ADVERTISEMENT

ವಿಧಾನ ಪರಿಷತ್ ಸಭಾಪತಿ ಹೊರಟ್ಟಿ ವಿರುದ್ಧ ಪ್ರಕರಣ ದಾಖಲಿಸಿದ್ದ ಅಧಿಕಾರಿ ಅಮಾನತು

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2022, 10:46 IST
Last Updated 12 ಮಾರ್ಚ್ 2022, 10:46 IST
ಶ್ರೀಧರ ಸುತಾರೆ
ಶ್ರೀಧರ ಸುತಾರೆ   

ಧಾರವಾಡ: ಸರ್ವೋದಯ ಶಿಕ್ಷಣ ಸಂಸ್ಥೆಗೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲಿಸಿದ್ದ ಗ್ರಾಮೀಣ ಠಾಣೆ ಇನ್‌ಸ್ಪೆಕ್ಟರ್ ಶ್ರೀಧರ ಸುತಾರೆ ಅವರನ್ನು ಅಮಾನತು ಮಾಡಿ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಆದೇಶಿಸಿದ್ದಾರೆ.

ತಾಲ್ಲೂಕಿನ ಮುಗದ ಗ್ರಾಮದಲ್ಲಿರುವಸರ್ವೋದಯ ಶಿಕ್ಷಣ ಟ್ರಸ್ಟ್ ವಿಷಯವಾಗಿ ಶಾಲೆ ಸಿಬ್ಬಂದಿ ಹಾಗೂ ವಾಲ್ಮೀಕಿ ಸಮಾಜದ ಮುಖಂಡರ ನಡುವೆ ಜ. 25ರಂದು ಗಲಾಟೆ ನಡೆದಿತ್ತು. ವಾಲ್ಮೀಕಿ ಸಮಾಜದ ಮೋಹನ ಗುಡಸಲಮನಿ ಎಂಬುವವರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದರಲ್ಲಿ ಹೊರಟ್ಟಿ ಅವರನ್ನು 5ನೇ ಆರೋಪಿಯಾಗಿ ಎಫ್‌ಐಆರ್ ದಾಖಲಿಸಲಾಗಿತ್ತು.

ಅಂದು ಬೆಂಗಳೂರಿನಲ್ಲಿದ್ದ ಹೊರಟ್ಟಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ವಿಧಾನ ಪರಿಷತ್ತಿನಲ್ಲೂ ಈ ಕುರಿತು ಗಂಭೀರ ಚರ್ಚೆ ನಡೆದಿತ್ತು. ಶೀಘ್ರದಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಪ್ರವೀಣ್ ಸೂದ್ ಅವರು ಆದೇಶಿಸಿ, ‘ದೂರಿನಲ್ಲಿ ಹೊರಟ್ಟಿ ಅವರ ಹೆಸರು ಇಲ್ಲದಿದ್ದರೂ, ಅವರ ಹೆಸರನ್ನು ಪ್ರಥಮ ಮಾಹಿತಿ ವರದಿಯಲ್ಲಿ ದಾಖಲಿಸಿರುವುದು ಕರ್ತವ್ಯ ನಿರ್ಲಕ್ಷತನ ಹಾಗೂ ಬೇಜವಾಬ್ದಾರಿತನದ ವರ್ತನೆಯಾಗಿದೆ. ಈ ಕುರಿತು ಇಲಾಖಾ ತನಿಖೆ ಬಾಕಿ ಇರಿಸಿಕೊಂಡು ಇನ್‌ಸ್ಪೆಕ್ಟರ್ ಶ್ರೀಧರ ಅವರನ್ನು ಅಮಾನತು ಮಾಡಲಾಗಿದೆ‘ ಎಂದಿದ್ದಾರೆ.

ಈ ಆದೇಶಕ್ಕೂ ಒಂದು ದಿನ ಮೊದಲು ಇನ್‌ಸ್ಟೆಕ್ಟರ್‌ ಅವರನ್ನು ಗುಪ್ತಚರ ಇಲಾಖೆಗೆ ವರ್ಗಾವಣೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.