ADVERTISEMENT

ಹುಬ್ಬಳ್ಳಿಗೆ ವರ್ಷಾಂತ್ಯಕ್ಕೆ 40 ಎಂಎಲ್‌ಡಿ ಹೆಚ್ಚುವರಿ ನೀರು ಪೂರೈಕೆ

ಅಮ್ಮಿನಭಾವಿ ಪಂಪ್‌ಹೌಸ್‌, ಸವದತ್ತಿ ಜಾಕ್‌ವೆಲ್‌ನಲ್ಲಿ ಭರದಿಂದ ನಡೆಯುತ್ತಿರುವ ಕಾಮಗಾರಿ: ಜಗದೀಶ ಶೆಟ್ಟರ್‌ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2019, 16:10 IST
Last Updated 17 ಜೂನ್ 2019, 16:10 IST
ಸವದತ್ತಿ ಸಮೀಪದ ಮಲಪ್ರಭಾ ಜಲಾಯಶದಿಂದ ಹುಬ್ಬಳ್ಳಿ–ಧಾರವಾಡಕ್ಕೆ ನೀರು ಪೂರೈಸುವ ಜಾಕ್‌ವೆಲ್‌ ಅನ್ನು ಶಾಸಕ ಜಗದೀಶ ಶೆಟ್ಟರ್‌ ಸೋಮವಾರ ವೀಕ್ಷಿಸಿದರು. ಶಾಸಕ ಶಂಕರಪಾಟೀಲ ಮುನೇನಕೊಪ್ಪ, ಜಿಲ್ಲಾಧಿಕಾರಿ ದೀಪಾ ಚೋಳನ್‌ ಇದ್ದಾರೆ –ಪ್ರಜಾವಾಣಿ ಚಿತ್ರ
ಸವದತ್ತಿ ಸಮೀಪದ ಮಲಪ್ರಭಾ ಜಲಾಯಶದಿಂದ ಹುಬ್ಬಳ್ಳಿ–ಧಾರವಾಡಕ್ಕೆ ನೀರು ಪೂರೈಸುವ ಜಾಕ್‌ವೆಲ್‌ ಅನ್ನು ಶಾಸಕ ಜಗದೀಶ ಶೆಟ್ಟರ್‌ ಸೋಮವಾರ ವೀಕ್ಷಿಸಿದರು. ಶಾಸಕ ಶಂಕರಪಾಟೀಲ ಮುನೇನಕೊಪ್ಪ, ಜಿಲ್ಲಾಧಿಕಾರಿ ದೀಪಾ ಚೋಳನ್‌ ಇದ್ದಾರೆ –ಪ್ರಜಾವಾಣಿ ಚಿತ್ರ   

ನವಿಲುತೀರ್ಥ(ಹುಬ್ಬಳ್ಳಿ): ಮಲಪ್ರಭಾ ಜಲಾಶಯದಿಂದ ಹುಬ್ಬಳ್ಳಿ ನಗರಕ್ಕೆ 40 ಎಂಎಲ್‌ಡಿ ಹೆಚ್ಚುವರಿ ನೀರು ಪೂರೈಕೆ ಕಾಮಗಾರಿಯನ್ನು ಡಿಸೆಂಬರ್‌ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಜಲಮಂಡಳಿ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಶಾಸಕ ಜಗದೀಶ ಶೆಟ್ಟರ್‌ ತಿಳಿಸಿದರು.

ಹುಬ್ಬಳ್ಳಿ–ಧಾರವಾಡ ಮಹಾನಗರ ‍ಪಾಲಿಕೆಯ ₹ 26 ಕೋಟಿ ಮೊತ್ತದಲ್ಲಿ ಧಾರವಾಡ ತಾಲ್ಲೂಕಿನ ಅಮ್ಮಿನಭಾವಿಯಲ್ಲಿ ನಿರ್ಮಾಣವಾಗುತ್ತಿರುವ ಜಲ ಶುದ್ಧೀಕರಣ ಘಟಕ, ಪಂಪ್‌ಹೌಸ್‌ ಮತ್ತು 850 ಎಚ್‌ಪಿ ಸಾಮಾರ್ಥ್ಯದ ಮೂರು ಪಂಪ್‌ಸೆಟ್‌ ಅಳವಡಿಕೆ ಕಾಮಗಾರಿ ಹಾಗೂ ಸವದತ್ತಿ ಸಮೀಪ ಮಲಪ್ರಭಾ ಜಲಾಶಯದ ಜಾಕ್‌ವೆಲ್‌ನಲ್ಲಿ 1944 ಎಚ್‌ಪಿ ಸಾಮಾರ್ಥ್ಯದ ಹೊಸ ಪಂಪ್‌ಸೆಟ್‌ ಅಳವಡಿಕೆ ಕಾಮಗಾರಿಯನ್ನು ಸೋಮವಾರ ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಅವಳಿ ನಗರಕ್ಕೆ ದಿನವೊಂದಕ್ಕೆ 200 ಎಂಎಲ್‌ಡಿ ನೀರಿನ ಅಗತ್ಯವಿದೆ. ಆದರೆ, 2016ರಿಂದ ನೀರಸಾಗರ ಜಲಾಶಯ ಭರಿದಾದ ಬಳಿಕ 40 ಎಂಎಲ್‌ಡಿ ನೀರಿನ ಕೊರತೆಯಾಗಿದೆ. ಇದರಿಂದ ಹಳೇ ಹುಬ್ಬಳ್ಳಿ, ಗೋಕುಲ ರೋಡ್‌ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ನವಿಲುತೀರ್ಥದಿಂದ ಪೂರೈಕೆಯಾಗುವ 160 ಎಂಎಲ್‌ಡಿ ನೀರನ್ನೇ ಹೊಂದಾಣಿಕೆ ಮಾಡಿಕೊಂಡು ಸದ್ಯ ಪೂರೈಕೆ ಮಾಡಲಾಗುತ್ತಿದೆ. ಹೀಗಾಗಿ ನಗರದ ಕೆಲವು ಭಾಗಗಳಿಗೆ 10 ರಿಂದ 12 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ ಎಂದರು.

ADVERTISEMENT

ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ನವಿಲುತೀರ್ಥದಿಂದ 40 ಎಂಎಲ್‌ಡಿ ಹೆಚ್ಚುವರಿ ನೀರು ಪೂರೈಕೆ ಮಾಡುವ ಉದ್ದೇಶದಿಂದ ಮಹಾನಗರ ಪಾಲಿಕೆಯಿಂದ ₹ 26 ಕೋಟಿ ಮೊತ್ತದಲ್ಲಿ ರೂಪಿಸಿರುವ ಯೋಜನೆ ಜನವರಿಯಿಂದ ಆರಂಭವಾಗಿದೆ. ಇದು ಪೂರ್ಣಗೊಂಡ ಬಳಿಕ ನಗರಕ್ಕೆ ಮೂರರಿಂದ ನಾಲ್ಕು ದಿನಕ್ಕೊಮ್ಮೆ ನೀರು ಪೂರೈಕೆಯಾಗಲಿದೆ. ಅಲ್ಲಿಯ ವರೆಗೂ ನಗರದ ಜನತೆ ನೀರಿನ ಸಮಸ್ಯೆಯನ್ನು ಎದುರಿಸುವುದು ಅನಿವಾರ್ಯ ಎಂದು ಅವರು ಹೇಳಿದರು.

ಮಲಪ್ರಭಾ ಜಲಾಶಯದಿಂದ ಹುಬ್ಬಳ್ಳಿ–ಧಾರವಾಡದ ವರೆಗೆ ಈಗಿರುವ ಪೈಪ್‌ಲೈನ್‌ನಲ್ಲೇ 40 ಎಂಎಲ್‌ಡಿ ಹೆಚ್ಚುವರಿ ನೀರು ಪೂರೈಕೆಯಾಗಲಿದೆಯೇ ಹೊರತು ಹೊಸ ಪೈಪ್‌ಲೈನ್ ಅಳವಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸರ್ಕಾರದಿಂದ ವಿಳಂಬ:

ಮಲಪ್ರಭಾದಿಂದ 40 ಎಂಎಲ್‌ಡಿ ಹೆಚ್ಚುವರಿ ನೀರು ಪೂರೈಕೆ ಸಂಬಂಧ 2016ರಲ್ಲೇ ಮಹಾನಗರ ಪಾಲಿಕೆಯು ರೂಪಿಸಿದ್ದ ಪ್ರಸ್ತಾವನೆಗೆ ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅನುಮತಿ ನೀಡದ ಕಾರಣ ಯೋಜನೆ ಅನುಷ್ಠಾನ ವಿಲಂಬವಾಯಿತು. ಇದೀಗ ಸಮ್ಮಿಶ್ರ ಸರ್ಕಾರ ಯೋಜನೆಗೆ ಅನುಮೋದನೆ ನೀಡಿದ್ದು, ಕಾಮಗಾರಿ ಆರಂಭವಾಗಿದೆ ಎಂದರು.

ಸದ್ಯ ನವಿಲುತೀರ್ಥ ಜಲಾಶಯದಲ್ಲಿ 0.9 ಟಿಎಂಸಿ ನೀರು ಇದ್ದು, ಜುಲೈ ಅಂತ್ಯದ ವರಗೆ ಕುಡಿಯಲು ಸಾಕಾಗುತ್ತದೆ. ಅಷ್ಟರಲ್ಲೇ ಮಳೆ ಬಂದರೆ ಜಲಾಶಯಕ್ಕೆ ನೀರು ಹರಿದುಬರಲಿದೆ ಎಂದರು.

ನೀರ ಸಾಗರಕ್ಕೆ ಕಾಳಿ ನೀರು:

ಭರಿದಾಗಿರುವ ನೀರಸಾಗರ ಜಲಾಶಯಕ್ಕೆ ಕಾಳಿ ನದಿಯಿಂದ ನೀರು ತುಂಬಿಸುವ ಯೋಜನೆಯೊಂದನ್ನು ಜಲಮಂಡಳಿ ಮತ್ತು ಜಿಲ್ಲಾಡಳಿತ ರೂಪಿಸಿದೆ. ಈ ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದರೆ ಕಲಘಟಗಿ, ಕುಂದಗೋಳ ಮತ್ತು ಹುಬ್ಬಳ್ಳಿ ತಾಲ್ಲೂಕಿನ ಹಳ್ಳಿಗಳಿಗೆ ಸಮರ್ಪಕ ಕುಡಿಯುವ ನೀರು ಲಭಿಸಲಿದೆ ಎಂದು ಹೇಳಿದರು.

ಮರು ಟೆಂಡರ್‌:

₹ 750 ಕೋಟಿ ಮೊತ್ತದ ವಿಶ್ವಬ್ಯಾಂಕ್‌ ನೆರವಿನ 24X7 ನೀರು ಪೂರೈಕೆ ಯೋಜನೆಗೆ ಮರು ಟೆಂಡರ್‌ ಕರೆಯಲಾಗಿದೆ. ಶೀಘ್ರದಲ್ಲೇ ಈ ಯೋಜನೆಯೂ ಅವಳಿ ನಗರದಲ್ಲಿ ಅನುಷ್ಠಾನವಾಗಲಿದೆ ಎಂದರು.

ಜಿಲ್ಲಾಧಿಕಾರಿ ದೀಪಾ ಚೋಳನ್‌, ಮಹಾನಗರ ಪಾಲಿಕೆ ಆಯುಕ್ತ ಪ್ರಶಾಂತ್‌ ಕುಮಾರ್‌ ಮಿಶ್ರಾ, ಜಲಮಂಡಳಿ ಮುಖ್ಯ ಎಂಜಿನಿಯರ್‌ ರಾಜು ಡಿ.ಎಲ್‌., ಕಾರ್ಯಪಾಲಕ ಎಂಜಿನಿಯರ್‌ ರಾಜಗೋಪಾಲ, ಮಲಪ್ರಭಾ ಬಲದಂಡೆ ಕಾಳುವೆಯ ಬ್ಯಾಹಟ್ಟಿ ವಿಭಾಗದ ಸಹಾಯಕ ಎಂಜಿನಿಯರ್‌ ಆರ್‌.ಎಂ.ಜಾಲಗಾರ, ಮಾಜಿ ಶಾಸಕಿ ಸೀಮಾ ಮಸೂತಿ, ನಾಗೇಶ ಕಲಬುರ್ಗಿ, ಪಾಲಿಕೆ ಮಾಜಿ ಸದಸ್ಯರಾದ ವೀರಣ್ಣ ಸವಡಿ, ಮಹೇಶ ಬುರ್ಲಿ, ಉಮೇಶ ಕೌಜಗೇರಿ, ಬಿಜೆಪಿ ಹುಬ್ಬಳ್ಳಿ–ಧಾರವಾಡ ಸೆಂಟ್ರಲ್‌ ವಿಧಾನಸಭಾ ಕ್ಷೇತ್ರದ ವಕ್ತಾರ ರವಿ ನಾಯಕ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.