ADVERTISEMENT

ಹುಬ್ಬಳ್ಳಿ | ನವೋದ್ಯಮ ಆರಂಭಿಸಿ, ಸ್ವಾವಲಂಬಿಯಾಗಿ: ಕಮಿಷನರ್ ಎನ್‌.ಶಶಿಕುಮಾರ್

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 2:51 IST
Last Updated 21 ಡಿಸೆಂಬರ್ 2025, 2:51 IST
ಹುಬ್ಬಳ್ಳಿಯ ಬಿವಿಬಿ ಕ್ಯಾಂಪಸ್‌ ಕೆಎಲ್‌ಇ ಟೆಕ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ಮುಂದೆ ಬನ್ನಿ ಸ್ಟಾರ್ಟ್‌ಅಪ್‌ ಮೀಟ್‌ ಅಪ್‌’ ಸಂವಾದ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ– ಧಾರವಾಡ ನಗರ ಪೊಲೀಸ್‌ ಕಮಿಷನರ್ ಎನ್‌.ಶಶಿಕುಮಾರ್ ಮಾತನಾಡಿದರು
ಹುಬ್ಬಳ್ಳಿಯ ಬಿವಿಬಿ ಕ್ಯಾಂಪಸ್‌ ಕೆಎಲ್‌ಇ ಟೆಕ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ಮುಂದೆ ಬನ್ನಿ ಸ್ಟಾರ್ಟ್‌ಅಪ್‌ ಮೀಟ್‌ ಅಪ್‌’ ಸಂವಾದ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ– ಧಾರವಾಡ ನಗರ ಪೊಲೀಸ್‌ ಕಮಿಷನರ್ ಎನ್‌.ಶಶಿಕುಮಾರ್ ಮಾತನಾಡಿದರು   

ಹುಬ್ಬಳ್ಳಿ: ‘ರಾಜ್ಯದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಪ್ರತಿಭಾನ್ವಿತರು ನವೋದ್ಯಮದ ಸ್ಟಾರ್ಟ್‌ಅಪ್‌ಗಳನ್ನು ಆರಂಭಿಸಬೇಕು. ಇದರಿಂದ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ಪ್ರಾದೇಶಿಕತೆಯ ಬೆಳವಣಿಗೆಯೂ ಆಗುತ್ತದೆ’ ಎಂದು ಹುಬ್ಬಳ್ಳಿ– ಧಾರವಾಡ ನಗರ ಪೊಲೀಸ್‌ ಕಮಿಷನರ್ ಎನ್‌.ಶಶಿಕುಮಾರ್ ಹೇಳಿದರು.

ನಗರದ ಬಿವಿಬಿ ಕ್ಯಾಂಪಸ್‌ ಕೆಎಲ್‌ಇ ಟೆಕ್ ಸಭಾಂಗಣದಲ್ಲಿ ಶನಿವಾರ ‘ಮುಂದೆ ಬನ್ನಿ’ ಸಂಸ್ಥೆ ಹಾಗೂ ಕೆಎಲ್‌ಇ ಸೆಂಟರ್‌ ಫಾರ್ ಟೆಕ್ನಾ‌ಲಜಿ ಇನ್ನೋವೇಷನ್‌ ಆ್ಯಂಡ್ ಎಂಟ್ರಪ್ರನರ್‌ಶಿಪ್‌ ಆಯೋಜಿಸಿದ್ದ ‘ಮುಂದೆ ಬನ್ನಿ ಸ್ಟಾರ್ಟ್‌ಅಪ್‌ ಮೀಟ್‌ ಅಪ್‌’ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.

‘ಸ್ಟಾರ್ಟ್‌ಅಪ್‌ ಆರಂಭಿಸುವ ಮೂಲಕ ದೊಡ್ಡ ಉದ್ಯಮಿಯಾಗುವ ಕನಸು ಕಾಣುತ್ತಿರುವವರಿಗೆ ಹಲವು ಅವಕಾಶಗಳಿವೆ. ಹೂಡಿಕೆಯ ಸಾಮರ್ಥ್ಯಕ್ಕೆ ತಕ್ಕಂತೆ ಪುಟ್ಟದಾಗಿ ಸಂಸ್ಥೆ, ಕಂಪನಿ ಆರಂಭಿಸಿ ದೊಡ್ಡದಾಗಿ ಬೆಳೆಸಬಹುದು. ಇದಕ್ಕಾಗಿಯೇ ಸರ್ಕಾರದ ಯೋಜನೆಗಳಿಂದ ಆರ್ಥಿಕ ನೆರವು ದೊರೆಯಲಿದೆ. ಜೊತೆಗೆ ಕೆಲ ಸಂಸ್ಥೆಗಳಿಂದ ಅಗತ್ಯ ಮಾರ್ಗದರ್ಶನವನ್ನೂ ಪಡೆಯಬಹುದು’ ಎಂದು ಸಲಹೆ ನೀಡಿದರು. 

ADVERTISEMENT

ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಪ್ರೊ.ಚಾನ್ಸಲರ್‌ ಡಾ.ಅಶೋಕ ಶೆಟ್ಟರ್ ಅವರು, ‘ನವೋದ್ಯಮವನ್ನು ಕಟ್ಟುವುದು ಎಂದರೆ ಬಹುತೇಕರು ರಿಸ್ಕ್‌ ಎಂದು ಭಾವಿಸುತ್ತಾರೆ. ಆದರೆ, ಅಗತ್ಯ ಹಣಕಾಸಿನ ನೆರವು, ಮಾರ್ಗದರ್ಶನ ಹಾಗೂ ಉದ್ಯಮದ ಬಗ್ಗೆ ತಿಳಿವಳಿಕೆ ಇದ್ದಲ್ಲಿ ಧೈರ್ಯವಾಗಿ ಚಿಕ್ಕ ಚಿಕ್ಕ ಸ್ಟಾರ್ಟ್‌ಅಪ್‌ಗಳನ್ನು ಆರಂಭಿಸಬಹುದು’ ಎಂದು ಹೇಳಿದರು. 

‘ಮುಂದೆ ಬನ್ನಿ’ ಎಂಬ ಸಂಸ್ಥೆಯು ಹೊಸ ಮತ್ತು ವಿಭಿನ್ನ ಆಲೋಚನೆಗಳೊಂದಿಗೆ ನೂತನವಾಗಿ ಸ್ಟಾರ್ಟ್‌ಅಪ್‌ ಆರಂಭಿಸುವ ಸುಮಾರು ಒಂದು ಲಕ್ಷ ನೂತನ ಉದ್ಯಮಿಗಳಿಗೆ ಮಾರ್ಗದರ್ಶನ ನೀಡುವ ಮೂಲಕ ಹತ್ತು ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದೆ. ಈ ಸಂಸ್ಥೆಯ ಸಂಪರ್ಕ ಬೆಳೆಸಿಕೊಂಡಲ್ಲಿ ಸರಳವಾಗಿ ನೂತನ ಸ್ಟಾರ್ಟ್‌ಅಪ್‌ಗಳನ್ನು ಆರಂಭಿಸಬಹುದು’ ಎಂದರು.

‘ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ನೂತನ ಸ್ಟಾರ್ಟ್ಅಪ್‌ಗಳನ್ನು ಆರಂಭಿಸಲು ಅಗತ್ಯ ಸೌಲಭ್ಯಗಳಿವೆ. ನವೋದ್ಯಮಿಗಳಿಗೆ ಸರ್ಕಾರಿಂದ ಅಗತ್ಯ ಆರ್ಥಿಕ ನೆರವೂ ದೊರೆಯಲಿದೆ. ಇದಕ್ಕೆ ಧೈರ್ಯ ಹಾಗೂ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು’ ಎಂದು ಹೇಳಿದರು.

‘ವ್ಯವಹಾರಿಕ, ತಾಂತ್ರಿಕ ಹಾಗೂ ಎಂಜಿನಿಯರಿಂಗ್ ಶಿಕ್ಷಣ ಪಡೆದ ಲಕ್ಷಾಂತರ ವಿದ್ಯಾರ್ಥಿಗಳು ಪದವಿ ಪ್ರಮಾಣ ‍ಪತ್ರ ಪಡೆದು ಹೊರಗೆ ಬರುತ್ತಾರೆ. ಆದರೆ, ಉದ್ಯಮದ ಕ್ಷೇತ್ರಕ್ಕೆ ಬರುವವರ ಸಂಖ್ಯೆ ವಿರಳ. ವಿದ್ಯಾರ್ಥಿಗಳನ್ನು ಉದ್ಯಮಶೀಲರನ್ನಾಗಿ ಪ್ರೋತ್ಸಾಹಿಸುವುದು ಅಗತ್ಯವಿದೆ. ಇದರಿಂದ ಸಮುದಾಯದ ಬೆಳವಣಿಗೆಯಾಗುತ್ತದೆ’ ಎಂದರು. 

‘ಮುಂದೆ ಬನ್ನಿ’ ಸಂಸ್ಥೆಯ ಸಂಸ್ಥಾಪಕ ವಸಂತ ಶೆಟ್ಟಿ ಅವರು, ‘ರಾಜ್ಯದಲ್ಲಿನ ಟೈರ್‌–2 ಮತ್ತು ಟೈರ್‌ –3 ನಗರಗಳಲ್ಲಿ ನವ ಉದ್ಯಮಿಗಳನ್ನು ಪ್ರೋತ್ಸಾಯಿಸುವುದು, ಸಮುದಾಯ ಆಧಾರಿತ ವೇದಿಕೆಯನ್ನು ಸೃಷ್ಟಿಸುವುದು ಇಂದಿನ ಅಗತ್ಯವಿದೆ’ ಎಂದು ಹೇಳಿದರು.

‘ಜಾಗತಿಕ ಮಾರುಕಟ್ಟೆ ವಿಶಾಲವಾಗಿ ಬೆಳೆದಿದೆ. ಉದ್ಯಮಕ್ಷೇತ್ರಕ್ಕೆ ಬರುವವರು ಕಡಿಮೆ. ಇದಕ್ಕೆ ಮಾರ್ಗದರ್ಶನ, ಉದ್ಯಮದ ತಿಳಿವಳಿಕೆ ಹಾಗೂ ಹಣಕಾಸಿನ ಸಮಸ್ಯೆ ಪ್ರಮುಖ ಕಾರಣ. ಆದರೆ, ಇದಕ್ಕಾಗಿಯೇ ಸರ್ಕಾರಗಳು ವಿವಿಧ ಯೋಜನೆಗಳ ಮೂಲಕ ಆರ್ಥಿಕ ನೆರವು ನೀಡುತ್ತಿವೆ. ಜೊತೆಗೆ ಕೆಲ ವೇದಿಕೆಗಳ ಮೂಲಕ ಮಾರ್ಗದರ್ಶನವನ್ನೂ ಪಡೆಯಬಹುದು‘ ಎಂದರು. 

ವಿಶ್ವವಿದ್ಯಾಲಯದ ಕುಲಪತಿ ಡಾ.ಪ್ರಕಾಶ ತಿವಾರಿ ಅವರು, ‘ಮುಂದೆ ಬನ್ನಿ’ ಸಂಸ್ಥೆಯ ಪ್ರಮುಖರನ್ನು ಗೌರವಿಸಿದರು. 

ಜೆರೋಧಾ ಸಂಸ್ಥೆಯ ನಿಹಾಲ್ ಶೆಟ್ಟಿ, ಸಂತೋಷ ಶೆಟ್ಟಿ, ಜಾವಾ ಕ್ಯಾಪಿಟಲ್‌ನ ಸಹ ಸಂಸ್ಥಾಪಕ ವಿನೋದ್ ಶಂಕರ್, ರಫೀಕ್ ಅಸ್ಲಾಂ, ಚೇತನ್‌ ಶೆಟ್ಟರ್‌, ವಿನಾಯಕ ಹೊಸಮನಿ, ದೇವರಾಜ್ ಇದ್ದರು. 

‘ಉದ್ಯೋಗ ಬೇಡ ಉದ್ದಿಮೆಯಾಗು: ಮನಸ್ಥಿತಿ ಬೆಳೆಯಲಿ’

‘ಪದವಿ ಪಡೆದ ಬಹುತೇಕರು ಯಾವುದಾದರೂ ಒಂದು ಉದ್ಯೋಗ ಪಡೆದು ಸರಳ ಜೀವನ ನಡೆಸಿದರೆ ಸಾಕು ಎನ್ನುತ್ತಿದ್ದಾರೆ. ಬಹುತೇಕ ಕುಟುಂಬಗಳ ಮನಸ್ಥಿತಿ ಇದೇ ಆಗಿದೆ. ಇದು ಬದಲಾಗಬೇಕಿದೆ. ವ್ಯವಹಾರಿಕ ಜ್ಞಾನ ತಂತ್ರಜ್ಞಾನ ಮತ್ತು ಜಾಲತಾಣಗಳ ತಿಳಿವಳಿಕೆಯಿದ್ದರೆ ಉದ್ಯಮ ಆರಂಭಿಸಿ ಆರ್ಥಿಕವಾಗಿ ಬೆಳೆಯಬಹುದು. ಈ ನಿಟ್ಟಿನಲ್ಲಿ ಅಗತ್ಯ ಮಾರ್ಗದರ್ಶನವನ್ನು ನಾವು ನೀಡುತ್ತೇವೆ’ ಎಂದು ವಸಂತ ಶೆಟ್ಟಿ ಹೇಳಿದರು.  ‘ಸಣ್ಣ ಪುಟ್ಟ ವ್ಯಾಪಾರಿಗಳು ತಮ್ಮ ವ್ಯವಹಾರಿಕ ಸ್ಥಳದಿಂದಲೇ ಜಾಗತಿಕ ಮಟ್ಟದಲ್ಲಿಯೂ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ಬೆಳೆದಿದ್ದಾರೆ. ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿದ ವಿದ್ಯಾರ್ಥಿಯೊಬ್ಬರು ಹಾರ್ಡ್‌ವೇರ್‌ ಸಂಸ್ಥೆಯನ್ನು ಕಟ್ಟಿ ಚೀನಾ ದೇಶದ ಬ್ರ್ಯಾಂಡೆಡ್‌ ಉತ್ಪನ್ನಗಳಿಗೆ ಪೈಪೂಟಿ ನೀಡುವ ಮಟ್ಟಕ್ಕೆ ಬೆಳೆದಿದ್ದಾರೆ. ಪ್ರತಿಭಾನ್ವಿತರು ಉದ್ಯೋಗಿಯಾಗುವ ಬದಲು ಉದ್ದಿಮೆಯಾಗುವ ಮನಸ್ಥಿತಿ ಬೆಳೆಸಿಕೊಳ್ಳಬೇಕು’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.