ADVERTISEMENT

ಜೆಡಿಎಸ್‌ ಬೆಳ್ಳಿಹಬ್ಬ: ವಿಜಯಪುರದಲ್ಲಿ ಸಮಾವೇಶ ನಾಳೆ

ಹುಬ್ಬಳ್ಳಿ–ಧಾರವಾಡ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಗುರುರಾಜ ಹುಣಶಿಮರದ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 6:15 IST
Last Updated 26 ಫೆಬ್ರುವರಿ 2026, 6:15 IST
ಗುರುರಾಜ ಹುಣಶಿಮರದ
ಗುರುರಾಜ ಹುಣಶಿಮರದ   

ಹುಬ್ಬಳ್ಳಿ: ‘ಜಾತ್ಯತೀತ ಜನತಾ ದಳದ ಬೆಳ್ಳಿ ಹಬ್ಬದ ಪ್ರಯುಕ್ತ ಕಿತ್ತೂರು ಕರ್ನಾಟಕ ಭಾಗದ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ಬೃಹತ್‌ ಸಮಾವೇಶವನ್ನು ಫೆ. 27ರಂದು ವಿಜಯಪುರದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಜೆಡಿಎಸ್‌ ಹುಬ್ಬಳ್ಳಿ–ಧಾರವಾಡ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಗುರುರಾಜ ಹುಣಶಿಮರದ ಹೇಳಿದರು.

‘ವಿಜಯಪುರ, ಬಾಗಲಕೋಟೆ, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳ ಕಾರ್ಯಕರ್ತರು ಮತ್ತು ಎಲ್ಲ ಜಿಲ್ಲೆಗಳ ಅಧ್ಯಕ್ಷರು, ಪದಾಧಿಕಾರಿಗಳು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂದಾಜು 1 ಲಕ್ಷ ಮಂದಿ ಸೇರುವ ನಿರೀಕ್ಷೆಯಿದೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಕಾರ್ಯಕರ್ತರನ್ನು ಪ್ರೋತ್ಸಾಹಿಸಲು ಬೆಳ್ಳಿ ಹಬ್ಬ ಕಾರ್ಯಕ್ರಮವನ್ನು ಧಾರವಾಡ, ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಏಪ್ರಿಲ್‌, ಮೇ ತಿಂಗಳಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ನಂತರ ಪ್ರತಿ ಜಿಲ್ಲೆಯಲ್ಲೂ ಕಾರ್ಯಕರ್ತರ ಸಮಾವೇಶ ಹಮ್ಮಿಕೊಂಡು ಪಕ್ಷ ಸಂಘಟಿಸಲಾಗುವುದು’ ಎಂದರು.

ADVERTISEMENT

‘ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲಾಗದೆ ಪರದಾಡುತ್ತಿದೆ. ಭ್ರಷ್ಟಾಚಾರ ಮಿತಿ ಮೀರುತ್ತಿದೆ. ಎರಡೂವರೆ ವರ್ಷದಲ್ಲಿ ಒಂದೇ ಒಂದು ಸರ್ಕಾರಿ ಹುದ್ದೆ ನೇಮಕಾತಿ ನಡೆದಿಲ್ಲ. ಧಾರವಾಡದಲ್ಲಿ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ದಂಗೆ ಎದ್ದಿದ್ದು, ಮುಂಬರುವ ದಿನಗಳಲ್ಲಿ ಇದು ರಾಜ್ಯದಾದ್ಯಂತ ವ್ಯಾಪಿಸಿದರೂ ಅಚ್ಚರಿಯಿಲ್ಲ’ ಎಂದು ಹೇಳಿದರು.

ಮುಖಂಡ ವೀರಭದ್ರಪ್ಪ ಹಾಲಹರವಿ ಮಾತನಾಡಿ, ‘ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದ್ದು, ಯಾವ ಅಭಿವೃದ್ಧಿ ಕಾರ್ಯಗಳೂ ನಡೆಯುತ್ತಿಲ್ಲ. ಸೂರಿಲ್ಲದವರಿಗೆ ಮನೆ ಹಂಚಿಕೆ ಮಾಡಿದ್ದೇವೆ ಎನ್ನುತ್ತಿದ್ದಾರೆ. ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ ನೀಡಿದ್ದು, ಸಾಕಷ್ಟು ಫಲಾನುಭವಿಗಳು ಹಣ ತುಂಬಿದ್ದರೂ ಇನ್ನೂ ಮನೆ ನೀಡಿಲ್ಲ. ಸಮಾವೇಶದ ನಂತರ ಸರ್ಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ನಿರಂತರ ಪ್ರತಿಭಟನೆ ನಡೆಸಲಾಗುವುದು’ ಎಂದರು.

ಮುಖಂಡರಾದ ನವೀನಕುಮಾರ ಮಡಿವಾಳರ, ಬಾಷಾಸಾಬ್‌ ಮುದ್ಗಲ್, ಸಿದ್ದುಮಹಾಂತ ಒಡೆಯರ, ಶಂಕರ ಪವಾರ, ಶಾಬಾಜ್‌ ಇದ್ದರು.

ಮುಂಬರುವ ಬಜೆಟ್‌ನಲ್ಲಿ ಕನಿಷ್ಠ 1 ಲಕ್ಷ ಉದ್ಯೋಗ ಭರ್ತಿ ಮಾಡುವ ಕುರಿತು ಹಾಗೂ ಧಾರವಾಡ ಜಿಲ್ಲೆಯಲ್ಲಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು ಸ್ಥಾಪಿಸುವ ಕುರಿತು ಘೋಷಣೆ ಮಾಡಬೇಕು
–ಗುರುರಾಜ ಹುಣಶಿಮರದ, ಜೆಡಿಎಸ್‌ ಹುಬ್ಬಳ್ಳಿ–ಧಾರವಾಡ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.