ಅಣ್ಣಿಗೇರಿ: ‘ಪಟ್ಟಣದ ರೈತ ಸಂಪರ್ಕ ಕೇಂದ್ರ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಿರುವುದು ರೈತರು ಸೇರಿದಂತೆ ಎಲ್ಲರಿಗೂ ಅನುಕುಲವಾಗಿದೆ‘ ಎಂದು ಸಚಿವ ಸಂತೋಷ ಲಾಡ್ ಹೇಳಿದರು.
ಪಟ್ಟಣದ ಪುರಸಭೆ ವತಿಯಿಂದ ಸೋಮವಾರ ಹಮ್ಮಿಕೊಂಡ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಇಂದಿರಾ ಕ್ಯಾಂಟೀನ್ ಲೋಕಾರ್ಪಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಶಾಸಕ ಎನ್.ಎಚ್.ಕೋನರಡ್ಡಿ ಅವರು, ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದಾರೆ. ಸರ್ಕಾರದ ಯೋಜನೆಗಳು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಎಲ್ಲರಿಗೂ ದೊರಕುವಂತೆ ಮಾಡಲಾಗುವುದು’ ಎಂದು ಹೇಳಿದರು.
ಶಾಸಕ ಎನ್.ಎಚ್.ಕೋನರಡ್ಡಿ ಮಾತನಾಡಿ, ಪಟ್ಟಣದ ಉಪನೋಂದಣಿ ಕಚೇರಿ, ರೈತ ಸಂಪರ್ಕ ಕೇಂದ್ರ, ಬ್ಯಾಂಕ್ ಗಳಿಗೆ ತಾಲೂಕಿನ ವಿವಿಧ ಗ್ರಾಮಗಳ ನಾಗರಿಕರು ಪಟ್ಟಣದ ಮಧ್ಯ ಭಾಗದಲ್ಲಿ ಬರುವ ಕಾರಣ, ಇಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿದೆ. ಕಡಿಮೆ ದರದಲ್ಲಿ ಗುಣಮಟ್ಟದ ಉಪಾಹಾರ ಮತ್ತು ಊಟ ದೊರೆಯತ್ತದೆ. ಜನರು ಇದರ ಸೌಲಭ್ಯ ಪಡೆದುಕೊಳ್ಳಬೇಕು’ ಎಂದರು.
ಇದೇ ಸಂದರ್ಭದಲ್ಲಿ ₹ 50 ಲಕ್ಷ ಅನುದಾನದಲ್ಲಿ ಪಂಪ ಸ್ಮಾರಕ ಭವನ ಆಧುನೀಕರಣ, ನೂತನ ಆಶ್ರಯ ಬಡಾವಣೆಯಲ್ಲಿ ₹ 30 ಲಕ್ಷ ವೆಚ್ಚದಲ್ಲಿ ವಿದ್ಯುತ್ ಕಂಬ, ಟಿಸಿ ಹಾಗೂ ಬೀದಿ ದೀಪ ಅಳವಡಿಕೆ, ₹20 ಲಕ್ಷ ಅನುದಾನದಲ್ಲಿ ಬಡಾವಣೆಗಳಿಗೆ ನಾಮಫಲಕ ಅಳವಡಿಕೆ, ನೂತನ ಬಡಾವಣೆಗಳಲ್ಲಿ ₹ 15 ಲಕ್ಷದ ಪೈಪ್‌ಲೈನ್ ಅಳವಡಿಕೆ, ₹ 15 ಲಕ್ಷ ವೆಚ್ಚದಲ್ಲಿ ಜುಮ್ಮಾ ಮಸೀದಿ ಅಭಿವೃದ್ದಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಲಾಯಿತು.
ದಾಸೋಹ ಮಠದ ಶಿವಕುಮಾರ ಸ್ವಾಮೀಜಿ, ಕಮಲಾಪೂರ ದರ್ಗಾದ ಸಜ್ಜಾದ ಸಯ್ಯದ ಪೀರಾ, ತಹಶೀಲ್ದಾರ್ ಮಂಜುನಾಥ ದಾಸಪ್ಪನವರ, ಪುರಸಭೆ ಅಧ್ಯಕ್ಷ ಶಿವಾನಂದ ಬೆಳಹಾರ, ಉಪಾಧ್ಯಕ್ಷ ನಾಗರಾಜ ದಳವಾಯಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ಮಂಜುನಾಥ ಮಾಯಣ್ಣವರ, ಮುಖ್ಯಾಧಿಕಾರಿ ವೈ.ಜಿ.ಗದ್ದಿಗೌಡರ ಸೇರಿದಂತೆ ಪುರಸಭೆ ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.