
ಧಾರವಾಡ: ‘ನೀರಾವರಿ ಯೋಜನೆ ಅನುಷ್ಠಾನ ನಿಟ್ಟಿನಲ್ಲಿ ಭೂಸ್ವಾಧೀನ ಪ್ರಕ್ರಿಯೆ ಅತ್ಯಂತ ಪ್ರಮುಖವಾದುದು. ಭೂಸ್ವಾಧೀನವಾಗದ ಕಾರಣಕ್ಕೆ ಹಲವು ಯೋಜನೆಗಳು ನನೆಗುದಿಗೆ ಬಿದ್ದಿವೆ’ ಎಂದು ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಗೌರವ್ ಗುಪ್ತ ಹೇಳಿದರು.
ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ) ವತಿಯಿಂದ ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಬುಧವಾರ ನಡೆದ ಜಲಸಂಪನ್ಮೂಲ ಇಲಾಖೆಯ ಎಂಜಿನಿಯರ್‌ಗಳ (ವಾಲ್ಮಿಯಲ್ಲಿ ತರಬೇತಿ ಪಡೆದವರು) ಸಮ್ಮೇಳನದಲ್ಲಿ ಅವರು ಮಾತನಾಡಿದರು.
‘ಭೂಸ್ವಾಧೀನ ಮಾಡದೆ ಯೋಜನೆ ಕಾರ್ಯಗತಗೊಳಿಸಲು ಸಾಧ್ಯವಿಲ್ಲ. ಈ ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ ನಡೆಸಬೇಕು. ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಿಕೊಳ್ಳಬೇಕು’ ಎಂದರು.
‘ಯೋಜನೆ ಕಾಮಗಾರಿ ವೆಚ್ಚ ಅಂದಾಜು ಪಟ್ಟಿ ತಯಾರಿಗೆ ಸಂಬಂಧಿಸಿದಂತೆ ಬಹಳಷ್ಟು ‘ಕಮೆಂಟ್’ಗಳು ವ್ಯಕ್ತವಾಗುತ್ತಿವೆ. ರಾಜ್ಯದ ನಾಲ್ಕೂ ನೀರಾವರಿ ನಿಗಮಗಳಲ್ಲಿ ಅಂದಾಜು ಪಟ್ಟಿ ಪರಿಶೀಲನಾ ಸಮಿತಿಗಳು ಇವೆ. ಅಂದಾಜು ಪಟ್ಟಿ ಪದೇಪದೇ ಬದಲಾವಣೆಯಾಗದಂತೆ ಎಚ್ಚರವಹಿಸಬೇಕು. ಈ ನಿಟ್ಟಿನಲ್ಲಿ ಹಣಕಾಸು ಇಲಾಖೆಯವರು ಅಧ್ಯಯನ ನಡೆಸಿ ವರದಿ ಸಲ್ಲಿಸಿದ್ದಾರೆ’ ಎಂದರು.
‘ನವತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು. ‘ರಿಮೋಟ್ ಸೆನ್ಸಿಂಗ್’, ‘ಜಿಐಎಸ್’ (ಭೌಗೋಳಿಕ ಮಾಹಿತಿ ವ್ಯವಸ್ಥೆ), ‘ಸ್ಯಾಟಿಲೈಟ್ ಇಮೇಜ್’ (ಉಪಗ್ರಹ ಚಿತ್ರ) ಮೊದಲಾದ ನವತಂತ್ರಜ್ಞಾನಗಳನ್ನು ತಿಳಿದುಕೊಳ್ಳಬೇಕು. ಕಾರ್ಯಕ್ಷೇತ್ರದಲ್ಲಿ ಅನ್ವಯಿಸಬೇಕು’ ಎಂದು ಸಲಹೆ ನೀಡಿದರು.
‘ರೈತರೊಂದಿಗೆ ಸಹಭಾಗಿತ್ವದಲ್ಲಿ ಕೆಲಸ ಮಾಡಬೇಕು. ನೀರು ಬಳಕೆದಾರರ ಸಹಕಾರ ಸಂಘಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಬೇಕು. ಸಂಘಗಳ ಒಕ್ಕೂಟ ಸ್ಥಾಪಿಸಿ ಅವು ಸ್ವಯಂ ಕಾರ್ಯನಿರ್ವಹಿಸುವಂತೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ನೀರಿನ ಸದ್ಬಳಕೆ ಮತ್ತು ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು’ ಎಂದು ಹೇಳಿದರು.
ಜಿಲ್ಲಾಧಿಕಾರಿ ದಿವ್ಯಪ್ರಭು, ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ, ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಎಂ.ವಿ.ವೈಶಾಲಿ, ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಮೂರ್ತಿ ಕುಲಕರ್ಣಿ, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ, ವಿಶ್ವೇಶ್ವರಯ್ಯ ನೀರಾವರಿ ನಿಗಮದ ಸಣ್ಣಚಿತ್ತಯ್ಯ, ಕೃಷಿ ವಿಶ್ವವಿದ್ಯಾಲಯದ ಅಧಿಕಾರಿ ಮಂಜುನಾಥ ಇದ್ದರು.
‘ಜಲಸಂಪನ್ಮೂಲ ವಿ.ವಿ ಸ್ಥಾಪನೆಗೆ ಚಿಂತನೆ’
‘ಜಲಸಂಪನ್ಮೂಲ ವಿಶ್ವವಿದ್ಯಾಲಯ ಸ್ಥಾಪಿಸಲು ಸರ್ಕಾರ ಚಿಂತನೆ ನಡೆಸಿದೆ. ಕಳೆದ ಬಾರಿ ಬಜೆಟ್ ಸಂದರ್ಭದಲ್ಲಿ ಈ ವಿಚಾರ ಪ್ರಸ್ತಾಪವಾಗಿತ್ತು’ ಎಂದು ಉಪಮುಖ್ಯಮಂತ್ರಿಯ ವಿಶೇಷ ಅಧಿಕಾರಿ ವಿಶ್ವನಾಥ ರೆಡ್ಡಿ ತಿಳಿಸಿದರು. ‘ವಿಶ್ವವಿದ್ಯಾಲಯ ಸ್ಥಾಪನೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಆಸಕ್ತಿ ಇದೆ. ವಾಲ್ಮಿ ಕಾರ್ಯವಿಧಾನಗಳ ವೃದ್ಧಿ ನಿಟ್ಟಿನಲ್ಲಿ ಈ ಸಂಸ್ಥೆಗೆ ಉತ್ಕೃಷ್ಟತಾ ಸಂಸ್ಥೆ (ಸೆಂಟರ್ ಆಫ್ ಎಕ್ಸಲೆನ್ಸ್) ಮಾನ್ಯತೆ ನೀಡಲಾಗಿದೆ’ ಎಂದರು. ‘ಸರ್ಕಾರವು ಜಲ ಕಾಯ್ದೆಯನ್ನು ತಿದ್ದುಪಡಿ ಮಾಡಿದೆ. ಜಲಸಂಪನ್ಮೂಲ ಎಂಜಿನಿಯರ್‌ಗಳಿಗೆ ಈ ಕಾಯ್ದೆಯಡಿ ಹಲವು ಅಧಿಕಾರಗಳನ್ನು ನೀಡಲಾಗಿದೆ. ನೀರಾವರಿ ಕೋರ್ಟ್ ನಿರ್ವಹಣೆ ಮ್ಯಾಜಿಸ್ಟ್ರಿಯಲ್ ಅಧಿಕಾರ ಮೊದಲಾದವನ್ನು ನೀಡಲಾಗಿದೆ. ಎಂಜಿನಿಯರ್‌ಗಳಿಗೆ ತರಬೇತಿ ನೀಡಲಾಗಿದೆ’ ಎಂದರು.
ಎಂಜಿನಿಯರ್‌ಗಳು ಕ್ಷೇತ್ರಕ್ಕೆ ಭೇಟಿ ನೀಡಬೇಕು. ಜನರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಬೇಕು. ಹೊಸ ವಿಷಯಗಳನ್ನು ತಿಳಿದುಕೊಳ್ಳಬೇಕು ನಿರಂತರವಾಗಿ ನವೀಕೃತವಾಗಬೇಕು-ಎಜಾಜ್ ಹುಸೇನ್, ಕಾರ್ಯದರ್ಶಿ ಜಲಸಂಪನ್ಮೂಲ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.