ADVERTISEMENT

ಹುಬ್ಬಳ್ಳಿ | ಮರ್ಯಾದೆಗೇಡು ಹತ್ಯೆ; ಮೌನ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 2:27 IST
Last Updated 6 ಜನವರಿ 2026, 2:27 IST
ಹುಬ್ಬಳ್ಳಿಯಲ್ಲಿ ಸೋಮವಾರ ವಿವಿಧ ದಲಿತ ಸಂಘಟನೆಗಳ ಸದಸ್ಯರು, ಮುಖಂಡರು ಮಾನ್ಯಾ ಕೊಲೆ ಖಂಡಿಸಿ ಮೌನ ಪ್ರತಿಭಟನೆ ನಡೆಸಿದರು
ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯಲ್ಲಿ ಸೋಮವಾರ ವಿವಿಧ ದಲಿತ ಸಂಘಟನೆಗಳ ಸದಸ್ಯರು, ಮುಖಂಡರು ಮಾನ್ಯಾ ಕೊಲೆ ಖಂಡಿಸಿ ಮೌನ ಪ್ರತಿಭಟನೆ ನಡೆಸಿದರು ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ತಾಲ್ಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಮರ್ಯಾದೆಗೇಡು ಹತ್ಯೆ ಖಂಡಿಸಿ ವಿವಿಧ ದಲಿತ ಸಂಘಟನೆಗಳ ಸದಸ್ಯರು, ಮುಖಂಡರು ಹಾಗೂ ಮಠಾಧೀಶರು ಸೋಮವಾರ ನಗರದಲ್ಲಿ ಮೌನ ಪ್ರತಿಭಟನೆ ನಡೆಸಿದರು.

ಕೈಗೆ ಕಪ್ಪುಪಟ್ಟಿ ಕಟ್ಟಿಕೊಂಡು ಸಿದ್ಧಾರೂಢಮಠದ ಆವರಣದಿಂದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ನಡೆಸಿದರು. ಸಂಘಟನೆಯ ಮುಖಂಡರು ಹಾಗೂ ಸದಸ್ಯರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಅಂಬೇಡ್ಕರ್ ವೃತ್ತದಲ್ಲಿ ಸಭೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ, ತಹಶೀಲ್ದಾರ್‌ ಕಚೇರಿ ಸಿಬ್ಬಂದಿಗೆ ಮನವಿ ಪತ್ರ ಸಲ್ಲಿಸಿದರು.

ಹಿರಿಯೂರಿನ ಆದಿಬಜಾಂಬವ ಮಠದ ಷಡಾಕ್ಷರಿ ಸ್ವಾಮೀಜಿ ಮಾತನಾಡಿ, ‘ಪ್ರೀತಿಸಿ ಮದುವೆಯಾದರು ಎನ್ನುವ ಕಾರಣಕ್ಕೆ ಇಂತಹ ಘೋರ ಕೃತ್ಯ ನಡೆಯುತ್ತದೆ ಎಂದರೆ, ಆಧುನಿಕ ಸಮಾಜ ಸಹಿಸುವುದಿಲ್ಲ. ಮನುಷ್ಯತ್ವ ಇದ್ದವರ್‍ಯಾರೂ ಹೀಗೆ ಮಾಡುವುದಿಲ್ಲ. ಸಮಸಮಾಜದಲ್ಲಿ ನಾವ್ಯಾರೂ ಬದುಕುತ್ತಿಲ್ಲ ಎನ್ನುವುದಕ್ಕೆ ಇದು ನಿದರ್ಶನ.  ಮೌಢ್ಯದಿಂದ ಇಂತಹ ಕೃತ್ಯಗಳು ನಡೆಯುತ್ತಿದ್ದು, ತಾಳ್ಮೆ, ಪ್ರೀತಿಯಿಂದ ಸಮಾಜ ಕಟ್ಟಬೇಕಿದೆ’ ಎಂದರು.

ADVERTISEMENT

‘ಒಂದು ಕುಟುಂಬ ತಪ್ಪು ಮಾಡಿದ್ದಕ್ಕೆ, ಇಡೀ ಸಮಾಜ ತಪ್ಪು ಮಾಡಿದೆ ಎಂಬಂತೆ ಬಿಂಬಿಸಬಾರದು. ಇನಾಂ ವೀರಾಪುರ ಗ್ರಾಮದಲ್ಲಿ ಸ್ವಪ್ರತಿಷ್ಠೆಗಾಗಿ ಕೃತ್ಯ ನಡೆದಿದೆ. ಎಲ್ಲ ಸಮುದಾಯದವರೂ ಈ ಘಟನೆಯನ್ನು ಒಕ್ಕೋರಲಿನಿಂದ ಖಂಡಿಸಬೇಕು. ಮಕ್ಕಳಲ್ಲಿ ಶಿಕ್ಷಣ, ಸಂಸ್ಕಾರದ ಜತೆಗೆ ಹೋರಾಟ ಮನೋಭಾವ ಬೆಳೆಸಿದಾಗ ಮಾತ್ರ ಇಂತಹ ಕೃತ್ಯಗಳು ಕಡಿಮೆಯಾಗುತ್ತವೆ’ ಎಂದು ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.

ಮುಖಂಡ ವೀರಭದ್ರಪ್ಪ ಹಾಲಹರವಿ ಮಾತನಾಡಿ, ‘ಪರಿಶಿಷ್ಟ ಜಾತಿ, ಪಂಗಡದ ಮಕ್ಕಳು ಮತ್ತೊಂದು ಜಾತಿಯವರನ್ನು ಮದುವೆಯಾದಾಗ ಇಂತಹ ಕೃತ್ಯಗಳು ನಡೆಯುತ್ತದೆ ಎಂದರೆ, ಬಸವಣ್ಣನವರ ತತ್ವ–ಚಿಂತನೆಗಳಿಗೆ ಮೋಸ ಮಾಡಿದಂತೆ. ಸಮಾಜದಲ್ಲಿನ ಮನಸ್ಸುಗಳು ಪ್ರಕ್ಷುಬ್ಧವಾದಾಗ ಕ್ರೋಧ, ಮದ, ಮತ್ಸರಗಳೆಲ್ಲ ಒಂದಾಗಿ, ಅಪರಾಧ ಕೃತ್ಯಗಳಿಗೆ ಪ್ರೇರೇಪಿಸುತ್ತವೆ. ರಕ್ತ ಬೇಕು ಎಂದಾಗ ಎದುರಾಗದ ಜಾತಿ, ಮದುವೆಯಾದಾಗ ಯಾಕೆ ಬರುತ್ತದೆ? ಎಲ್ಲ ಸಮಾಜದವರು ಒಗ್ಗಟ್ಟಾಗಿದ್ದಾಗಲೇ ಹಿಂದೂ ಸಮಾಜ ಒಂದಾಗಿರಲು ಸಾಧ್ಯ. ಕಾನೂನಿನಿಂದ ಹಾಗೂ ನಾಟಕೀಯ ನಡುವಳಿಕೆಗಳಿಂದ ಜಾತಿ ತಾರತಮ್ಯ ಹೋಗಲಾಡಿಸಲು ಸಾಧ್ಯವಿಲ್ಲ’ ಎಂದರು.

ಕೊಪ್ಪಳದ ಮರಳು ಸಿದ್ಧೇಶ್ವರ ಸ್ವಾಮೀಜಿ, ಮುಖಂಡ ವಿಜಯ ಗುಂಟ್ರಾಳ ಮಾತನಾಡಿದರು. ಮೋಹನ ಹಿರೇಮನಿ, ಬಸಪ್ಪ ಮಾದರ, ಗುರುನಾಥ ಉಪ್ಪಲದಡ್ಡಿ, ದೊಡ್ಡರಾಮಪ್ಪ ದೊಡ್ಡಮನಿ, ಪರಶುರಾಮ ಪೂಜಾರ, ಗಂಗಾಧರ ಪೆರೂರ, ಗಂಗಮ್ಮ ಸಿದ್ರಾಮಪುರ, ಅನಿತಾ ಇನಗೊಂಡ, ರೇಣುಕಾ ಗೋಸಾವಿ, ಲಕ್ಷ್ಮಿ ಚಿತಪಲ್ಲಿ, ರೇಣುಕಾ ನಾಗರಾಳ ಹಾಗೂ ವಿಜಯಪುರ, ಯಾದಗಿರಿ, ಗದಗ ಜಿಲ್ಲೆಯ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.

ಜಾತಿ ವ್ಯವಸ್ಥೆ ದೇಶಕ್ಕೆ ಅಂಟಿಕೊಂಡಿರುವ ದೊಡ್ಡ ರೋಗ. ಮನಸ್ಸು ಪರಿವರ್ತನೆಯಾದಾಗ ಮಾತ್ರ ಇದನ್ನು ಹೊಡೆದೋಡಿಸಬಹುದು
ಬಸವಲಿಂಗ ಸ್ವಾಮೀಜಿ ರುದ್ರಾಕ್ಷಿ ಮಠ ಹುಬ್ಬಳ್ಳಿ

‘ಭವಿಷ್ಯ ರೂಪಿಸಿಕೊಳ್ಳಿ’ ‘ಸಮುದಾಯದ ಮಕ್ಕಳು ಹುಚ್ಚು ಪ್ರೀತಿಯ ಹಿಂದೆ ಹೋಗದೆ ಶಿಕ್ಷಣ ಸಂಸ್ಕಾರ ಹಾಗೂ ಉದ್ಯೋಗದತ್ತ ಗಮನ ಹರಿಸಿ ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದು ಹಿರಿಯೂರಿನ ಆದಿ ಜಾಂಬವ ಮಠದ ಷಡಾಕ್ಷರಿ ಸ್ವಾಮೀಜಿ ಹೇಳಿದರು. ‘ಓದಿ ವಿದ್ಯಾವಂತರಾಗಿ ಉದ್ಯೋಗದಲ್ಲಿದ್ದರೆ ಎಲ್ಲರೂ ಪ್ರೀತಿಯಿಂದ ಬಂದು ಮಾತನಾಡಿಸುತ್ತಾರೆ. ಸಮಾಜದ ಮುಖ್ಯವಾಹಿನಿಗೆ ಬಂದಾಗ ಜಾತಿ–ತಾರತಮ್ಯ ಕಡಿಮೆಯಾಗುತ್ತದೆ. ಮರ್ಯಾದೆಗೇಡು ಹತ್ಯೆ ಪ್ರಕರಣದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ಆ ಮೂಲಕ ಎಚ್ಚರಿಕೆ ಸಂದೇಶ ರವಾನಿಸಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.