
ಗಣೇಶ ಗಿಡ್ಡನ್ನವರ, ಪ್ರದೀಪ ದೊಡಮನಿ, ಶಿವಾನಂದ ಕಾನಾನ
ಹುಬ್ಬಳ್ಳಿ: ಪತಿಯೊಂದಿಗೆ ಜಗಳ ಮಾಡಿಕೊಂಡು ಹುಬ್ಬಳ್ಳಿಗೆ ಬಂದಿದ್ದ 32 ವರ್ಷದ ಮಹಿಳೆಯನ್ನು ಆಟೊದಲ್ಲಿ ಅಪಹರಿಸಿ, ಅವರಿಗೆ ಮದ್ಯ ಕುಡಿಸಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಇಲ್ಲಿನ ಶಿವಶಂಕರ ಕಾಲೊನಿ ನಿವಾಸಿಗಳಾದ ಆಟೊ ಚಾಲಕ ಶಿವಾನಂದ ಕಾನಾನ, ಗೌಂಡಿ ಕಾರ್ಮಿಕ ಗಣೇಶ ಗಿಡ್ಡನ್ನವರ ಹಾಗೂ ವಿಡಿಯೊ ಚಿತ್ರೀಕರಣ ಮಾಡಿದ ಪೇಂಟರ್ ಪ್ರದೀಪ ದೊಡಮನಿ ಬಂಧಿತರು.
ಹಾವೇರಿಯ ನಾಗೇನಮಟ್ಟಿಯವರಾದ ಸಂತ್ರಸ್ತೆಗೆ ನಗರದ ಕೆಎಂಸಿ–ಆರ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಸುಪರ್ದಿಗೆ ಒಪ್ಪಿಸಲಾಗಿದೆ.
ಮಹಿಳೆ ಶಿವಮೊಗ್ಗದಲ್ಲಿ ವಾಸವಿದ್ದಾಗ ಗಂಡನ ಜೊತೆ ಜಗಳ ಮಾಡಿಕೊಂಡಿದ್ದರು. ಪತ್ನಿ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಪತಿ ಶಿವಮೊಗ್ಗದ ಜೈಲಿನಲ್ಲಿದ್ದಾರೆ. ಒಂದೂವರೆ ತಿಂಗಳ ಹಿಂದೆ ಹುಬ್ಬಳ್ಳಿಗೆ ಬಂದಿದ್ದ ಮಹಿಳೆ, ಇಲ್ಲಿನ ಸಿದ್ಧಾರೂಢಮಠ, ವಿವಿಧ ದೇವಸ್ಥಾನಗಳು, ಬಸ್ ನಿಲ್ದಾಣಗಳಲ್ಲಿ ರಾತ್ರಿ ತಂಗುತ್ತಿದ್ದರು.
ಏನಿದು ಘಟನೆ: ಆರೋಪಿಗಳಾದ ಶಿವಾನಂದ ಕಾನಾನ ಮತ್ತು ಗಣೇಶ ಗಿಡ್ಡನ್ನವರ ಜ. 9ರಂದು ರಾತ್ರಿ 12 ಗಂಟೆ ಸುಮಾರಿಗೆ ಊಟ ಕೊಡುವ ನೆಪದಲ್ಲಿ, ಮಹಿಳೆಯನ್ನು ನಗರದ ಇಂಡಿ ಪಂಪ್ ಬಳಿಯ ಅಂಬೇಡ್ಕರ್ ಮೈದಾನದಿಂದ ಆನಂದನಗರದ ಕುಷ್ಠ ರೋಗ ಆಸ್ಪತ್ರೆ ಬಳಿಯ ಅರಣ್ಯ ಪ್ರದೇಶಕ್ಕೆ ಆಟೊದಲ್ಲಿ ಕರೆದೊಯ್ದಿದ್ದರು. ನಂತರ ಅವರಿಗೆ ಮದ್ಯ ಕುಡಿಸಿ, ಹಲ್ಲೆ ನಡೆಸಿದ್ದೂ ಅಲ್ಲದೆ, ಅತ್ಯಾಚಾರ ಎಸಗಿದ್ದರು.
‘ಪ್ರದೀಪ ದೊಡಮನಿ ಎಂಬಾತ ಕೃತ್ಯವನ್ನು ವಿಡಿಯೊ ಮಾಡಿ ಹಾಗೂ ಫೋಟೊ ತೆಗೆದು, ಅವುಗಳನ್ನು ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಹಂಚಿಕೆ ಮಾಡಿದ್ದ. ಮಹಿಳೆ ನೀಡಿದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದರು.
ಅತ್ಯಾಚಾರ, ಸಾಮಾಜಿಕ ಜಾಲಾತಾಣದಲ್ಲಿ ಅಶ್ಲೀಲ ವಿಡಿಯೊ ಹಂಚಿಕೆ, ಆರೋಪಿಗಳ ಮೇಲೆ ಸಾರ್ವಜನಿಕರು ಹಲ್ಲೆ ನಡೆಸಿದ ಬಗ್ಗೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ.
ಅತ್ಯಾಚಾರ ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದೆ. ಆದರೆ ಸ್ಥಳೀಯರು ಕಾನೂನು ಕೈಗೆ ತೆಗೆದುಕೊಂಡು ಆರೋಪಿಗಳ ಮೇಲೆ ಹಲ್ಲೆ ನಡೆಸಿದ್ದು ತಪ್ಪುಎನ್. ಶಶಿಕುಮಾರ್ ಪೊಲೀಸ್ ಕಮಿಷನರ್ ಹು–ಧಾ ಮಹಾನಗರ
ಅತ್ಯಾಚಾರ ಕೃತ್ಯದ ಆರೋಪಿಗಳ ತಲೆ ಕೂದಲು ಕತ್ತರಿಸಿ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಪೊಲೀಸರು ಶಿವಶಂಕರ ಕಾಲೊನಿಯ 30ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದರು. ಈ ವೇಳೆ ಠಾಣೆ ಬಳಿ ಸ್ಥಳೀಯರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು. ‘ಆರೋಪಿಗಳನ್ನು ಹಿಡಿದು ಕೊಟ್ಟಿದ್ದಕ್ಕೆ ನಮ್ಮ ವಿರುದ್ಧವೇ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
‘ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಅತ್ಯಾಚಾರದ ವಿಡಿಯೊ ಹಂಚಿಕೆ ಆಗಿದ್ದನ್ನು ಗಮನಿಸಿದ ಸ್ಥಳೀಯರು ಆರೋಪಿಗಳಾದ ಶಿವಾನಂದ ಮತ್ತು ಗಣೇಶ ಅವರ ತಲೆಕೂದಲು ಕತ್ತರಿಸಿ ಹಲ್ಲೆ ನಡೆಸಿದ್ದರು. ಈ ಕುರಿತು ಶಿವಾನಂದ ಸ್ಥಳೀಯರ ವಿರುದ್ಧ ದೂರು ನೀಡಿದ್ದರು. ಅಷ್ಟರಲ್ಲಿ ವಿಡಿಯೊ ಆಧರಿಸಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದೆವು ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.