯಾಗಿದ್ದರೂ ಬಾರದ ಹೂ–ಹಣ್ಣು–ತರಕಾರಿ ವ್ಯಾಪಾರಸ್ಥರು

ಸ್ಮಿತಾ ಶಿರೂರ
Published 7 ಜುಲೈ 2025, 4:00 IST
Last Updated 7 ಜುಲೈ 2025, 4:00 IST
ಹುಬ್ಬಳ್ಳಿಯ ಜನತಾ ಬಜಾರ್ ಮಾರುಕಟ್ಟೆ ಸಂಕೀರ್ಣ ಪಾಳು ಬಿದ್ದಿದೆ   
ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿಯ ಜನತಾ ಬಜಾರ್ ಮಾರುಕಟ್ಟೆ ಸಂಕೀರ್ಣ ಪಾಳು ಬಿದ್ದಿದೆ    ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ   

ಹುಬ್ಬಳ್ಳಿ: ಹುಬ್ಬಳ್ಳಿಯ ಚನ್ನಮ್ಮ ವೃತ್ತದ ಬಳಿ ಇರುವ ಜನತಾ ಬಜಾರ್‌ನಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯ ಅಡಿ ನಿರ್ಮಾಣವಾಗಿರುವ ನೂತನ ಸಂಕೀರ್ಣ ಈಗ ಮತ್ತೆ ಪಾಳು ಬಿದ್ದಿದ್ದು, ಗಬ್ಬೆದ್ದು ನಾರುತ್ತಿದೆ. ಎಲ್ಲೆಲ್ಲೂ ಗುಟಕಾ ತಿಂದು ಉಗುಳಿದ ಕಲೆಗಳೇ ತುಂಬಿವೆ. ಅಳಿದುಳಿದ ತಿಂಡಿ, ಕೊಳೆತ ತರಕಾರಿಗಳ ಅವಶೇಷ, ಕಸ ಚೆ‌ಲ್ಲಾಡಿ, ಮೂತ್ರದ ವಾಸನೆಯಿಂದ ಒಳಗೆ ಕಾಲಿಡದಂತಹ ಸ್ಥಿತಿ ನಿರ್ಮಾಣವಾಗಿದೆ. 

ಕೆಲವೆಡೆ ಕಿಟಕಿಗಳ ಗಾಜುಗಳು ಒಡೆದಿವೆ. ಶೌಚಾಲಯದ ನಳ, ವಾಶ್‌ ಬೇಸಿನ್‌, ಕಮೋಡ್‌ಗಳ ಕೆಲ ಭಾಗಗಳನ್ನೂ ಕಿಡಿಗೇಡಿಗಳು ಒಡೆದಿದ್ದಾರೆ. ಕೆಲವೆಡೆ ವೈರ್‌ಗಳನ್ನೂ ಕೀಳಲಾಗಿದೆ. ಹೂ–ಹಣ್ಣು–ತರಕಾರಿ ಮಾರಾಟದ ಕಟ್ಟೆಗಳನ್ನು ಹಂಚಿಕೆ ಮಾಡಿ 5 ತಿಂಗಳು ಕಳೆದಿದ್ದರೂ, ಒಬ್ಬರೂ ಇಲ್ಲಿ ವ್ಯಾಪಾರ ಮಾಡುತ್ತಿಲ್ಲ. 

ಹುಬ್ಬಳ್ಳಿಯ ಪ್ರಮುಖ ತರಕಾರಿ, ಹಣ್ಣು, ಹೂವು, ಕಿರಾಣಿ ಸಾಮಾನುಗಳ ಮಾರಾಟ ಕೇಂದ್ರಗಳಲ್ಲಿ ಒಂದಾದ ಜನತಾ ಬಜಾರ್‌ ಈಗಲೂ ಜನರಿಂದ ಗಿಜಿಗುಟ್ಟುವ ಪ್ರದೇಶ. ₹18.50 ಕೋಟಿ ವೆಚ್ಚ ಮಾಡಿ ನಿರ್ಮಿಸಿದ 3 ಅಂತಸ್ತಿನ ಕಟ್ಟಡದ ಒಳಗೆ ಮೌನ ರೋದನವಿದ್ದರೆ, ಹೊರಭಾಗದಲ್ಲಿ ಕಾಲಿಡಲು ಜಾಗವಿಲ್ಲದಷ್ಟು ಜನಸಂದಣಿ ನಡುವೆ ವ್ಯಾಪಾರ ವಹಿವಾಟು ಭರ್ಜರಿಯಾಗಿ ನಡೆಯುತ್ತದೆ.

ADVERTISEMENT

‘ಹೊಸ ಸಂಕೀರ್ಣದಲ್ಲಿ ಒಟ್ಟು 177 ಕಟ್ಟೆಗಳ ನಿರ್ಮಾಣವಾಗಬೇಕಿತ್ತು. 121 ಮಾತ್ರ ಅಗಿವೆ. 121 ಕಟ್ಟೆಗಳನ್ನು ಹೂವು, ಹಣ್ಣು, ತರಕಾರಿ, ಕಾಳುಕಡಿ ವ್ಯಾಪಾರಿಗಳಿಗೆ ಹಂಚಿಕೆ ಮಾಡಲಾಗಿದೆ. 56 ಮಂದಿಗೆ ಸಂಕೀರ್ಣದ ಹೊರಗೆ ಜಾಗ ಗುರುತಿಸಿಕೊಡಲಾಗುವುದು ಎಂದು ಪಾಲಿಕೆ ತಿಳಿಸಿದ್ದು, ಅದು ಇನ್ನೂ ಆಗಿಲ್ಲ’ ಎಂದು ಜನತಾ ಬಜಾರ್‌ ಸೂಪರ್‌ ಮಾರ್ಕೆಟ್‌ ಚಿಕ್ಕ ವ್ಯಾಪಾರಿಗಳ ಸಂಘದ ಗೌರವಾಧ್ಯಕ್ಷ ಪ್ರೇಮನಾಥ ಚಿಕ್ಕತುಂಬಳ ತಿಳಿಸಿದರು.

‘ಕಟ್ಟೆ ಹಂಚಿಕೆ ಮಾಡಿದ ಎರಡು ವಾರ ಕಾಲ ವ್ಯಾಪಾರಿಗಳು ಬಂದರು. ಆದರೆ ಗ್ರಾಹಕರು ಸಂಕೀರ್ಣದ ಒಳ ಬಂದು ಖರೀದಿ ಮಾಡದ ಕಾರಣ ತಂದ ಮಾಲು ಮಾರಾಟವಾಗಲಿಲ್ಲ. ಹೀಗಾಗಿ ವ್ಯಾಪಾರಿಗಳೂ ಈಗ ಇಲ್ಲಿ ಕುಳಿತುಕೊಳ್ಳುತ್ತಿಲ್ಲ. ಹರಾಜು ದರ ಹೆಚ್ಚಾಗಿರುವ ಕಾರಣ ಮಳಿಗೆ ಹಂಚಿಕೆ ಪ್ರಕ್ರಿಯೆಗೆ ವ್ಯಾಪಾರಿಗಳು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ ಕಾರಣ ಅಲ್ಲಿ ಮಳಿಗೆಗಳಲ್ಲಿ ವಹಿವಾಟು ಇನ್ನೂ ಆರಂಭವಾಗಿಲ್ಲ. ಹಿಗಾಗಿ ಗ್ರಾಹಕರು ಬರುತ್ತಿಲ್ಲ. ಎಲ್ಲ ಮಳಿಗೆಗಳು ಪೂರ್ಣ ಪ್ರಮಾಣದಲ್ಲಿ ತೆರೆದರೆ ಮಾತ್ರ ವ್ಯಾಪಾರ– ವಹಿವಾಟು ಆರಂಭವಾಗುತ್ತದೆ’ ಎಂದು ಅವರು ಹೇಳಿದರು.

ಜನತಾ ಬಜಾರ್‌ ನೂತನ ಸಂಕೀರ್ಣದಲ್ಲಿ ಪಾರ್ಕಿಂಗ್‌ ಪ್ರದೇಶದಲ್ಲಿ ನೀರು ನಿಲ್ಲುವ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಇಲ್ಲಿ ಯುಜಿಡಿ ನೀರು ಬರುತ್ತಿರುವ ಕಾರಣ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಯೋಜನೆ ರೂಪಿಸಬೇಕಿದೆ. 5 ವರ್ಷಗಳಿಂದ ಈ ಜಾಗದಲ್ಲಿ ವ್ಯಾಪಾರ ವಹಿವಾಟು ಬಂದ್‌ ಆಗಿರುವ ಕಾರಣ ಮತ್ತೆ ಮರು ಆರಂಭಕ್ಕೆ ಸಮಯ ಬೇಕಿದೆ. ಸಂಕೀರ್ಣದ ಹೊರಗೆ ಕುಳಿತ ವ್ಯಾಪಾರ ಮಾಡುವವರನ್ನು ಕಡ್ಡಾಯವಾಗಿ ಒಳಗೆ ಕುಳಿತು ವ್ಯಾಪಾರ ಮಾಡುವಂತೆ ಮನವೊಲಿಸಬೇಕಿದೆ. ಮಳಿಗೆಗಳ ಹರಾಜು ಪ್ರಕ್ರಿಯೆ ಆದ ನಂತರ ವಹಿವಾಟು ಆರಂಭವಾಗಬಹುದು ಎಂದು ಪಾಲಿಕೆ ಮಾಜಿ ಸದಸ್ಯ ಪ್ರಕಾಶ ಬುರಬುರೆ ಅಭಿಪ್ರಾಯಪಟ್ಟರು.

ಹುಬ್ಬಳ್ಳಿಯ ಜನತಾ ಬಜಾರ್ ಮಾರುಕಟ್ಟೆ ಸಂಕೀರ್ಣದ ನೆಲಮಹಡಿ ಹೊಲಸಾಗಿ ಗಬ್ಬು ನಾರುತ್ತಿದ್ದು ಕುಡುಕರ ಆವಾಸ ಸ್ಥಾನವಾಗಿದೆ ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿಯ ಜನತಾ ಬಜಾರ್ ಮಾರುಕಟ್ಟೆ ಸಂಕೀರ್ಣದ ನೆಲಮಹಡಿ ಹೊಲಸಾಗಿ ಗಬ್ಬು ನಾರುತ್ತಿದೆ ಪ್ರಜಾವಾಣಿ ಚಿತ್ರ:ಗೋವಿಂದರಾಜ ಜವಳಿ
ಹುಬ್ಬಳ್ಳಿಯ ಜನತಾ ಬಜಾರ್ ಮಾರುಕಟ್ಟೆ ಸಂಕೀರ್ಣದ ಮೂರನೇ ಮಹಡಿ ವಹಿವಾಟಿಲ್ಲದೇ ಬಿಕೋ ಎನ್ನುತ್ತಿದೆ ಪ್ರಜಾವಾಣಿ ಚಿತ್ರ/ಗೋವಿಂದರಾಜ ಜವಳಿ
ಹುಬ್ಬಳ್ಳಿಯ ಜನತಾ ಬಜಾರ್ ಮಾರುಕಟ್ಟೆ ಸಂಕೀರ್ಣದ ವಾಶಬೇಸಿನ್‌ನ ಪೈಪ್‌ ಅನ್ನು ಕಿಡಿಗೇಡಿಗಳು ಹಾಳು ಮಾಡಿದ್ದಾರೆ ಪ್ರಜಾವಾಣಿ ಚಿತ್ರ/ಗೋವಿಂದರಾಜ ಜವಳಿ
ಹುಬ್ಬಳ್ಳಿಯ ಜನತಾ ಬಜಾರ್ ಮಾರುಕಟ್ಟೆ ಸಂಕೀರ್ಣದ ಕಿಟಕಿಯ ಗ್ಲಾಸ್‌ ಒಂದನ್ನು ಕಿಡಿಗೇಡಿಗಳು ಒಡೆದಿದ್ದಾರೆ ಪ್ರಜಾವಾಣಿ ಚಿತ್ರ/ಗೋವಿಂದರಾಜ ಜವಳಿ
ಹುಬ್ಬಳ್ಳಿಯ ಜನತಾ ಬಜಾರ್ ಮಾರುಕಟ್ಟೆ ಸಂಕೀರ್ಣದ ನೆಲಮಹಡಿ ಹೊಲಸೆದ್ದು ನಾರುತ್ತಿದ್ದು ಕುಡುಕರ ಆವಾಸ ಸ್ಥಾನವಾಗಿದೆ ಪ್ರಜಾವಾಣಿ ಚಿತ್ರ/ಗೋವಿಂದರಾಜ ಜವಳಿ
ಜನತಾ ಬಜಾರ್‌ ಸಂಕೀರ್ಣದ 3ನೇ ಅಂತಸ್ತಿನಲ್ಲಿ ಪಾಲಿಕೆಯ ವಲಯ ಕಚೇರಿ–9ನ್ನು ತಂದರೆ ಜನರಿಗೆ ಅನುಕೂಲವಾಗುತ್ತದೆ. ಈ ಬಗ್ಗೆ ಪಾಲಿಕೆ ಆಯುಕ್ತರಿಗೆ ಮನವಿ ಮಾಡಿದ್ದೇವೆ
ಸುನಿತಾ ಬುರಬುರೆ ಪಾಲಿಕೆ ಸದಸ್ಯೆ ವಾರ್ಡ್‌ 65

‘ವ್ಯಾಪಾರಿಗಳ ಸಹಕಾರ ಅಗತ್ಯ’

ಜನತಾ ಬಜಾರ್‌ ನೂತನ ಸಂಕೀರ್ಣದಲ್ಲಿ ಮಳಿಗೆ ಹಂಚಿಕೆಯ ಹರಾಜಿಗೆ ವ್ಯಾಪಾರಿಗಳು ತಡೆಯಾಜ್ಞೆ ತಂದಿದ್ದಾರೆ. ಕಟ್ಟೆಗಳ ಹಂಚಿಕೆ ಆಗಿದ್ದರೂ ಚಿಕ್ಕ ವ್ಯಾಪಾರಿಗಳು ವ್ಯಾಪಾರಕ್ಕೆ ಬರುತ್ತಿಲ್ಲ. ಮಳಿಗೆಗಳು ಆರಂಭವಾದ ನಂತರವೇ ಕಟ್ಟೆ ವ್ಯಾಪಾರಿಗಳೂ ಸಹ ಬರುವುದಾಗಿ ಹೇಳುತ್ತಿದ್ದಾರೆ. ತಡೆಯಾಜ್ಞೆ ತೆರವಾದ ನಂತರ ಮತ್ತೆ ಸಂಕೀರ್ಣವನ್ನು ಪೂರ್ಣ ಸ್ವಚ್ಛಗೊಳಿಸಿ ಹಾನಿಗೊಂಡಿರುವ ಉಪಕರಣ ಸಾಮಗ್ರಿಗಳನ್ನು ಅಳವಡಿಸಲಾಗುವುದು. ವ್ಯಾಪಾರಿಗಳು ಸಹಕಾರ ನೀಡಿದರೆ ಮಾತ್ರ ಸಂಕೀರ್ಣದ ಸದುಪಯೋಗ ಸಾಧ್ಯ. ಪಾಲಿಕೆ ವಲಯ ಕಚೇರಿಯನ್ನು ಇದೇ ಸಂಕೀರ್ಣಕ್ಕೆ ಸ್ಥಳಾಂತರ ಮಾಡುವಂತೆ ಬೇಡಿಕೆ ಇದೆ. ಈ ಬಗ್ಗೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು.  ರುದ್ರೇಶ್‌ ಘಾಳಿ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಆಯುಕ್ತ

ಮೀನು ಮಾರುಕಟ್ಟೆಯೂ ಭಣಭಣ

ಗಣೇಶ ಪೇಟೆಯಲ್ಲಿ ಮಹಾನಗರ ಪಾಲಿಕೆಯಿಂದ ₹6.40 ಕೋಟಿ ವೆಚ್ಚದಲ್ಲಿ ಮೀನು ಮಾರುಕಟ್ಟೆ ಕಟ್ಟಡ ನಿರ್ಮಿಸಿ ಒಂದು ವರ್ಷವಾಗಿದ್ದು ಅದೂ ಪಾಳು ಬಿದ್ದಿದೆ. ‘ಈ ಜಾಗದಲ್ಲಿ ಮೊದಲು 54 ಮಳಿಗೆಗಳು ಇದ್ದವು. ಈಗಿನ ಹೊಸ ಕಟ್ಟಡದಲ್ಲಿ 36 ಮಳಿಗೆ ಮಾತ್ರ ನಿರ್ಮಿಸಲಾಗಿದೆ. ಹೀಗಾಗಿ ಅಗತ್ಯವಿದ್ದಷ್ಟು ಮಳಿಗೆ ನಿರ್ಮಿಸಿದರೆ ಮಾತ್ರ ಹೊಸ ಕಟ್ಟಡದಲ್ಲಿ ವಹಿವಾಟು ಆರಂಭಿಸುವುದಾಗಿ ಎಲ್ಲ ಮೀನು ವ್ಯಾಪಾರಸ್ಥರು ಸೇರಿ ನಿರ್ಣಯ ಕೈಗೊಂಡಿದ್ದೇವೆ. ಈ ಬಗ್ಗೆ ಪಾಲಿಕೆ ಆಯುಕ್ತರಿಗೆ ವಾರ್ಡ್‌ ಸದಸ್ಯರಿಗೆ ಮನವಿ ಮಾಡಿದ್ದೇವೆ’ ಎಂದು ಹುಬ್ಬಳ್ಳಿ ಮೀನು ವ್ಯಾಪಾರಿಗಳ ಸಂಘದ ಅಧ್ಯಕ್ಷ ದಾದಾ ಹಯಾತ್ ಖೈರತಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.