ADVERTISEMENT

'ಅನುವಾದ ಸಾಹಿತ್ಯ: ಸಾಂಸ್ಕೃತಿಕ ಅನುಸಂಧಾನ' ಸಮ್ಮೇಳನ ಉದ್ಘಾಟನಾ ಸಮಾರಂಭ

​ಪ್ರಜಾವಾಣಿ ವಾರ್ತೆ
Published 22 ಮೇ 2025, 15:41 IST
Last Updated 22 ಮೇ 2025, 15:41 IST
ಧಾರವಾಡದಲ್ಲಿ ಗುರುವಾರ ರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ.ಆರ್‌.ಎಲ್‌.ಹೈದರಾಬಾದ್‌ ಮಾತನಾಡಿದರು
ಧಾರವಾಡದಲ್ಲಿ ಗುರುವಾರ ರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ.ಆರ್‌.ಎಲ್‌.ಹೈದರಾಬಾದ್‌ ಮಾತನಾಡಿದರು   

ಧಾರವಾಡ: ‘ನಮ್ಮದು ಬಹುಭಾಷೆಗಳ ದೇಶ, ಅನುವಾದಗಳೂ ನಮ್ಮಲ್ಲಿ ಅನೇಕ ಇವೆ. ಇಂಗ್ಲಿಷ್‌ ಅನುವಾದಿತ ಕೃತಿಗಳೂ ನಮ್ಮಲ್ಲಿವೆ. ನಮ್ಮ ಬೇರುಳ್ಳ ಭಾಷೆಗಳನ್ನು ನಾವು ಮರೆಯಬಾರದು’ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ.ಆರ್.ಎಲ್.ಹೈದರಾಬಾದ್ ಹೇಳಿದರು.

ಕರ್ನಾಟಕ ವಿಶ್ವವಿದ್ಯಾಲಯದ ಡಾ.ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠ ಮತ್ತುಕೇಂದ್ರ ಸರ್ಕಾರದ ಪಿಎಂ ಉಚ್ಛತರ ಶಿಕ್ಷಾ ಅಭಿಯಾನ (ಪಿಎಂ ಉಷಾ) ವತಿಯಿಂದ ಚಂದ್ರಶೇಖರ ಕಂಬಾರ ಭವನದಲ್ಲಿ ಗುರುವಾರ ನಡೆದ ‘ಅನುವಾದ ಸಾಹಿತ್ಯ:ಸಾಂಸ್ಕೃತಿಕ ಅನುಸಂಧಾನ’ ರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಅನುವಾದಕರು, ಅನುವಾದದ ಕೊಡುಗೆ ಅಪಾರ ಇದೆ. ಭಾಷೆಯು ಬೆಳೆಯುತ್ತಲೇ ಭಾಷಾ ಸಂಸ್ಕೃತಿಯ ಐಕ್ಯತೆಯೂ ಬೆಳೆಯುತ್ತದೆ’ ಎಂದರು.

ADVERTISEMENT

ಚಿಂತಕ ನಟರಾಜ್‌ ಹುಳಿಯಾರ್‌ ಮಾತನಾಡಿ, ಭಾರತೀಯ ಸಂಸ್ಕೃತಿಯೊಳಗೆ ಅನುವಾದಗಳು ದೊಡ್ಡ ಪಲ್ಲಟಗಳನ್ನು ಮಾಡಿವೆ. ಭಾಷಾಂತರ ಕ್ರಿಯೆಯು ಒಂದು ಸಾಂಸ್ಕೃತಿಕ ಕ್ರಿಯೆ. ಕಾರ್ಲ್ ಮಾರ್ಕ್ಸ್‌, ಲೋಹಿಯಾ, ಗಾಂಧೀಜಿ, ಅಂಬೇಡ್ಕರ್ ಅವರ ಚಿಂತನೆಗಳ ವಿಸ್ತಾರಕ್ಕೆ ಅನುವಾದಗಳು ಆಧಾರವಾಗಿದ್ದವು ಎಂದರು.

ಆಡಳಿತಾಂಗ ಕುಲಸಚಿವ ಎ.ಚನ್ನಪ್ಪ ಮಾತನಾಡಿ, ಅನುವಾದಕರು ಭಾಷೆಯಲ್ಲಿ ಎಚ್ಚರ ವಹಿಸಬೇಕು. ಭಾಷೆ ಒಳ್ಳೆಯದಕ್ಕೆ ಬಳಕೆಯಾಗಬೇಕು. ಸಂಗೀತವೂ ಒಂದು ಅನುವಾದವೇ ಎಂದು ಹೇಳಿದರು.

ಕಲಾ ನಿಕಾಯದ ಡೀನ್‌ ಪ್ರೊ.ಮೃತ್ಯುಂಜಯ ಅಗಡಿ ಅಧ್ಯಕ್ಷತೆ ವಹಿಸಿದ್ದರು. ಪರೀಕ್ಷಾಂಗ ಕುಲಸಚಿವ ಪ್ರೊ.ನಿಜಲಿಂಗಪ್ಪ ಮಟ್ಟಿಹಾಳ, ಪಿಎಂ ಉಷಾ ಸಂಯೋಜಕ ಪ್ರೊ.ಆರ್.ಎಫ್.ಭಜಂತ್ರಿ, ಡಾ.ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠದ ಸಂಯೋಜಕ ನಿಂಗಪ್ಪ ಮುದೇನೂರು, ಸಮ್ಮೇಳನ ಸಂಯೋಜಕಿ ಅನಿತಾ ಗುಡಿ, ಮಲ್ಲಪ್ಪ ಬಂಡಿ, ಅನಸೂಯ ಕಾಂಬಳೆ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.