ADVERTISEMENT

ಮರ್ಯಾದೆಗೇಡು ಹತ್ಯೆ ಪ್ರಕರಣ: ಇನಾಂ ವೀರಾಪುರಕ್ಕೆ ಡಿ.ಸಿ ಭೇಟಿ, ಪರಿಶೀಲನೆ

ಜಾಗೃತಿ ಕಾರ್ಯಕ್ರಮ ಆಯೋಜಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 3:13 IST
Last Updated 25 ಡಿಸೆಂಬರ್ 2025, 3:13 IST
ಹುಬ್ಬಳ್ಳಿ ತಾಲ್ಲೂಕಿನ ಇನಾಂ ವೀರಾಪುರ ಗ್ರಾಮಕ್ಕೆ  ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಬುಧವಾರ ಭೇಟಿ ನೀಡಿ, ಗರ್ಭಿಣಿ ಮಾನ್ಯಾ ಕೊಲೆಯಾದ ಸ್ಥಳ ಪರಿಶೀಲಿಸಿದರು. ಶಾಸಕ ಎಂ.ಆರ್‌. ಪಾಟೀಲ, ಸಿಪಿಐ ಮುರುಗೇಶ ಚನ್ನಣ್ಣವರ ಹಾಜರಿದ್ದರು
ಹುಬ್ಬಳ್ಳಿ ತಾಲ್ಲೂಕಿನ ಇನಾಂ ವೀರಾಪುರ ಗ್ರಾಮಕ್ಕೆ  ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಬುಧವಾರ ಭೇಟಿ ನೀಡಿ, ಗರ್ಭಿಣಿ ಮಾನ್ಯಾ ಕೊಲೆಯಾದ ಸ್ಥಳ ಪರಿಶೀಲಿಸಿದರು. ಶಾಸಕ ಎಂ.ಆರ್‌. ಪಾಟೀಲ, ಸಿಪಿಐ ಮುರುಗೇಶ ಚನ್ನಣ್ಣವರ ಹಾಜರಿದ್ದರು   

ಹುಬ್ಬಳ್ಳಿ: ಮರ್ಯಾದೆಗೇಡು ಹತ್ಯೆ ನಡೆದ ತಾಲ್ಲೂಕಿನ ಇನಾಂ ವೀರಾಪುರ ಗ್ರಾಮಕ್ಕೆ  ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಬುಧವಾರ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಕೃತ್ಯ ನಡೆದ ಸ್ಥಳಗಳನ್ನು ಪರಿಶೀಲಿಸಿದರು. ಪೊಲೀಸ್‌ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಹಲ್ಲೆಗೊಳಗಾದ ಹಾಗೂ ಹಲ್ಲೆ ನಡೆಸಿದ ಕುಟುಂಬಗಳ ಹಿನ್ನೆಲೆ ಹಾಗೂ ಸ್ಥಿತಿಗತಿಗಳ ಬಗ್ಗೆ ಗ್ರಾಮಸ್ಥರ ಜತೆ ಚರ್ಚಿಸಿದರು.  ದೌರ್ಜನ್ಯದಂತಹ ಘಟನೆಗಳು ಮರುಕಳಿಸದಂತೆ ಗ್ರಾಮಮಟ್ಟದಲ್ಲಿ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಬಗ್ಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿ, ತುರ್ತಾಗಿ ಜಾಗೃತಿ ಕಾರ್ಯಕ್ರಮ ಆಯೋಜಿಸಲು ನಿರ್ದೇಶಿಸಿದರು.

‘ಅನಿರೀಕ್ಷಿತವಾಗಿ ಅಮಾನುಷ ಕೃತ್ಯ ನಡೆದಿದೆ. ಇದು ಅತ್ಯಂತ ನೋವಿನ ಸಂಗತಿಯಾಗಿದ್ದು, ಇಂತಹ ಕೃತ್ಯ ಮತ್ತೆಲ್ಲಿಯೂ ಘಟಿಸಬಾರದು. ಈ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕು’ ಎಂದು ಶಾಸಕ ಎಂ.ಆರ್‌. ಪಾಟೀಲ ಹೇಳಿದರು.

ADVERTISEMENT

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗುಂಜನ್ ಆರ್ಯ ಮಾತನಾಡಿ, ಪ್ರಕರಣ ಸಂಬಂಧ  ತ್ವರಿತವಾಗಿ ಕ್ರಮ ಕೈಗೊಳ್ಳಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಈಗಾಗಲೇ ಎಂಟು ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು. 

ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಶುಭಾ ಪಿ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆ ಉಪನಿರ್ದೇಶಕಿ ಎಚ್.ಎಚ್. ಕುಕನೂರ, ಸಿಪಿಐ ಮುರಗೇಶ ಚನ್ನಣ್ಣವರ, ಸಮಾಜ ಕಲ್ಯಾಣ ಇಲಾಖೆಯ ಹುಬ್ಬಳ್ಳಿ ತಾಲ್ಲೂಕು ಸಹಾಯಕ ನಿರ್ದೇಶಕಿ ಪ್ರಿಯದರ್ಶಿನಿ ಹಿರೇಮಠ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ವಿಜಯಲಕ್ಷ್ಮಿ ಪಾಟೀಲ, ಸಿಡಿಪಿಒ ಅತೀಕಾ ಸಿದ್ದಿ ಇದ್ದರು.

ಭೇಟಿ ಇಂದು: ‘ಎಸ್‌ಸಿ, ಎಸ್‌ಟಿ ಆಯೋಗದ ಅಧ್ಯಕ್ಷ ಕೃಷ್ಣಮೂರ್ತಿ ಅವರು ಗುರುವಾರ ನಗರಕ್ಕೆ ಬಂದು, ಆಸ್ಪತ್ರೆಯಲ್ಲಿರುವ ಗಾಯಾಳುಗಳ ಆರೋಗ್ಯ ವಿಚಾರಿಸಲಿದ್ದಾರೆ. ಆ ವೇಳೆ ಅವರನ್ನು ಭೇಟಿ ಮಾಡಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ತಿಳಿಸಿ ಕ್ರಮ ಕೈಗೊಳ್ಳಲು ಮನವಿ ಸಲ್ಲಿಸಲಾಗುವುದು’ ಎಂದು ಸಮಿತಿಯ ಶ್ರಿಧರ ಕಂದಗಲ್‌ ತಿಳಿಸಿದರು.

ಆಸ್ಪತ್ರೆಗೆ ಭೇಟಿ, ಸಾಂತ್ವನ: ಶಾಸಕರಾದ ಮಹೇಶ ಟೆಂಗಿನಕಾಯಿ, ಪ್ರಸಾದ ಅಬ್ಬಯ್ಯ, ಎಂ.ಆರ್‌. ಪಾಟೀಲ, ವಿಧಾನ ಪರಿಷತ್‌ ಸದಸ್ಯ ಎಫ್‌.ಎಚ್‌. ಜಕ್ಕಪ್ಪನವರ ಸೇರಿದಂತೆ ವಿವಿಧ ಮುಖಂಡರು ವಿವೇಕಾನಂದ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿದರು.

ಕೆಳ ಹಂತದ ಸಿಬ್ಬಂದಿ ಅಮಾನತು; ಆಕ್ಷೇಪ

‘ಪ್ರಕರಣಕ್ಕೆ ಸಂಬಂಧಿಸಿ ಗ್ರಾಮೀಣ ಠಾಣೆಯ ಇಬ್ಬರು ಅಮಾಯಕ ಕೆಳ ಹಂತದ ಪೊಲೀಸ್‌ ಸಿಬ್ಬಂದಿಯನ್ನು ಅಮಾತು ಮಾಡಲಾಗಿದೆ. ತಪ್ಪಿತಸ್ಥ ಅಧಿಕಾರಿಗಳ ರಕ್ಷಣೆ ನಡೆಯುತ್ತಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ದಲಿತ ವಿಮೋಚನಾ ಸಮಿತಿಯ ಸದಸ್ಯರು ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು. ಇನಾಂ ವೀರಾಪುರ ಗ್ರಾಮದಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಅವರನ್ನು ಭೇಟಿ ಮಾಡಿದ ಸಮಿತಿ ಸದಸ್ಯರು ‘ಮಾನ್ಯಾ ಅವರ ಅಂತ್ಯಕ್ರಿಯೆಯ ಜವಾಬ್ದಾರಿ ಗ್ರಾಮೀಣ ತಹಶೀಲ್ದಾರ್‌ ಮತ್ತು ಸಮಾಜ ಕಲ್ಯಾಣ ಇಲಾಖೆಯದ್ದಾಗಿತ್ತು. ಆ ಸಂದರ್ಭ ಇವರ‍್ಯಾರೂ ಇರದ ಕಾರಣ ಅವರ ಜವಾಬ್ದಾರಿಯನ್ನು ಪೊಲೀಸ್ ಸಿಬ್ಬಂದಿ  ಸಂಗಮೇಶ ಸಾಗರ ಮತ್ತು ಚಂದ್ರಕಾಂತ ರಾಥೋಡ ನಿರ್ವಹಿಸಿದ್ದಾರೆ. ಕುಟುಂಬದ ಸಮಸ್ಯೆ ಬಗ್ಗೆ ಎಂಟು ತಿಂಗಳ ಹಿಂದೆಯೇ ಎರಡೂ ಇಲಾಖೆಗೂ ಗೊತ್ತಿದ್ದರೂ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದು ಅಧಿಕಾರಿಗಳ ತಪ್ಪು. ತಮ್ಮನ್ನು ರಕ್ಷಿಸಿಕೊಳ್ಳಲು ಅಮಾಯಕರನ್ನು ಅಮಾನತು ಮಾಡಿದ್ದಾರೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಡಿಸಿ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.