ADVERTISEMENT

ಹುಬ್ಬಳ್ಳಿ | 39 ದಿನಗಳ ನಂತರ ಬೋನಿಗೆ ಬಿದ್ದ ಚಿರತೆ; ಜನ ನಿರಾಳ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 18:15 IST
Last Updated 26 ಜನವರಿ 2026, 18:15 IST
   

ಹುಬ್ಬಳ್ಳಿ: ಕಳೆದೊಂದು ತಿಂಗಳಿಂದ ಹುಬ್ಬಳ್ಳಿ– ಧಾರವಾಡ ಅವಳಿನಗರದ ಜನರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಕೊನೆಗೂ ಸೋಮವಾರ ರಾತ್ರಿ 9.30ರ ಸುಮಾರಿಗೆ ವಿಮಾನ ನಿಲ್ದಾಣ ಪ್ರದೇಶದಲ್ಲಿ ಇಟ್ಟಿದ್ದ ಬೋನಿನಲ್ಲಿ ಸೆರೆಯಾಗಿದೆ.

ಅರಣ್ಯ ಇಲಾಖೆ ಸಿಬ್ಬಂದಿ ನಾಲ್ಕು ಕಡೆಗಳಲ್ಲಿ ಬೋನು ಅಳವಡಿಸಿ ಚಿರತೆ ಸೆರೆಗೆ ಪ್ರತಿದಿನ ಕಾರ್ಯಾಚರಣೆ ನಡೆಸಿದ್ದರು. ಅಲ್ಲದೆ, ಸಿ.ಸಿ. ಟಿವಿ ಕ್ಯಾಮೆರಾ ಹಾಗೂ ಥರ್ಮಲ್ ಡ್ರೋನ್ ಮೂಲಕ ಚಲನವಲನ ಪರಿಶೀಲಿಸುತ್ತಿದ್ದರು. ಆದರೆ, ಚಿರತೆಯು ಬೋನಿಗೆ ಬೀಳದೆ ಗಾಮನಗಟ್ಟಿ ರಸ್ತೆ, ವಿಮಾನ ನಿಲ್ದಾಣದ ಆವರಣ, ಸುತಗಟ್ಟಿ, ನವನಗರ, ಸತ್ತೂರು ಭಾಗದಲ್ಲಿ ಓಡಾಡಿಕೊಂಡಿತ್ತು. ಇದೀಗ 39 ದಿನಗಳ ನಂತರ ಬೋನಿಗೆ ಬಿದ್ದಿದೆ.

‘ಚಿರತೆ ಸೆರೆಗೆ ಅರಣ್ಯ ಇಲಾಖೆಯಿಂದ ನಿರಂತರ ಕಾರ್ಯಾಚರಣೆ ನಡೆಸಲಾಗಿತ್ತು. ವಿಮಾನ ನಿಲ್ದಾಣ ಪ್ರದೇಶದಲ್ಲಿ ಇಟ್ಟಿದ್ದ ತುಮಕೂರಿನ ದೊಡ್ಡ ಬೋನಿನೊಳಗೆ ಸೋಮವಾರ ರಾತ್ರಿ ಸೆರೆಯಾಗಿದೆ. ಇದನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಗುವುದು’ ಎಂದು ಹುಬ್ಬಳ್ಳಿ ವಲಯ ಅರಣ್ಯಾಧಿಕಾರಿ ಆರ್‌.ಎಸ್‌. ಉಪ್ಪಾರ ತಿಳಿಸಿದರು.

ADVERTISEMENT

ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಕೆ.ವಿ., ಉಪ ಅರಣ್ಯ ಸಂರಕ್ಷಣಾಧಿಕಾರಿ ವಿವೇಕ ಕವರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರಿಮಳಾ ವಿ.ಎಚ್ ನೇತೃತ್ವದಲ್ಲಿ ಬೆಂಗಳೂರಿನ ಬನ್ನೇರುಘಟ್ಟ, ಮೈಸೂರಿನ ಚಿರತೆ ಕಾರ್ಯಪಡೆ ಹಾಗೂ ಸ್ಥಳೀಯ 40ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.