ADVERTISEMENT

ಕೆಸಿಟಿಆರ್‌ಐ ಕ್ಯಾನ್ಸರ್ ಆಸ್ಪತ್ರೆಗೆ ಎನ್‌ಎಬಿಎಚ್‌ ಮಾನ್ಯತೆ

ಬ್ರೆಕಿಥೆರಪಿ ಚಿಕಿತ್ಸೆಗಾಗಿ ದುಬಾರಿ ₹2 ಕೋಟಿ ಮೊತ್ತದ ವೈದ್ಯಕೀಯ ಉಪಕರಣ ಖರೀದಿ

​ಪ್ರಜಾವಾಣಿ ವಾರ್ತೆ
Published 29 ಜೂನ್ 2019, 10:24 IST
Last Updated 29 ಜೂನ್ 2019, 10:24 IST
ನವನಗರದ ಕೆಸಿಟಿಆರ್‌ಐನಲ್ಲಿ ಬ್ರೇಕಿಥೆರಪಿ ಚಿಕಿತ್ಸೆಗಾಗಿ ಖರೀದಿಸಿರುವ ಉಪಕರಣವನ್ನು ಸಂಸ್ಥೆಯ ಅಧ್ಯಕ್ಷ ಡಾ. ಬಸವರಾಜ ಆರ್‌. ಪಾಟೀಲ ಪರಿಶೀಲಿಸಿದರು. ಸಂಸ್ಥೆಯ ನಿರ್ದೇಶಕರಾದ ಮಹೇಂದ್ರ ಸಿಂಘಿ, ಡಾ. ಎಸ್‌.ಎಸ್‌. ಹಿರೇಮಠ, ಕಾರ್ಯದರ್ಶಿ ಡಾ. ಎಸ್‌.ವಿ. ಬೆಂಬಳಗಿ ಹಾಗೂ ಆಡಳಿತಾಧಿಕಾರಿ ಡಾ. ಮಂಜುಳಾ ಹುಗ್ಗಿ ಇದ್ದಾರೆ
ನವನಗರದ ಕೆಸಿಟಿಆರ್‌ಐನಲ್ಲಿ ಬ್ರೇಕಿಥೆರಪಿ ಚಿಕಿತ್ಸೆಗಾಗಿ ಖರೀದಿಸಿರುವ ಉಪಕರಣವನ್ನು ಸಂಸ್ಥೆಯ ಅಧ್ಯಕ್ಷ ಡಾ. ಬಸವರಾಜ ಆರ್‌. ಪಾಟೀಲ ಪರಿಶೀಲಿಸಿದರು. ಸಂಸ್ಥೆಯ ನಿರ್ದೇಶಕರಾದ ಮಹೇಂದ್ರ ಸಿಂಘಿ, ಡಾ. ಎಸ್‌.ಎಸ್‌. ಹಿರೇಮಠ, ಕಾರ್ಯದರ್ಶಿ ಡಾ. ಎಸ್‌.ವಿ. ಬೆಂಬಳಗಿ ಹಾಗೂ ಆಡಳಿತಾಧಿಕಾರಿ ಡಾ. ಮಂಜುಳಾ ಹುಗ್ಗಿ ಇದ್ದಾರೆ   

ಹುಬ್ಬಳ್ಳಿ: ಇಲ್ಲಿನ ನವನಗರದಲ್ಲಿರುವ ಕರ್ನಾಟಕ ಕ್ಯಾನ್ಸರ್‌ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆಗೆ (ಕೆಸಿಟಿಆರ್‌ಐ), ಆಸ್ಪತ್ರೆಗಳು ಮತ್ತು ಆರೋಗ್ಯ ಸೇವೆ ಒದಗಿಸುವ ರಾಷ್ಟ್ರೀಯ ಮಾನ್ಯತಾ ಮಂಡಳಿಯ (ಎನ್‌ಎಬಿಎಚ್‌) ಮಾನ್ಯತೆ ಸಿಕ್ಕಿದೆ.

‘ಉತ್ತರ ಕರ್ನಾಟಕ ಭಾಗದಲ್ಲಿ ಕ್ಯಾನ್ಸರ್‌ಗಾಗಿ ಇರುವ ಏಕೈಕ ಆಸ್ಪತ್ರೆ ನಮ್ಮದಾಗಿದೆ. 40 ವರ್ಷಗxಳಿಂದ ನೀಡುತ್ತಾ ಬಂದಿರುವ ಗುಣಮಟ್ಟದ ಸೇವೆ, ಸಿಬ್ಬಂದಿಯ ಸೇವಾ ಮನೋಭಾವ ಹಾಗೂ ಕಾಲಕ್ಕೆ ತಕ್ಕಂತೆ ಚಿಕಿತ್ಸಾ ವಿಧಾನದಲ್ಲಿ ಬದಲಾವಣೆ ಹಾಗೂ ಅವಿರತ ಪ್ರಯತ್ನದಿಂದಾಗಿ ಎನ್‌ಎಬಿಎಚ್‌ ಮಾನ್ಯತೆ ಸಿಕ್ಕಿದೆ’ ಎಂದು ಸಂಸ್ಥೆಯ ಅಧ್ಯಕ್ಷ ಡಾ. ಬಸವರಾಜ ಆರ್. ಪಾಟೀಲ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಚಾರಿಟೇಬಲ್ ಟ್ರಸ್ಟ್‌ನಡಿ ಕಾರ್ಯನಿರ್ವಹಿಸುತ್ತಿರುವ ನಮ್ಮ ಆಸ್ಪತ್ರೆ, ಟರ್ಸರಿ ಕ್ಯಾನ್ಸರ್ ಕೇರ್ ಸೆಂಟರ್ ಆಗಿ ಪರಿಗಣಿತವಾಗಿದೆ. ಇಲ್ಲಿನ ಸೇವೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಒಟ್ಟು ₹45 ಕೋಟಿ ಅನುದಾನ ಸಿಗಲಿದೆ. ಈ ಪೈಕಿ ರಾಜ್ಯ ಸರ್ಕಾರವು ₹18 ಕೋಟಿ ಮಂಜೂರು ಮಾಡಿದ್ದು, ಉಳಿದ ₹27 ಕೋಟಿ ಕೇಂದ್ರ ಸರ್ಕಾರದಿಂದ ಬರಲಿದೆ’ ಎಂದು ತಿಳಿಸಿದರು.

ADVERTISEMENT

‘ಆಸ್ಪತ್ರೆಯ 150 ಹಾಸಿಗೆ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಳಕ್ಕೆ ಹಾಗೂ ರೋಗಿಗಳ ಕಡೆಯವರು ಉಳಿದುಕೊಳ್ಳಲು ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಈ ಅನುದಾನವನ್ನು ಬಳಸಿಕೊಳ್ಳಲಾಗುವುದು’ ಎಂದು ಹೇಳಿದರು.

ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಮಂಜುಳಾ ಹುಗ್ಗಿ, ‘ಎನ್‌ಎಬಿಎಚ್‌ ಮಾನ್ಯತೆ ಪಡೆದಿರುವ ರಾಜ್ಯದ ಮೂರನೇ ಆಸ್ಪತ್ರೆ ಹಾಗೂ ಉತ್ತರ ಕರ್ನಾಟಕದ ಮೊದಲ ಆಸ್ಪತ್ರೆ ನಮ್ಮದಾಗಿದೆ. ಚಿಕಿತ್ಸೆ ಗುಣಮಟ್ಟ, ಉತ್ತಮ ಆರೈಕೆ, ನೈರ್ಮಲ್ಯ, ಸೋಂಕು ನಿಯಂತ್ರಣ, ಸೋಂಕು ನಿಯಂತ್ರಣ, ಔಷಧಾಲಯ, ಅಗ್ನಿ ಸುರಕ್ಷತಾ ಕ್ರಮ ಸೇರಿದಂತೆ ಒಟ್ಟು ಹತ್ತು ವಿಷಯಗಳಲ್ಲಿ 600 ಮಾನದಂಡಗಳನ್ನು ಆಧರಿಸಿ ಎನ್‌ಎಬಿಎಚ್‌ ಮಾನ್ಯತೆ ನೀಡಲಾಗುತ್ತದೆ’ ಎಂದರು.

ಆಸ್ಪತ್ರೆಯ ನಿರ್ದೇಶಕ ಮಹೇಂದ್ರ ಸಿಂಘಿ ಮಾತನಾಡಿ, ‘ಪದ್ಮಶ್ರೀ ಆರ್‌.ಬಿ. ಪಾಟೀಲ ಅವರ ನೇತೃತ್ವದಲ್ಲಿ ಸ್ಥಾಪನೆಯಾದ ಈ ಆಸ್ಪತ್ರೆ 40 ವರ್ಷಗಳಿಂದ ಬಡ ಕ್ಯಾನ್ಸರ್ ರೋಗಿಗಳಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುತ್ತಾ ಬಂದಿದೆ. ಇದೀಗ ಎನ್‌ಎಬಿಎಚ್‌ ಮಾ‌ನ್ಯತೆ ಸಿಕ್ಕಿರುವುದು ಆಸ್ಪತ್ರೆಯ ಸೇವೆಗೆ ಸಿಕ್ಕ ಗೌರವವಾಗಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.