ADVERTISEMENT

ಮಹಿಳೆ ವಿವಸ್ತ್ರಗೊಳಿಸಿದ ಆರೋಪ: ಇನ್‌ಸ್ಪೆಕ್ಟರ್–ಸಿಬ್ಬಂದಿ ಅಮಾನತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 13:29 IST
Last Updated 7 ಜನವರಿ 2026, 13:29 IST
   

ಹುಬ್ಬಳ್ಳಿ: 'ಬಿಜೆಪಿ ಕಾರ್ಯಕರ್ತೆ ಸುಜಾತಾ ಅವರನ್ನು ವಿವಸ್ತ್ರಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಕೇಶ್ವಾಪುರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಮತ್ತು ಅದರಲ್ಲಿ ಭಾಗಿಯಾದ ಸಿಬ್ಬಂದಿಯನ್ನು ಅಮಾನತು ಹಾಗೂ ಪಾಲಿಕೆ ಕಾಂಗ್ರೆಸ್ ಸದಸ್ಯೆ ಸುವರ್ಣಾ ಕಲಕುಂಟ್ಲ ಅವರನ್ನು ಬಂಧಿಸುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ' ಎಂದು ಮೇಯರ್ ಜ್ಯೋತಿ ಪಾಟೀಲ ಹೇಳಿದರು.

ಠಾಣೆಯಲ್ಲಿ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರಿಗೆ ಪ್ರಕರಣಕ್ಕೆ ಸಂಬಂಧಿಸಿ ಹೇಳಿಕೆ ನೀಡಿ, ಬಳಿಕ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

'ಪೊಲೀಸರು ಮಹಿಳೆ ಜೊತೆ ಅಮಾನುಷವಾಗಿ ನಡೆದುಕೊಂಡಿದ್ದು ಖಂಡನೀಯ. ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಮಹಿಳೆಯೇ ವಿವಸ್ತ್ರಗೊಂಡಿದ್ದಾಳೆ ಎಂದು ಆರೋಪಿಸುತ್ತಿದ್ದಾರೆ. ಯಾವುದಾದರೂ ಮಹಿಳೆ ತನ್ನ ಮಾನವನ್ನು ಹಾಗೆಲ್ಲ ಹರಾಜು ಹಾಕಿಕೊಳ್ಳುತ್ತಾಳೆಯೇ' ಎಂದು ಪ್ರಶ್ನಿಸಿದರು.

ADVERTISEMENT

'ಇನ್‌ಸ್ಪೆಕ್ಟರ್ ಹಟ್ಟಿ ಅವರು ಮಹಿಳಾ ಸಿಬ್ಬಂದಿ ಇಲ್ಲದೆ ರಾತ್ರಿ ಎರಡು ಗಂಟೆ ಸಮಯಕ್ಕೆ ಸುಜಾತಾ ಅವರ ಮನೆಗೆ ಹೋಗುತ್ತಾರೆ. ಮಧ್ಯರಾತ್ರಿ ಸಮಯ ಅವರು ಅಲ್ಲಿಗೆ ಹೋಗುವ ಒತ್ತಡ, ಅನಿವಾರ್ಯತೆ ಏನಿತ್ತು? ಪಾಲಿಕೆ ಸದಸ್ಯೆಯ ಮಾತು ಕೇಳಿ ಕೆಲಸ ಮಾಡುತ್ತಿರುವ ಅವರನ್ನು ತಕ್ಷಣ ಅಮಾನತು ಮಾಡಬೇಕು' ಎಂದು ಆಗ್ರಹಿಸಿದರು.

'ಪಾಲಿಕೆ ವ್ಯಾಪ್ತಿಯಲ್ಲಿ ನಕಲಿ ಮತದಾರರನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ. ಎಲ್ಲ ಭಾಗದಲ್ಲೂ ಬಿಎಲ್‌ಒಗಳಿಗೆ ಸಹಕಾರ ದೊರೆಯುತ್ತಿದೆ. ಅದರೆ, ವಾರ್ಡ್ ನಂ. 59ರಲ್ಲಿ ಮಾತ್ರ ವಿರೋಧ ವ್ಯಕ್ತವಾಗುತ್ತಿದೆ. ಇದನ್ನು ಗಮನಿಸಿದರೆ ನಮಗೆ ಅಲ್ಲಿ ನಕಲಿ ಮತದಾರರು ಇರುವ ಅನುಮಾನ ವ್ಯಕ್ತವಾಗುತ್ತಿದೆ. ಈ ಕುರಿತು ಸಹ ತನಿಖೆಗೆ ಆಗ್ರಹಿಸುತ್ತಿದ್ದೇವೆ' ಎಂದು ಹೇಳಿದರು.

ಮಾಜಿ ಶಾಸಕಿ ಸೀಮಾ ಮಸೂತಿ ಮಾತನಾಡಿ, 'ಇನ್‌ಸ್ಪೆಕ್ಟರ್ ಹಟ್ಟಿ ಅವರು ಸುಜಾತಾ ಅವರಿಗೆ ಗುಂಡು ಹೊಡೆದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರಂತೆ. ರಾತ್ರಿ ಎರಡು ಗಂಟೆ ವೇಳೆ ಒಂಟಿ ಮಹಿಳೆಯನ್ನು ಊರ ಹೊರಗಿನ ಹೊಲಕ್ಕೆ ಕರೆದುಕೊಂಡು ಹೋಗಿ ಬಿಡುತ್ತಾರೆ ಎಂದರೆ ಏನರ್ಥ? ಅವರನ್ನು ಕೂಡಲೇ ಅಮಾನತು ಮಾಡಿ, ವಿಚಾರಣೆ ನಡೆಸಬೇಕು' ಎಂದು ಆಗ್ರಹಿಸಿದರು.

ಉಪಮೇಯರ್ ಸಂತೋಷ ಚವ್ಹಾಣ್, ಬೀರಪ್ಪ ಖಂಡೇಕಾರ, ಶಿವು ಮೆಣಸಿನಕಾಯಿ, ರಾಜಲಕ್ಷ್ಮಿ ಸಾಲಗಟ್ಟಿ ಹಾಗೂ ಇತರರು ಇದ್ದರು.

ಮುಂದುವರಿದ ಪ್ರತಿಭಟನೆ: ಇನ್‌ಸ್ಪೆಕ್ಟರ್ ಹಾಗೂ ಸಿಬ್ಬಂದಿಯನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿ ಠಾಣೆ ಎದುರು ಮೇಯರ್, ಉಪಮೇಯರ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮುಂದುವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.