
ಹುಬ್ಬಳ್ಳಿ: ಇಲ್ಲಿನ ದೇಶಪಾಂಡೆನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಬುಧವಾರ ಆಯೋಜಿಸಿರುವ ಹುಬ್ಬಳ್ಳಿ ವಲಯದ ‘ಪ್ರಜಾವಾಣಿ–ರಸಪ್ರಶ್ನೆ ಚಾಂಪಿಯನ್‌ಶಿಪ್’ ಸ್ಪರ್ಧೆಗೆ ಗಣ್ಯರು ದೀಪ ಬೆಳಗಿಸುವ ಮೂಲಕ ವಿಧ್ಯುಕ್ತ ಚಾಲನೆ ನೀಡಿದರು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ಈಶ್ವರ ಉಳ್ಳಾಗಡ್ಡಿ, 'ಪ್ರಜಾವಾಣಿ ದಿನಪತ್ರಿಕೆ ಆಯೋಜಿಸಿರುವ ಈ ಸ್ಪರ್ಧೆ ವಿಶೇಷವಾಗಿದೆ. ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆಯಾಗಿದೆ' ಎಂದರು.
'ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ರಸಪ್ರಶ್ನೆ ಸ್ಪರ್ಧೆ ಸಹಕಾರಿಯಾಗಿದೆ. ಪ್ರತಿದಿನ ಪಠ್ಯಕ್ರಮ ಅಧ್ಯಯನ ಮಾಡುವುದರೊಂದಿಗೆ ಇಂತಹ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕು. ಇದರಿಂದ ವ್ಯಕ್ತಿತ್ವ ವಿಕಸನ, ಸರ್ವಾಂಗೀಣ ಅಭಿವೃದ್ದಿ ಸಾಧ್ಯ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿ, ಭವಿಷ್ಯದಲ್ಲಿ ಉನ್ನತ ಹುದ್ದೆಗೇರಲು ರಸಪ್ರಶ್ನೆ ಸ್ಪರ್ಧೆ ಅನುಕೂಲಕಾರಿಯಾಗಿದೆ' ಎಂದು ಹೇಳಿದರು.
'ರಸಪ್ರಶ್ನೆ ಸ್ಪರ್ಧೆಯು ಕುತೂಹಲ ಹೆಚ್ಚಿಸುತ್ತದೆ. ನಮ್ಮ ಜ್ಞಾನ ಯಾವ ಹಂತದಲ್ಲಿದೆ ಎಂಬುದನ್ನು ತಿಳಿಸುತ್ತದೆ. ‘ಪ್ರಜಾವಾಣಿ–ರಸಪ್ರಶ್ನೆ ಚಾಂಪಿಯನ್ ಶಿಪ್’ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಹುಬ್ಬಳ್ಳಿ ವಲಯದವರೇ ಗೆಲುವು ಸಾಧಿಸಬೇಕು. ಆ ನಿಟ್ಟಿನಲ್ಲಿ ತಯಾರಿ ನಡೆಸಬೇಕು' ಎಂದು ತಿಳಿಸಿದರು.
ಕ್ವಿಜ್ ಮಾಸ್ಟರ್ ಮೇಘವಿ ಮಂಜುನಾಥ್ ಅವರು ಕೇಳಿದ ಪ್ರಶ್ನೆಗೆ ಸರಿಯಾಗಿ ಉತ್ತರ ನೀಡಿದ ವಿದ್ಯಾರ್ಥಿಗಳಾದ ಹರಿಶಂಕರ್ ಪವಾರ್, ನವ್ಯಾಶೆಟ್ಟರ್ ಕೂಡ ಗಣ್ಯರೊಂದಿಗೆ ಉದ್ಘಾಟನೆ ನೆರವೇರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.