ADVERTISEMENT

ಜನ ನಿಮ್ಮನ್ನು ತಿರಸ್ಕರಿಸಿ, ಮನೆಗೆ ಕಳುಹಿಸಿದ್ದಾರೆ: ಜೋಶಿಗೆ ಶೆಟ್ಟರ್ ತಿರುಗೇಟು

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2023, 12:21 IST
Last Updated 17 ಅಕ್ಟೋಬರ್ 2023, 12:21 IST
<div class="paragraphs"><p>ಜಗದೀಶ್‌ ಶೆಟ್ಟರ್‌ ಮತ್ತು ಪ್ರಲ್ಹಾದ ಜೋಶಿ </p></div>

ಜಗದೀಶ್‌ ಶೆಟ್ಟರ್‌ ಮತ್ತು ಪ್ರಲ್ಹಾದ ಜೋಶಿ

   

ಹುಬ್ಬಳ್ಳಿ: ‘ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ನಿಮಗೆ ಎಲ್ಲಿದೆ? ನಿಮ್ಮ ಮೇಲೆ ಭ್ರಷ್ಟಾಚರದ ಆಪಾದನೆ ಬಂದಿದ್ದರಿಂದ ಜನ ನಿಮ್ಮನ್ನು ತಿರಸ್ಕರಿಸಿ, ಮನೆಗೆ ಕಳುಹಿಸಿದ್ದಾರೆ. ಈಗ ನಿಮಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲಿಕ್ಕೆ ಏನು ಹಕ್ಕಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಜಗದೀಶ ಶೆಟ್ಟರ್‌ ಅವರು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ತಿರುಗೇಟು ನೀಡಿದರು.

ನಗರದಲ್ಲಿ ಸೋಮವಾರ  ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪಂಚ ರಾಜ್ಯಗಳಿಗೆ ಕರ್ನಾಟಕದಿಂದ ₹ 1000 ಕೋಟಿ ಹಣ ಸಂಗ್ರಹಿಸಲಾಗುತ್ತಿದೆ ಎಂದು ಜೋಶಿ ಅವರು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದರು.

ADVERTISEMENT

‘ಇದೊಂದು ಆಧಾರ ರಹಿತ ಆರೋಪ. ಜೋಶಿ ಅವರೊಬ್ಬ ಜವಾಬ್ದಾರಿಯುತ ನಾಯಕ. ಅವರು ಯಾವ ಆಧಾರದ ಮೇಲೆ ಹೇಳಿದ್ದಾರೋ ಗೊತ್ತಿಲ್ಲ. ಈ ಬಗ್ಗೆ ಸ್ಪಷ್ಟತೆ ನೀಡಬೇಕು. ಆದಾಯ ತೆರಿಗೆ ಇಲಾಖೆ ಯಾರ ಕೈಯಲ್ಲಿ ಇದೆ. ಕೂಸು ಹುಟ್ಟುವ ಮುನ್ನ ಕುಲಾಯಿ ಹೊಲಿಸಿದ ಹಾಗೇ, ಯಾವುದೇ ಆದಾಯ ತೆರಿಗೆ ಇಲಾಖೆಯಿಂದ ಮಾಹಿತಿ ಕೊಟ್ಟಿಲ್ಲ. ಸಂಬಂಧಿಸಿದ ಇಲಾಖೆ ಯಾರ ಹಣ ಅಂತ ಮಾಹಿತಿ ಕೊಡಲಿ. ಅದು ಯಾರಿಗೆ ಸೇರಿದ್ದು ಮೊದಲು ಹೇಳಲಿ. ನಂತರ ಅದರ ಬಗ್ಗೆ ಚರ್ಚೆ ಆಗಲಿ’ ಎಂದರು.

ಕೆಪಿಸಿಸಿ ಕರೆಪ್ಷನ್ ಕಮಿಟಿ ಎಂಬ ಜೋಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಅದರ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ ನಿಮಗೆ. ನಿಮ್ಮ ಮೇಲೆ ಭ್ರಷ್ಟಾಚಾರ ಆಪಾದನೆ ಬಂದು ಜನ ತಿರಸ್ಕರಿಸಿ ನಿಮ್ಮನ್ನು ಮನೆಗೆ ಕಳಿಸಿದ್ದಾರೆ. ಈಗ ನಿಮಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲಿಕ್ಕೆ ಏನು ಹಕ್ಕಿದೆ’ ಎಂದು ತಿರುಗೇಟು ನೀಡಿದರು.

ರಾಜ್ಯದಾದ್ಯಂತ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಅವರು, ‘ಪ್ರತಿಭಟನೆ ಮಾಡಲು ನಿಮಗೇನು ನೈತಿಕತೆ ಇದೆ. ಕಳೆದ ಬಾರಿ ಬೊಮ್ಮಾಯಿ ಸರ್ಕಾರಕ್ಕೂ ಭ್ರಷ್ಟಾಚಾರದ ಆರೋಪ ಬಂದಿತ್ತು. 40 ಪರ್ಸೆಂಟ್‌ ಸರ್ಕಾರ, ಪೇ ಸಿಎಂ, ಎಲ್ಲೆಡೆ ಭ್ರಷ್ಟಾಚಾರ ನಡೀತಾ ಇದೆ ಅಂತ ಜನ ಮಾತಾಡಿದ್ದರು. ಗುತ್ತಿಗೆದಾರರು ಆರೋಪ ಮಾಡಿದ್ದರು. ನಿಮಗೆ ಒಬ್ಬ ವಿರೋಧ ಪಕ್ಷದ ನಾಯಕನನ್ನು ಮಾಡಲಿಕ್ಕೆ ಆಗಲಿಲ್ಲ. ಯಾರ ನೇತೃತ್ವದಲ್ಲಿ ಪ್ರತಿಭಟನೆ ಮಾಡ್ತೀರಿ ನೀವು. ನಿಮ್ಮ ವಿರುದ್ಧ ಪಕ್ಷದ ನಾಯಕ ಯಾರು, ಸುಮ್ಮನೆ ರಾಜಕೀಯಕ್ಕಾಗಿ ಪ್ರತಿಭಟನೆ ಮಾಡೋದ್ರಲ್ಲಿ ಅರ್ಥ ಇಲ್ಲ’ ಎಂದರು.

ಬಿಜೆಪಿ ಮುಖಂಡ ಸದಾನಂದಗೌಡರು ಕಾಂಗ್ರೆಸ್‌ಗೆ ಬರುವ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ಅವರನ್ನು ಸಂಪರ್ಕಿಸಿಲ್ಲ. ಅವರಾಗಿ ಮಾತನಾಡಿದರೇ ಮಾತನಾಡುವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.