
ಹುಬ್ಬಳ್ಳಿ: ‘ವಿಜಯಪುರ, ಬೆಳಗಾವಿ, ಹುಬ್ಬಳ್ಳಿ ಮತ್ತು ಶಿವಮೊಗ್ಗ ವಿಮಾನ ನಿಲ್ದಾಣಗಳಿಗೆ ಕನ್ನಡನಾಡಿನ ಮಹನೀಯರ ಹೆಸರಿಡುವಂತೆ ಕೇಂದ್ರ ಸರ್ಕಾರಕ್ಕೆ ಶಾಂತಿಯುತವಾಗಿ ಹಕ್ಕೊತ್ತಾಯ ಸಲ್ಲಿಸೋಣ’ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.
ನಗರದಲ್ಲಿ ನಾಲ್ಕು ವಿಮಾನ ನಿಲ್ದಾಣಗಳ ಕನ್ನಡಿಗರ ನಾಮಕರಣ ಸಮಿತಿ, ಕನ್ನಡಪರ ಸಂಘಟನೆ ಒಕ್ಕೂಟ, ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿಯಿಂದ ಶನಿವಾರ ನಡೆದ ಹಕ್ಕೊತ್ತಾಯ ಸಭೆಯಲ್ಲಿ ಮಾತನಾಡಿದ ಅವರು, ‘ನಾಮಕರಣಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಿದೆ. ಜನವರಿ 26ರೊಳಗೆ ಕೇಂದ್ರ ಸರ್ಕಾರ ಸ್ಪಂದಿಸದಿದ್ದರೆ, ದೆಹಲಿ ಚಲೋ ಕೈಗೊಳ್ಳೋಣ’ ಎಂದರು.
‘ವಿಜಯಪುರ ವಿಮಾನ ನಿಲ್ದಾಣಕ್ಕೆ ಜಗಜ್ಯೋತಿ ಬಸವೇಶ್ವರ, ಬೆಳಗಾವಿ ನಿಲ್ದಾಣಕ್ಕೆ ಕಿತ್ತೂರು ರಾಣಿ ಚನ್ನಮ್ಮ, ಹುಬ್ಬಳ್ಳಿ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಮತ್ತು ಶಿವಮೊಗ್ಗ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಹೆಸರಿಡಬೇಕು’ ಎಂದರು.
ನಟಿ ಪೂಜಾ ಗಾಂಧಿ ಮಾತನಾಡಿ, ‘ಕೇಂದ್ರ ಸರ್ಕಾರ ನಾಲ್ಕು ವಿಮಾನ ನಿಲ್ದಾಣಗಳಿಗೆ ಮಹನೀಯರ ಹೆಸರಿಡಬೇಕು. ಜೊತೆಗೆ ನಿಲ್ದಾಣಗಳಲ್ಲಿ ಮಹನೀಯರ ಪ್ರತಿಮೆ ನಿರ್ಮಿಸಿ ಸಾಕ್ಷ್ಯಚಿತ್ರ ಹಾಗೂ ಜೀವನ ಸಾರಾಂಶ ಪ್ರಕಟಿಸಬೇಕು’ ಎಂದರು.
ರೇವಣಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ‘ಸಂಗೊಳ್ಳಿ ರಾಯಣ್ಣ ಹುತಾತ್ಮ ದಿನದಂದು ನಾಲ್ಕು ವಿಮಾನ ನಿಲ್ದಾಣಗಳಿಗೆ ಮಹನೀಯರ ಹೆಸರು ನಾಮಕರಣಗೊಳಿಸಲು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ನೇತೃತ್ವ ವಹಿಸಬೇಕು’ ಎಂದರು.
ಸಂಗೊಳ್ಳಿ ರಾಯಣ್ಣ ಹಿತರಕ್ಷಣೆ ಸಮಿತಿ ಅಧ್ಯಕ್ಷ ಶಿವಾನಂದ ಮುತ್ತಣ್ಣವರ ಮಾತನಾಡಿ, ‘ವಿಮಾನ ನಿಲ್ದಾಣಗಳಿಗೆ ಹೆಸರು ನಾಮಕರಣ ಕುರಿತು ಕೇಂದ್ರ ಸರ್ಕಾರದ ಸಚಿವರಿಗೆ ಎರಡು ಬಾರಿ ಮನವಿ ಸಲ್ಲಿಸಲಾಗಿದೆ. ಒಂದು ವೇಳೆ ಬೇಡಿಕೆ ಈಡೇರದಿದ್ದರೆ ಮಾರ್ಚ್ 28ರಂದು ಮತ್ತೆ ಪ್ರತಿಭಟನಾ ಮೆರವಣಿಗೆ ನಡೆಸಿ ಮೂರನೇ ಮನವಿ ಸಲ್ಲಿಸಲಾಗುವುದು’ ಎಂದರು.
ಧಾರವಾಡದ ಬಸವಣ್ಣದೇವರು, ಜಾಲಿಕಟ್ಟಿಯ ಕೃಷ್ಣಾನಂದ ಸ್ವಾಮೀಜಿ, ಬದಾಮಿಯ ಶಿವಶಂಕರ ಸ್ವಾಮೀಜಿ, ಬದಾಮಿಯ ಶಿವಶಂಕರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಮಾಜಿ ಶಾಸಕಿ ಕುಸುಮಾ ಶಿವಳ್ಳಿ, ಮಾಜಿ ಮೇಯರ್ ಅನೀಲ ಪಾಟೀಲ, ಹಾಲುಮತ ಮಹಾಸಭಾ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ, ಮಲ್ಲಿಕಾರ್ಜುನ ತಾಲೂರ, ತಾರಾದೇವಿ ವಾಲಿ, ಗುರು ರಾಯನಗೌಡರ, ಅಡಿವೆಪ್ಪ ಶಿವಳ್ಳಿ, ಚಂದ್ರಶೇಖರ ಬಿಜ್ಜಳ್ಳಿ, ಪ್ರಕಾಶ ಕಿತ್ತೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.