ಹುಬ್ಬಳ್ಳಿ ಗೋಪನಕೊಪ್ಪದ ಸರ್ಕಾರಿ ಪಿಯು ಕಾಲೇಜಿನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ 2024– 25ನೇ ಸಾಲಿನ ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೆ 5ನೇ ರ‍್ಯಾಂಕ್ ಪಡೆದ ನಾಗವೇಣಿ ರಾಯಚೂರು ಅವರನ್ನು ಕೇಂದ್ರ ಸಚಿವ ಪ್ರಲ್ಹಾದ ಜೊಶಿ ಸನ್ಮಾನಿಸಿದರು
–ಪ್ರಜಾವಾಣಿ ಚಿತ್ರ
ಹುಬ್ಬಳ್ಳಿ: ‘ವಿದೇಶಿ ಕಂಪನಿಗಳು ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಲು ಮುಂದಾಗುತ್ತಿವೆ. ಹೀಗಾಗಿ ಅದಕ್ಕೆ ತಕ್ಕ ಪ್ರತಿಭೆಗಳು ತಯಾರಾಗಬೇಕು, ಶಿಕ್ಷಣ ವ್ಯವಸ್ಥೆ ಸಹ ಸುಧಾರಿಸಬೇಕು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಇಲ್ಲಿನ ಗೋಪನಕೊಪ್ಪದ ಸರ್ಕಾರಿ ಪದವಿಪೂರ್ವ ಕಾಲೇಜಿನ 40ನೇ ವರ್ಷದ ಸಂಭ್ರಮಾಚರಣೆ, ನೂತನ ಕಟ್ಟಡ ಉದ್ಘಾಟನೆ, ಕಾಲೇಜು ಸಂಸತ್ ಹಾಗೂ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು.
‘ಭಾರತಕ್ಕೆ ಮೊಬೈಲ್ ಫೋನ್ ಬಂದು ಈಗ 25 ವರ್ಷಗಳಾಗಿದ್ದರೂ, ನಾವು ವಿದೇಶಗಳಿಂದಲೇ ಆಮದು ಮಾಡಿಕೊಳ್ಳುತ್ತಿದ್ದೇವೆ. ಕಳೆದ ಹತ್ತು ವರ್ಷಗಳಿಂದ ನಾವೇ ಮೊಬೈಲ್ ಫೋನ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಿ, ವಿದೇಶಗಳಿಗೆ ರಫ್ತು ಮಾಡುವಷ್ಟು ಬೆಳೆದಿದ್ದೇವೆ. ದೇಶದಲ್ಲಿ ಕೌಶಲ ಉದ್ಯೋಗಿಗಳ ಕೊರತೆಯಿದ್ದು, ಶಿಕ್ಷಣದಿಂದ ಅದನ್ನು ಸರಿಪಡಿಸಿಕೊಳ್ಳಬೇಕಿದೆ’ ಎಂದರು.
‘ಯಾವುದೇ ಕ್ಷೇತ್ರದಲ್ಲಿ ಇರಲಿ, ಪ್ರತಿಭೆಗೆ ಸಿಗುವಷ್ಟು ಪ್ರೋತ್ಸಾಹ ಬೇರೆ ಯಾವುದಕ್ಕೂ ಸಿಗುವುದಿಲ್ಲ. ಇತ್ತೀಚಿಗೆ ಕ್ರೀಡಾ ಕ್ಷೇತ್ರದಲ್ಲೂ ಸಾಕಷ್ಟು ಪ್ರೋತ್ಸಾಹ ಸಿಗುತ್ತಿದೆ. ಜಗತ್ತಿನ ದೊಡ್ಡ ಉದ್ಯಮಿಗಳು, ಸಾಧಕರು ಕಠಿಣ ಪರಿಶ್ರಮದಿಂದಲೇ ಮೇಲೆ ಬಂದಿದ್ದಾರೆ. ಪರಿಶ್ರಮಕ್ಕೆ ಪರ್ಯಾಯ ಮತ್ಯಾವುದೂ ಇಲ್ಲ’ ಎಂದು ಹೇಳಿದರು.
‘ಸರ್ಕಾರಿ ಶಾಲೆ, ಕಾಲೇಜುಗಳು ಬೆಳೆಯಬೇಕು. ಈ ಶಾಲೆಯಲ್ಲಿ ಓದುತ್ತಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ನಾಗವೇಣಿ ರಾಯಚೂರು ರಾಜ್ಯಕ್ಕೆ 5ನೇ ರ‍್ಯಾಂಕ್ ಪಡೆದು ಎಲ್ಲರಿಗೂ ಮಾದರಿಯಾಗಿದ್ದಾಳೆ. ಓದಬೇಕು, ಏನಾದರೂ ಸಾಧಿಸಬೇಕು ಎನ್ನುವ ಹಠವಿರಬೇಕು. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸುವಂಥ ಶಿಕ್ಷಕರೂ ಇದ್ದಾಗ, ಆ ಶಾಲೆ ಎತ್ತರಕ್ಕೆ ಬೆಳೆಯುತ್ತದೆ’ ಎಂದ ಅವರು, ‘ಧಾರವಾಡ ಜಿಲ್ಲೆಯ 1,100 ಸರ್ಕಾರಿ ಶಾಲೆಗಳಿಗೆ ಬಣ್ಣ ಬಳಿಯಲು ₹60 ಕೋಟಿ ಸಿಎಸ್‌ಆರ್ ನಿಧಿ ಬಳಸಲಾಗುತ್ತಿದೆ’ ಎಂದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ‘ಸರ್ಕಾರಿ ಶಾಲೆಯಲ್ಲಿ ಓದಿದವರು ಬದುಕಲ್ಲಿ ಎದುರಾಗುವ ಎಲ್ಲ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಹೊಂದಿರುತ್ತಾರೆ. ಶಿಕ್ಷಣದ ಜೊತೆಗೆ ಇಲ್ಲಿ ಜೀವನದ ಪಾಠ ಹೇಳಿಕೊಡಲಾಗುತ್ತಿದೆ. ಕಳೆದ ವರ್ಷ ರಾಜ್ಯಕ್ಕೆ 5ನೇ ರ‍್ಯಾಂಕ್ ಪಡೆದ ವಿದ್ಯಾರ್ಥಿನಿ ನಾಗವೇಣಿಗೆ ಸ್ಮಾರ್ಟ್ ಸಿಟಿ ಅಡಿ ಒಂದು ವಸತಿ ಮನೆ ನೀಡಲಾಗುವುದು’ ಎಂದರು.
ಮೇಯರ್ ಜ್ಯೋತಿ ಪಾಟೀಲ, ಉಪ ಮೇಯರ್ ಸಂತೋಷ ಚವ್ಹಾಣ್, ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಬೀರಪ್ಪ ಖಂಡೇಕರ, ಈಶ್ವರಗೌಡ ಪಾಟೀಲ, ಶಿವಕುಮಾರ ರಾಯನಗೌಡ್ರ, ಪ್ರಾಚಾರ್ಯೆ ಶೋಭಾ ಮಂಗಸೂಳೆ ಇತರರು ಪಾಲ್ಗೊಂಡಿದ್ದರು.
ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆ–ಕಾಲೇಜುಗಳಿಗೆ ಕಳುಹಿಸುವಂತಾಗಬೇಕು. ಸರ್ಕಾರಿ ಶಾಲೆಯಲ್ಲಿ ಓದಿದವರೇ ಹೆಚ್ಚಾಗಿ ಉನ್ನತ ಹುದ್ದೆಯಲ್ಲಿ ಇರುತ್ತಾರೆಪ್ರದೀಪ ಶೆಟ್ಟರ್ ವಿಧಾನ ಪರಿಷತ್ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.