
ಹುಬ್ಬಳ್ಳಿಯ ಮಿನಿವಿಧಾನಸೌಧದ ಎದುರು ಸೋಮವಾರ ಅಖಿಲ ಭಾರತ ರೈತ ಕೃಷಿಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು
ಪ್ರಜಾವಾಣಿ ಚಿತ್ರ
ಹುಬ್ಬಳ್ಳಿ: ಬೆಂಬಲ ಬೆಲೆ ಯೋಜನೆ ಅಡಿ ಮೆಕ್ಕೆಜೋಳ ಖರೀದಿಸಲು ತಕ್ಷಣ ಖರೀದಿ ಕೇಂದ್ರ ತೆರೆದು, ಪ್ರತಿ ಕ್ವಿಂಟಲ್‌ಗೆ ₹3 ಸಾವಿರ ನಿಗದಿ ಪಡಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಸದಸ್ಯರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಮಿನಿ ವಿಧಾನಸೌಧದ ಎದುರು ಸೇರಿದ ಪ್ರತಿಭಟನಕಾರರು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರೈತರ ಸಮಸ್ಯೆಗಳ ಬಗ್ಗೆ ಅರಿವಿದ್ದರೂ, ಅವರ ಬದುಕಿನ ಜತೆ ಸರ್ಕಾರಗಳು ಚೆಲ್ಲಾಟವಾಡುತ್ತಿವೆ ಎಂದು ಧಿಕ್ಕಾರ ಕೂಗಿದರು.
ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಲಕ್ಷ್ಮಣ ಜಡಗನ್ನವರ ಮಾತನಾಡಿ, ‘ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಸಿಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಭಟನೆ ನಡೆಸಿದರೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸ್ಪಂದಿಸುತ್ತಿಲ್ಲ’ ಎಂದು ಆರೋಪಿಸಿದರು.
‘ಜಿಲ್ಲೆಯ ಪ್ರಮುಖ ಬೆಳೆಯಾದ ಮೆಕ್ಕೆಜೋಳಕ್ಕೆ ಈ ಬಾರಿಯೂ ಸರಿಯಾದ ಬೆಂಬಲ ಬೆಲೆ ಸಿಗುತ್ತಿಲ್ಲ. ಅತಿವೃಷ್ಟಿಯಿಂದಾಗಿ ಬಹುತೇಕ ಬೆಳೆ ಹಾಳಾಗಿದೆ. ಎರಡು ಮೂರು ಬಾರಿ ಬಿತ್ತನೆ ಮಾಡಿದ್ದಾರೆ. ಒಂದು ಎಕರೆಗೆ ಕನಿಷ್ಠ ₹20 ಸಾವಿರ ಖರ್ಚಾಗಿದೆ. ಕಳೆದ ವರ್ಷ ಕ್ವಿಂಟಲ್‌ಗೆ ₹2,400 ರಿಂದ ₹2,500 ದರ ಇತ್ತು. ಈ ವರ್ಷ ₹1,500 ರಿಂದ ₹1,600ಕ್ಕೆ ಮಾರುವಂಥ ಸ್ಥಿತಿ ನಿರ್ಮಾಣವಾಗಿದೆ‘ ಎಂದರು.
ಮುಂಗಾರು ಬೆಳೆ ನಷ್ಟ ಪರಿಹಾರ ಇನ್ನೂ ದೊರೆತಿಲ್ಲ. ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಉದ್ದು, ಹೆಸರು, ಹತ್ತಿ, ಉಳ್ಳಾಗಡ್ಡಿ, ಸೋಯಾಬೀನ್ ಸೇರಿದಂತೆ ಎಲ್ಲ ಬೆಳೆಗಳ ಬೆಲೆ ಪಾತಾಳಕ್ಕೆ ಇಳಿದಿದೆ. ಅಮರಗೋಳದ ಎಪಿಎಂಸಿಯಲ್ಲಿ ಒಂದು ಕ್ವಿಂಟಲ್ ಉಳ್ಳಾಗಡ್ಡಿ ₹50ಕ್ಕೆ ಹರಾಜು ಕೂಗಿದ್ದು, ರೈತರ ಬದುಕನ್ನೇ ಅಣಕಿಸುವಂತಿತ್ತು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಖಂಡರಾದ ದೀಪಾ ಧಾರವಾಡ, ಶರಣು ಗೊನ್ವಾರ, ರಾಮಣ್ಣ ಗಾಣಗೇರ, ಯಲ್ಲಪ್ಪ ಹುಬ್ಬುಳ್ಳಿ, ಬಸವರಾಜ ಮೊರಬದ, ಪ್ರಭು ಮೊರಬದ, ಚಂದ್ರು ಕೆ. ಇದ್ದರು.