ADVERTISEMENT

ಹುಬ್ಬಳ್ಳಿ | ಹುಡಾ ವ್ಯಾಪ್ತಿ ವಿಸ್ತರಣೆ; ಅಭಿವೃದ್ಧಿಯತ್ತ ದಾಪುಗಾಲು

ಶ್ರೀಕಾಂತ ಕಲ್ಲಮ್ಮನವರ
Published 20 ಅಕ್ಟೋಬರ್ 2025, 3:01 IST
Last Updated 20 ಅಕ್ಟೋಬರ್ 2025, 3:01 IST
ನವನಗರದಲ್ಲಿರುವ ಹುಬ್ಬಳ್ಳಿ– ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ
ನವನಗರದಲ್ಲಿರುವ ಹುಬ್ಬಳ್ಳಿ– ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ   

ಹುಬ್ಬಳ್ಳಿ: ಹುಬ್ಬಳ್ಳಿ– ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ (ಹುಡಾ) ಸ್ಥಳೀಯ ಯೋಜನಾ ಪ್ರದೇಶ (ಎಲ್‌ಪಿಎ- ಲೋಕಲ್‌ ಪ್ಲ್ಯಾನಿಂಗ್‌ ಏರಿಯಾ) ವಿಸ್ತರಿಸುವುದಕ್ಕೆ ರಾಜ್ಯ ಸರ್ಕಾರ ಇತ್ತೀಚೆಗೆ ಅನುಮತಿ ನೀಡಿದ್ದು, ಅವಳಿ ನಗರದ ಅಭಿವೃದ್ಧಿಗೆ ಬಲನೀಡಿದೆ. ನಗರದ ಅಭಿವೃದ್ಧಿ ಜೊತೆಗೆ ಇಲ್ಲಿನ ಜನರ ಜೀವನ ಮಟ್ಟ ಕೂಡ ಸುಧಾರಣೆಯಾಗುವ ನಿರೀಕ್ಷೆ ಮೂಡಿಸಿದೆ. 

ವಿಶೇಷವಾಗಿ ರಿಯಲ್‌ ಎಸ್ಟೇಟ್‌ ಕ್ಷೇತ್ರಕ್ಕೆ ಇದು ಶಕ್ತಿ ತುಂಬಲಿದೆ. ಮಹಾನಗರದ ಸುತ್ತ ಬೆಳೆಯುತ್ತಿದ್ದ ಅನಧಿಕೃತ ಬಡಾವಣೆಗಳಿಗೆ ಅಂಕುಶ ಹಾಕಲು ಇದು ನೆರವಾಗಲಿದೆ. ರಸ್ತೆ, ನೀರು, ವಿದ್ಯುತ್‌, ಒಳಚರಂಡಿ ಸೇರಿದಂತೆ ಅಗತ್ಯ  ಮೂಲಸೌಕರ್ಯಗಳನ್ನು ಒಳಗೊಂಡ ಹಾಗೂ ಯಾವುದೇ ತಂಟೆ– ತಕರಾರು ಇಲ್ಲದ, ಸಮರ್ಪಕ ದಾಖಲೆಗಳನ್ನು ಹೊಂದಿದ ನಿವೇಶನ ಪಡೆಯಬೇಕೆನ್ನುವ ಜನರ ಆಸೆ ಈ ಮೂಲಕ ಕೈಗೂಡಲಿದೆ. 

ಏನಿದು ಎಲ್‌ಪಿಎ: ಹುಬ್ಬಳ್ಳಿ – ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ) ಮುಂಚೆ 408 ಚದರ ಕಿ.ಮೀ ವ್ಯಾಪ್ತಿಯಲ್ಲಿ 40,208 ಹೆಕ್ಟೇರ್‌ ಪ್ರದೇಶ ಹೊಂದಿತ್ತು. ಈ ಪ್ರದೇಶಕ್ಕೆ ಹೊಂದಿಕೊಂಡ ಹಲವು ಗ್ರಾಮ, ಪ್ರದೇಶಗಳು ಹುಡಾ ವ್ಯಾಪ್ತಿಯಿಂದ ಹೊರಗಿದ್ದವು. ಹೀಗಾಗಿ ಇಲ್ಲಿ ಅಣಬೆ ಕೊಡೆಗಳಂತೆ ಹಲವು ಅನಧಿಕೃತ ಬಡಾವಣೆಗಳು ತಲೆಎತ್ತಿದ್ದವು. ಇವುಗಳ ಮೇಲೆ ಯಾವುದೇ ಅಂಕುಶ ಇರಲಿಲ್ಲ.

ADVERTISEMENT

ಒಳಚರಂಡಿ, ರಸ್ತೆ, ವಿದ್ಯುತ್‌ ಸಂಪರ್ಕ ನೀಡದೇ ನಿವೇಶನಗಳನ್ನು ಮಾರಾಟ ಮಾಡಿ, ಕೈತೊಳೆದುಕೊಳ್ಳುತ್ತಿದ್ದರು. ಇಂತಹ ಬಿಲ್ಡರ್‌ಗಳು ತೋಳ್ಬಲ, ಹಣಬಲ ಹೊಂದಿದ್ದರಿಂದ ಜನಸಾಮಾನ್ಯರು ಅವರನ್ನು ಪ್ರಶ್ನಿಸಲು ಸಾಧ್ಯವಾಗುತ್ತಿರಲಿಲ್ಲ. ನಿವೇಶನ ಪಡೆದ ಮುಗ್ಧ ಜನ ನಂತರ ಪರದಾಡ ಬೇಕಾಗುತ್ತಿತ್ತು. ಸ್ವತಃ ತಾವೇ ನಿಂತು ಒಳಚರಂಡಿ, ರಸ್ತೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದರು.

ಇದಕ್ಕೆಲ್ಲ ಕಡಿವಾಣ ಹಾಕಬೇಕು, ಅನಧಿಕೃತ ಬಡಾವಣೆಗಳ ಮೇಲೆ ಅಂಕುಶ ಹೇರಬೇಕು, ನಿವೇಶನದಾರರಿಗೆ ಎಲ್ಲ  ಮೂಲಸೌಕರ್ಯ ಒದಗಿಸಬೇಕೆನ್ನುವ ಉದ್ದೇಶದಿಂದ ಹುಡಾ ಅಧ್ಯಕ್ಷ ಶಾಕೀರ ಸನದಿ ಹಾಗೂ ಅವರ ಅಧಿಕಾರಿಗಳ ತಂಡ  ಸ್ಥಳೀಯ ಯೋಜನಾ ಪ್ರದೇಶ (ಎಲ್‌ಪಿಎ) ವಿಸ್ತರಿಸಲು ಕೈಹಾಕಿತು. ಈಗಾಗಲೇ ಇದ್ದ 46 ಪ್ರದೇಶ/ಗ್ರಾಮಗಳ ಜೊತೆಗೆ ಅವುಗಳಿಗೆ ಹೊಂದಿಕೊಂಡಿದ್ದ ಹೊಸ 46 ಹಳ್ಳಿಗಳನ್ನು ಹುಡಾ ವ್ಯಾಪ್ತಿಗೆ ಸೇರಿಸಿ, ಎಲ್‌ಪಿಎ ರಚಿಸಿದರು.

ಈಗಾಗಲೇ ಇದ್ದ 408 ಚದರ ಕಿ.ಮೀ ವ್ಯಾಪ್ತಿಯು, ಈಗ 712 ಚದರ ಕಿ.ಮೀ.ಗೆ ಏರಿಕೆಯಾಗಿದೆ. ಹೊಸದಾಗಿ 35,546 ಹೆಕ್ಟೇರ್‌ ಪ್ರದೇಶ ಸೇರ್ಪಡೆಯಾಗುವ ಮೂಲಕ 75,754 ಹೆಕ್ಟೇರ್‌ ಪ್ರದೇಶಕ್ಕೆ ವ್ಯಾಪಿಸಿದೆ. ಜನಸಂಖ್ಯೆಯ ದೃಷ್ಟಿಯಿಂದ ಹೇಳುವುದಾದರೆ, ಸುಮಾರು 17 ಲಕ್ಷ ಜನ ಇದರ ವ್ಯಾಪ್ತಿಯೊಳಗೆ ಬರಲಿದ್ದಾರೆ.

ಹುಬ್ಬಳ್ಳಿ ಹಾಗೂ ಧಾರವಾಡದ ಜೊತೆಗೆ ಇದೇ ಮೊದಲ ಬಾರಿಗೆ ಕಲಘಟಗಿಯ 6 ಗ್ರಾಮಗಳನ್ನು ಕೂಡ ಇದರ ವ್ಯಾಪ್ತಿಯೊಳಗೆ ತರಲಾಗಿದೆ. ಆ ಭಾಗದ ಜನರಿಗೂ ಇದರ ಪ್ರಯೋಜನ ದಕ್ಕಲಿದೆ. ಹುಬ್ಬಳ್ಳಿ ತಾಲ್ಲೂಕಿನ 13, ಧಾರವಾಡ ತಾಲ್ಲೂಕಿನ 27 ಹಾಗೂ ಕಲಘಟಗಿ ತಾಲ್ಲೂಕಿನ 6 ಹಳ್ಳಿಗಳು ಹೊಸದಾಗಿ ಹುಡಾ ವ್ಯಾಪ್ತಿಗೆ ಸೇರ್ಪಡೆಗೊಂಡಿವೆ. 

ಮಾಸ್ಟರ್‌ ಪ್ಲ್ಯಾನ್‌ಗೆ ಸಿದ್ಧತೆ:  ವಿಸ್ತರಿತ ಸ್ಥಳೀಯ ಯೋಜನಾ ಪ್ರದೇಶ ಘೋಷಿಸಿದ ದಿನಾಂಕದಿಂದ 2 ವರ್ಷದ ಒಳಗಾಗಿ ಮಹಾಯೋಜನೆ (ಮಾಸ್ಟರ್‌ ಪ್ಲ್ಯಾನ್‌) ಸಿದ್ಧಪಡಿಸಿ ಅನುಮೋದನೆಗಾಗಿ ಸಲ್ಲಿಸಬೇಕು ಎಂದು ಸರ್ಕಾರ ಆದೇಶದಲ್ಲಿ ಹೇಳಿತ್ತು. ಇದಕ್ಕೆ ಪೂರಕವಾಗಿ ಹುಡಾ ಅಧಿಕಾರಿಗಳ ತಂಡವು ಈಗ ಮಾಸ್ಟರ್‌ ಪ್ಲ್ಯಾನ್‌ ತಯಾರಿಸುವಲ್ಲಿ ನಿರತವಾಗಿದೆ.

ವಿಸ್ತಾರವಾದ ರಸ್ತೆಗಳು, ಒಳಚರಂಡಿ ವ್ಯವಸ್ಥೆ, ಉದ್ಯಾನಗಳು, ಆರೋಗ್ಯ ಕೇಂದ್ರಗಳು, ಶವಸಂಸ್ಕಾರಕ್ಕಾಗಿ ಪ್ರದೇಶ, ಶಿಕ್ಷಣ ಸಂಸ್ಥೆಗಳು, ಸಣ್ಣ ಸಣ್ಣ ಕೈಗಾರಿಕೆಗಳ ಪ್ರದೇಶಾಭಿವೃದ್ಧಿ, ಸೇರಿದಂತೆ ಎಲ್ಲ ಅಗತ್ಯ ನಾಗರಿಕ ಸೌಲಭ್ಯಗಳಿಗೆ ಮಾಸ್ಟರ್‌ ಪ್ಲ್ಯಾನ್‌ನಲ್ಲಿ ಜಾಗ ನಿಗದಿಪಡಿಸಲಾಗುತ್ತಿದೆ. 2041ನೇ ವರ್ಷದವರೆಗೆ ಅಗತ್ಯ ಬೀಳಬಹುದಾದ ಎಲ್ಲ ವ್ಯವಸ್ಥೆಗಳನ್ನು ಅಂದಾಜಿಸಿಕೊಂಡು ಪ್ರಾಧಿಕಾರದ ಅಧಿಕಾರಿಗಳು ಮಾಸ್ಟರ್‌ ಪ್ಲ್ಯಾನ್‌ ರೂಪಿಸುತ್ತಿದ್ದಾರೆ. ಸದ್ಯದಲ್ಲಿಯೇ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ.

ರಿಯಲ್‌ ಎಸ್ಟೇಟ್‌ ಬೂಮ್‌: ಎಲ್‌ಪಿಎ ವಿಸ್ತರಣೆಯಿಂದ ಮುಂಬರುವ ವರ್ಷಗಳಲ್ಲಿ ರಿಯಲ್‌ ಎಸ್ಟೇಟ್‌ ವೇಗವಾಗಿ ಬೆಳವಣಿಗೆ ಕಾಣುವ ನಿರೀಕ್ಷೆ ಮೂಡಿಸಿದೆ. ಹುಡಾಗೆ ಕೂಡ ಬಡಾವಣೆ ನಿರ್ಮಿಸಲು ಸಹಾಯವಾಗಲಿದೆ. ರೈತರು 50:50 ಅನುಪಾತದಲ್ಲಿ ಜಮೀನು ನೀಡಲು ಮುಂದೆ ಬರಬಹುದು. ಇದರಿಂದ ಹುಡಾ ಬಡಾವಣೆ ನಿರ್ಮಾಣವಾಗಲು ಸಾಧ್ಯವಾಗಲಿದೆ.

ರೈತರು 50:50 ಅನುಪಾತದಲ್ಲಿ ಜಮೀನು ನೀಡಲು ಮುಂದಾದರೆ ಹುಡಾ ವತಿಯಿಂದ ನಿವೇಶನ ನಿರ್ಮಿಸಲು ಸಿದ್ಧರಿದ್ದೇವೆ. ಈ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹುಡಾ ಅಧ್ಯಕ್ಷ ಶಾಕೀರ ಸನದಿ ‘ಪ್ರಜಾವಾಣಿ’ಗೆ ತಿಳಿಸಿದರು.

ಹೊಸ ಎಲ್‌ಪಿಎ ಪ್ರದೇಶದಲ್ಲಿ ಬಡಾವಣೆ ನಿರ್ಮಿಸಲು ಈಗಾಗಲೇ ಹಲವು ಖಾಸಗಿ ಡೆವಲಪರ್ಸ್‌ಗಳು ಆಸಕ್ತಿ ತೋರಿದ್ದಾರೆ. ಮುಂಬರುವ ದಿನಗಳಲ್ಲಿ ವ್ಯವಸ್ಥಿತ ಬಡಾವಣೆಗಳು ತಲೆಎತ್ತಲಿವೆ.

ಭೂಮಿ ಬೆಲೆ ಏರಿಕೆ: ಎಲ್‌ಪಿಎ ವಿಸ್ತರಣೆಯಿಂದ ಅವಳಿನಗರ ಸುತ್ತಮುತ್ತಲಿನ ನಿವೇಶನಗಳ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ಜಮೀನಿಗೆ ಬಂಗಾರದ ಬೆಲೆ ಬರಲಿದೆ. ಇದರಿಂದಾಗಿ ತಮ್ಮ ಜಮೀನನ್ನು ನಿವೇಶನವಾಗಿ ಪರಿವರ್ತಿಸಲು ಹಲವು ರೈತರು ಸ್ವಯಂ ಪ್ರೇರಣೆಯಿಂದ ಮುಂದೆ ಬರಬಹುದು. ಜಮೀನು ಸಿಗದೆ ಪರದಾಡುತ್ತಿದ್ದ ಡೆವಲಪರ್ಸ್‌ಗಳಿಗೆ ಇದು ವರದಾನವಾಗಲಿದೆ.

ಎಲ್‌ಪಿಎ ವಿಸ್ತರಣೆಯಿಂದ ಎಲ್ಲ ನಾಗರಿಕ ವ್ಯವಸ್ಥೆಗಳನ್ನು ಒಳಗೊಂಡ ಬಡಾವಣೆಗಳು ನಿರ್ಮಾಣವಾಗಲಿವೆ. ಎರಡು ರೂಪಾಯಿ ಹೆಚ್ಚು ಕೊಟ್ಟರೂ ಪರವಾಗಿಲ್ಲ ಎಲ್ಲ ಮೂಲಸೌಕರ್ಯ ಇದ್ದ ಹಾಗೂ ಎಲ್ಲ ದಾಖಲೆಗಳು ಸಮರ್ಪಕವಾಗಿದ್ದ ಬಡಾವಣೆ ಖರೀದಿಸಿದ ನೆಮ್ಮದಿ ಖರೀದಿದಾರರಿಗೆ ಸಿಗಲಿದೆ.  

ಅವಳಿ ನಗರದ ಜನ ಅಪಾರ್ಟ್‌ಮೆಂಟ್‌ ಸಂಸ್ಕೃತಿಗೆ ಇನ್ನೂ ಒಗ್ಗಿಲ್ಲ. ಸ್ವತಂತ್ರ ಮನೆ ಹೊಂದಲು ಹೆಚ್ಚು ಬಯಸುತ್ತಾರೆ. ನಗರದಿಂದ 4–5 ಕಿ.ಮೀ ದೂರ ಹೋಗಲೂ ಸಿದ್ಧರಾಗಿರುತ್ತಾರೆ. ಇಂತಹವರಿಗೆ ಹೆಚ್ಚು ಅನುಕೂಲವಾಗಲಿದೆ. ಸ್ವಂತ, ಸ್ವತಂತ್ರ ನಿವೇಶನ– ಮನೆ ಹೊಂದುವ ಅವಕಾಶ ಅವರಿಗೆ ದೊರೆಯಲಿದೆ. 

ಜನವಸತಿ ಬೆಳೆದಂತೆ ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ಕೈಗಾರಿಕೆಗಳು ನಿರ್ಮಾಣವಾಗಲಿವೆ. ಇದರಿಂದ ಜನರ ಜೀವನಮಟ್ಟ ಸುಧಾರಣೆಯಾಗಲಿದೆ. ಇದು ಉದ್ಯೋಗಾವಕಾಶಕ್ಕೂ ದಾರಿ ಮಾಡಿಕೊಡಲಿದೆ. ಶಿಕ್ಷಣ– ಉದ್ಯೋಗ ಅರಸಿ ಬೆಂಗಳೂರು, ಪುಣೆ– ಮುಂಬೈನತ್ತ ತೆರಳುತ್ತಿದ್ದ ಜನ ಅವಳಿ ನಗರದ ಕಡೆಗೂ ಮುಖ ಮಾಡಬಹುದು. ಇದರಿಂದ ಎಲ್ಲ ಆಯಾಮಗಳಲ್ಲೂ ಅವಳಿ ನಗರ ಅಭಿವೃದ್ಧಿಯತ್ತ ದಾಪುಗಾಲು ಹಾಕುವ ಲಕ್ಷಣಗಳು ಗೋಚರಿಸುತ್ತಿವೆ.

ಹುಬ್ಬಳ್ಳಿಯ ಗದಗ ರಸ್ತೆಯಲ್ಲಿರುವ ಬಡಾವಣೆಯೊಂದರ ದೃಶ್ಯ         

ಅವಳಿ ನಗರ ಯಾವ ರೀತಿ ಅಭಿವೃದ್ಧಿಯಾಗಬೇಕೆನ್ನುವ ಮಾಸ್ಟರ್‌ ಪ್ಲ್ಯಾನ್‌ (ಮಹಾ ಯೋಜನೆ) ಸಿದ್ಧಪಡಿಸಲಾಗುತ್ತಿದೆ. ಮುಂದಿನ ತಿಂಗಳು ಸರ್ಕಾರಕ್ಕೆ ಸಲ್ಲಿಸಿ ಅನುಮೋದನೆ ಪಡೆಯಲಾಗುವುದು. ಇದು ಜಾರಿಯಾದರೆ ಹುಬ್ಬಳ್ಳಿ–ಧಾರವಾಡ ರಾಜ್ಯದಲ್ಲಿ ಅತ್ಯಂತ ವ್ಯವಸ್ಥಿತವಾಗಿ ಅಭಿವೃದ್ಧಿಯಾಗಲಿದೆ
ಶಾಕೀರ ಸನದಿ ಹುಬ್ಬಳ್ಳಿ– ಧಾರವಾಡ ಅಭಿವೃದ್ಧಿ ಪ್ರಾಧಿಕಾರ (ಹುಡಾ) ಅಧ್ಯಕ್ಷ
ಸ್ಥಳೀಯ ಯೋಜನಾ ಪ್ರದೇಶವನ್ನು ಹುಡಾ ವಿಸ್ತರಿಸುವುದು ಸ್ವಾಗತಾರ್ಹ. ಈ ಪ್ರಕ್ರಿಯೆ ಸಹಜವಾಗಿಯೇ ರಿಯಲ್‌ ಎಸ್ಟೇಟ್‌ ಗೆ ಬೂಮ್ ಕೊಡಲಿದೆ. ಹುಡಾದವರು ಕೂಡ ಹೊಸ ವಸತಿ ಬಡಾವಣೆಗಳನ್ನು ಅಭಿವೃದ್ಧಿ ಪಡಿಸಿ ಹಂಚಿಕೆ ಮಾಡಿದರೆ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಸಹಾಯವಾಗಲಿದೆ.
ವಿರೇಶ ಉಂಡಿ ಶ್ರೀ ದುರ್ಗಾ ಡೆವಲಪರ್ಸ್‌ ಮತ್ತು ಪ್ರಮೋಟರ್ಸ್‌ ಎಂಡಿ
ಎಲ್‌ಪಿಎ ವಿಸ್ತರಣೆಯಿಂದ ಅಕ್ರಮ ಬಡಾವಣೆಗಳಿಗೆ ಕಡಿವಾಣ ಬೀಳಲಿದೆ. ಜಮೀನು ಮಾರುವ ರೈತರಿಗೆ ಹಾಗೂ ನಿವೇಶನ ಖರೀದಿಸುವ ಜನರಿಗೆ ಅನುಕೂಲವಾಗಲಿದೆ. ಸೂರು ಹೊಂದುವ ಜನರ ಆಸೆ ಕೈಗೂಡಲಿದೆ. ರಸ್ತೆ ನೀರು ಒಳಚರಂಡಿ ವಿದ್ಯುತ್‌ ಸೇರಿದಂತೆ ಮೂಲಸೌಕರ್ಯಗಳು ಬಡಾವಣೆಗಳಲ್ಲಿ ಕಡ್ಡಾಯವಾಗಿ ಇರುವಂತೆ ಹುಡಾ ನೋಡಿಕೊಳ್ಳಬೇಕು
ಶಶಿಧರ ಕೊರವಿ ಕೊರವಿ ಡೆವಲಪರ್ಸ್‌

ಹುಡಾ ವ್ಯಾಪ್ತಿಯಲ್ಲಿ ಈಗಿರುವ ಪ್ರದೇಶಗಳು

ಹುಬ್ಬಳ್ಳಿ ತಾಲ್ಲೂಕು: ಕೊಟಗೊಂಡಹುಣಸಿ ಅಜ್ಜಾಪುರ ಗೋಕುಲ ರಾಯನಾಳ ಅಂಬಿಕೊಪ್ಪ ಗಂಗಿವಾಳ ಅಂಚಟಗೇರಿ ಅಗ್ರಹಾರ ತಿಮ್ಮಸಾಗರ ಬೂದಿಹಾಳ ಗಬ್ಬೂರ ಬಿಡ್ನಾಳ ಎಂ.ಅರಳಿಕಟ್ಟಿ ಯಲ್ಲಾಪುರ ಬಮ್ಮಾಪುರ ಕೇಶ್ವಾಪೂರ ನಾಗಶೆಟ್ಟಿಕೊಪ್ಪ ಬೆಂಗೇರಿ ಗೋಪನಕೊಪ್ಪ ಉಣಕಲ್‌ ಬೈರಿದೇವರಕೊಪ್ಪ ಅಮರಗೋಳ

ಧಾರವಾಡ ತಾಲ್ಲೂಕು: ನವಲೂರು ರಾಯಾಪುರ ಸತ್ತೂರ ತಡಸಿನಕೊಪ್ಪ ಬೇಲೂರ ಮುಮ್ಮಿಗಟ್ಟಿ ಮುಮ್ಮಿಗಟ್ಟಿ (ಗೂಗಿಗಟ್ಟಿ) ಸಲಕಿನಕೊಪ್ಪ ಯರಿಕೊಪ್ಪ ಜೋಗಯಲ್ಲಾಪುರ ಖಾನಾಪೂರ ನರೇಂದ್ರ ಕುಂಬಾಪೂರ ಹಿರೇಮಲ್ಲಿಗವಾಡ ಕೆಲಗೇರಿ ಸಣ್ಣಸೋಮಾಪುರ ಅತ್ತಿಕೊಳ್ಳ ಮನಸೂರ ನುಗ್ಗಿಕೇರಿ ಇಟ್ಟಿಗಟ್ಟಿ ಹೊಸಕಟ್ಟಿ ಕಣವಿಹೊನ್ನಾಪುರ ಲಕಮನಹಳ್ಳಿ ಹೊಸಯಲ್ಲಾಪುರ ಧಾರವಾಡ ಗ್ರಾಮೀಣ.

ಹುಡಾ ಸೇರಲಿರುವ ಹೊಸ ಗ್ರಾಮಗಳು

ಹುಬ್ಬಳ್ಳಿ ತಾಲ್ಲೂಕು: ರೇವಡಿಹಾಳ ದೇವರಗುಡಿಹಾಳ ಪರಸಾಪುರ ಬುಡ್ನಾಳ ಮಾವನೂರ ಬುಡರಸಿಂಗಿ ಸಿದ್ದಾಪುರ ಮುರಾರಹಳ್ಳಿ ಅದರಗುಂಚಿ ಹಲ್ಯಾಳ ಶಹರವೀರಾಪುರ ಕುಸುಗಲ್ಲ ಸುಳ್ಳ ಕಲಘಟಗಿ ತಾಲ್ಲೂಕು: ದೇವಲಿಂಗಿಕೊಪ್ಪ ದಾಸನೂರ ಧುಮ್ಮವಾಡ ಕುರಣಕೊಪ್ಪ ಕಾಡಣಕೊಪ್ಪ ಚಳಮಟ್ಟಿ

ಧಾರವಾಡ ತಾಲ್ಲೂಕು: ಕೊಟೂರ ಅಗಸನಹಳ್ಳಿ ಶಿಂಗನಹಳ್ಳಿ ಹೆಗ್ಗೇರಿ ವರವನಗಲವಿ ಚಿಕ್ಕಮಲ್ಲಿಗವಾಡ ದಡ್ಡಿಕಮಲಾಪುರ ಮಂಡಿಹಾಳ ಮುಗದ ಕ್ಯಾರಕೊಪ್ಪ ಜುಂಜಲಕಟ್ಟಿ ಬಾಡ ಬೆನಕನಕಟ್ಟಿ ಮನಗುಂಡಿ ನಾಯಿಕನಹುಳಿಕಟ್ಟೆ ಶಿವಳ್ಳಿ ಮಾರಡಗಿ ನವಲೂರ ತಡೆಬೀಳ ಅಲ್ಲಾಪುರ (ಸೋಮಾಪುರ) ಘೋಂಗಡಿಕೊಪ್ಪ ಗೋವನಕೊಪ್ಪ ದಂಡಿಕೊಪ್ಪ ಕಮಲಾಪುರ ದಾಸನಕೊಪ್ಪ ದೇವಗಿರಿ ಎಂ. ನರೇಂದ್ರ ಗೋವನಕೊಪ್ಪ ಎಂ. ನರೇಂದ್ರ ನೀರಲಕಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.