ADVERTISEMENT

ಮರ್ಯಾದೆಗೇಡು ಹತ್ಯೆ | ತ್ವರಿತಗತಿ ಕೋರ್ಟ್‌ ಸ್ಥಾಪಿಸಲು ಕ್ರಮ: ಸಚಿವ ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 14:42 IST
Last Updated 1 ಜನವರಿ 2026, 14:42 IST
   

ಧಾರವಾಡ: ‘ಹುಬ್ಬಳ್ಳಿ ತಾಲ್ಲೂಕಿನ ಇನಾಂ ವೀರಾಪುರದಲ್ಲಿ ನಡೆದ ಮಾರ್ಯದೆಗೇಡು ಹತ್ಯೆ ಪ್ರಕರಣದಲ್ಲಿ ತ್ವರಿತವಾಗಿ ನ್ಯಾಯ ಒದಗಿಸಲು ಪ್ರಯತ್ನಿಸಲಾಗುವುದು. ಕಾನೂನು ಸಚಿವ, ಗೃಹಸಚಿವರೊಂದಿಗೆ ಚರ್ಚಿಸಿ ಇಲ್ಲಿನ ವಿಶೇಷ ಕೋರ್ಟ್‌ನಲ್ಲಿ ತ್ವರಿತಗತಿ ಕೋರ್ಟ್‌ ಸ್ಥಾಪಿಸಲು ಕ್ರಮ ವಹಿಸಲಾಗುವುದು’ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್‌.ಸಿ.ಮಹದೇವಪ್ಪ

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇನಾಂ ವೀರಾಪುರದ ಮರ್ಯಾದೆಗೇಡು ಹತ್ಯೆಗೆ ಸಂಬಂಧಿಸಿದಂತೆ ದಲಿತರ ಮೇಲೆ ದೌರ್ಜನ್ಯ (ಅಟ್ರಾಸಿಟಿ) ಮತ್ತು ಕೊಲೆ ಪ್ರಕರಣ ದಾಖಲಾಗಿದೆ. 60 ದಿನಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಬೇಕು. ಪ್ರಕರಣದಲ್ಲಿ ಅಗತ್ಯ ಇದ್ದರೆ ಖಾಸಗಿಯಾಗಿ ಪ್ರಾಸಿಕ್ಯೂಟರ್‌ ನೇಮಕ ಮಾಡಿಕೊಳ್ಳಲಾಗುವುದು’ ಎಂದರು.

‘ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆಯಿಂದ ಸಮನ್ವಯ ಸಮಿತಿ ರಚಿಸಬೇಕು. ಜಿಲ್ಲೆಯಲ್ಲಿ ಇಂಥ ಪ್ರಕರಣಗಳು ಮರುಕಳಿಸದಂತೆ ಎಚ್ಚರವಹಿಸಬೇಕು. ಕಾನೂನಿನಿಂದಲೇ ಎಲ್ಲವನ್ನು ಸರಿಪಡಿಸಲು ಆಗಲ್ಲ. ಜನರಲ್ಲಿ ಅರಿವು ಮೂಡಿಸಬೇಕು. ಸಮುದಾಯಗಳ ಆಲೋಚನೆ ಕ್ರಮ ಬದಲಾಗಬೇಕು’ ಎಂದರು.

ADVERTISEMENT

‘ಇನಾಂ ವೀರಾಪುರದಲ್ಲಿ 9 ದಲಿತ ಕುಟುಂಬಗಳು ಇವೆ. ಸಂತ್ರಸ್ತ ದಲಿತ ಕುಟುಂಬದವರಿಗೆ ಪರಿಹಾರ ನೀಡಲಾಗಿದೆ. ಪುನರ್ವಸತಿ, ಭದ್ರತೆ, ರಕ್ಷಣೆ ಒದಗಿಸಲು ಜಿಲ್ಲಾಡಳಿತಕ್ಕೆ‌ ಸೂಚನೆ ನೀಡಲಾಗಿದೆ. ಮರ್ಯಾದೆ ಹತ್ಯೆ ತಡೆ ನಿಟ್ಟಿನಲ್ಲಿ ಕಠಿಣ ಕಾನೂನು ತರಲು ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಕ್ರಮವಹಿಸುತ್ತೇವೆ’ ಎಂದರು.

‘ಅಧಿಕಾರಿ ವಿರುದ್ಧ ದೂರು; ವಿಚಾರಣೆಗೆ ಸೂಚನೆ’

‘ಇನಾಂ ವೀರಾಪುರದಲ್ಲಿ ನಡೆದ ಮಾರ್ಯದೆಗೇಡು ಹತ್ಯೆ ಪ್ರಕರಣ ವಿಚಾರದಲ್ಲಿ ಸಮಾಜ ಕಲ್ಯಾಣ ಇಲಾಖೆಯವರು ವಿಳಂಬ ಮತ್ತು ತಾತ್ಸಾರ ಮಾಡಿದರು ಎಂದು ಕೆಲವರು ದೂರಿದ್ಧಾರೆ. ಈ ಬಗ್ಗೆ ವಿಚಾರಣೆ ನಡೆಸಿ ಸತ್ಯಾಸತ್ಯತೆ ಪರಿಶೀಲಿಸುವಂತೆ ಇಲಾಖೆಯ ಆಯಕ್ತರಿಗೆ ಸೂಚನೆ ನೀಡಿದ್ದೇನೆ’ ಎಂದು ಸಚಿವ ಎಚ್‌.ಸಿ.ಮಹದೇವಪ್ಪ ತಿಳಿಸಿದರು.

‘ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ವಿರುದ್ಧ ದೂರು ಸಲ್ಲಿಕೆಯಾಗಿದೆ. ಸಮಗ್ರ ವಿಚಾರಣೆ ನಡೆಸಿ ವರದಿ ನೀಡಲು ಆಯಕ್ತರಿಗೆ ತಿಳಿಸಿದ್ದೇನೆ. ಇಲಾಖೆಯವರು ತಪ್ಪು ಎಸಗಿದ್ದರೆ ಶಿಸ್ತು ಕ್ರಮಕೈಗೊಳ್ಳಲಾಗುವುದು’ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.