ADVERTISEMENT

ನೀರಾವರಿ ಯೋಜನೆಗಳಿಗೆ ಕೇಂದ್ರದಿಂದ ನಿರ್ಲಕ್ಷ್ಯ: ಸಿಎಂ ಸಿದ್ದರಾಮಯ್ಯ

ಬೆಣ್ಣೆಹಳ್ಳ ಪ್ರವಾಹ ನಿಯಂತ್ರಣ ತಡೆ ಕಾಮಗಾರಿ ಶಂಕುಸ್ಥಾಪನೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 0:30 IST
Last Updated 9 ಫೆಬ್ರುವರಿ 2026, 0:30 IST
ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಶಾಸಕರಾದ ಎಫ್‌.ಎಚ್.ಜಕ್ಕಪ್ಪನವರ, ಪ್ರಸಾದ್ ಅಬ್ಬಯ್ಯ, ಸಚಿವರಾದ ಸತೀಶ ಜಾರಕಿಹೊಳಿ, ಸಂತೋಷ ಲಾಡ್‌, ಎಚ್‌.ಕೆ.ಪಾಟೀಲ, ಶಾಸಕ ಎನ್‌.ಎಚ್‌.ಕೋನರಡ್ಡಿ, ವಿಧಾನ ಪರಿಷತ್ತಿನ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹಮ್ಮದ್ ಹಾಜರಿದ್ದರು
ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಶಾಸಕರಾದ ಎಫ್‌.ಎಚ್.ಜಕ್ಕಪ್ಪನವರ, ಪ್ರಸಾದ್ ಅಬ್ಬಯ್ಯ, ಸಚಿವರಾದ ಸತೀಶ ಜಾರಕಿಹೊಳಿ, ಸಂತೋಷ ಲಾಡ್‌, ಎಚ್‌.ಕೆ.ಪಾಟೀಲ, ಶಾಸಕ ಎನ್‌.ಎಚ್‌.ಕೋನರಡ್ಡಿ, ವಿಧಾನ ಪರಿಷತ್ತಿನ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹಮ್ಮದ್ ಹಾಜರಿದ್ದರು   

ಹುಬ್ಬಳ್ಳಿ: ‘ಕಳಸಾ-ಬಂಡೂರಿ ನಾಲಾ ಯೋಜನೆ, ಭದ್ರಾ ಮೇಲ್ದಂಡೆ, ಕೃಷ್ಣಾ ಮೇಲ್ದಂಡೆ–3ನೇ ಹಂತದ ಯೋಜನೆ, ಮೇಕೆದಾಟು ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಸಹಕರಿಸದೇ ನಿರ್ಲಕ್ಷ್ಯ ವಹಿಸಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಇಲ್ಲಿ ಆರೋ‍ಪಿಸಿದರು. 

ತಾಲ್ಲೂಕಿನ ಶಿರಗುಪ್ಪಿಯಲ್ಲಿ ನಡೆದ ಬೆಣ್ಣೆಹಳ್ಳ ಪ್ರವಾಹ ನಿಯಂತ್ರಣ ತಡೆ ಕಾಮಗಾರಿ ಶಂಕುಸ್ಥಾಪನೆ, ನವಲಗುಂದ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘2023–24ರ ಬಜೆಟ್‌ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್‌ ಅವರು ಭದ್ರಾ ಮೇಲ್ದಂಡೆ ಯೋಜನೆಗೆ ₹5,300 ಕೋಟಿ ಅನುದಾನ ಘೋಷಿಸಿದ್ದರು. ಈವರೆಗೆ ಒಂದು ರೂಪಾಯಿ ಬಂದಿಲ್ಲ’ ಎಂದರು.

ADVERTISEMENT

‘ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಜ್ಯದ ಪ್ರಥಮ ರಾಷ್ಟ್ರೀಯ ನೀರಾವರಿ ಯೋಜನೆಯಾಗಿ ಘೋಷಿಸುತ್ತೇವೆ ಎಂದು ಬಜೆಟ್‌ನಲ್ಲೇ ಪ್ರಸ್ತಾಪಿಸಿದ್ದರು. ಅದೂ ಸಹ ಆಗಿಲ್ಲ‘ ಎಂದು ದೂರಿದರು. 

‘ಮಹದಾಯಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಪರಿಸರ ಇಲಾಖೆಯಿಂದ ಇಂದಿಗೂ ಅನುಮತಿ ಸಿಕ್ಕಿಲ್ಲ. ಅನುಮತಿ ದೊರೆತರೆ ನಾವು ನಾಳೆಯಿಂದಲೇ ಯೋಜನೆಯ ಕಾಮಗಾರಿ ಆರಂಭಿಸಲು ಸಿದ್ಧರಿದ್ದೇವೆ. ಆದರೆ, ಇದೂ ಕೂಡ ಆಗುತ್ತಿಲ್ಲ’ ಎಂದರು.

‘ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಹಂತ–3 ಅನುಷ್ಠಾನಕ್ಕೆ ಕೇಂದ್ರದ ಗೆಜೆಟ್‌ ಅಧಿಸೂಚನೆ ಬಾಕಿಯಿದೆ. ಇದರಿಂದ 3ನೇ ಹಂತದ ಯೋಜನೆ ಜಾರಿಗೆ ಅಡಚಣೆಯಾಗಿದೆ. ಇದಕ್ಕೂ ಕೇಂದ್ರವೇ ಕಾರಣ’ ಎಂದರು. 

‘ಮೇಕೆದಾಟು ಯೋಜನೆ ವಿಚಾರವಾಗಿ ತಮಿಳುನಾಡು ಹಾಗೂ ಕೇಂದ್ರ ಸರ್ಕಾರ ಅನಗತ್ಯವಾಗಿ ರಾಜಕೀಯ ಮಾಡುತ್ತಿವೆ. ಈ ಯೋಜನೆಯಿಂದ ಎರಡೂ ರಾಜ್ಯಗಳಿಗೆ ಅನುಕೂಲ. ಇದಕ್ಕೂ ಕೇಂದ್ರದ್ದೇ ಅಡಚಣೆಯಿದೆ’ ಎಂದರು.

‘ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಈ ಕಾರ್ಯಕ್ರಮಕ್ಕೆ ಬಂದಿದ್ದರೆ, ಯೋಜನೆಗಳಿಗೆ ಯಾಕೆ ಹಿನ್ನಡೆ ಆಗಿದೆ ಎಂಬುದನ್ನು ಅವರಿಗೆ ನೇರವಾಗಿ ಕೇಳುತ್ತಿದ್ದೆ. ಆದರೆ, ಅವರು ಬಂದಿಲ್ಲ’ ಎಂದರು.

ಮಹದಾಯಿ ಯೋಜನೆ ರಾಜ್ಯ ಸರ್ಕಾರದಿಂದಲೇ ನಿಂತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಮಾತನ್ನು ನಂಬಬೇಡಿ. ಅವರೊಬ್ಬ ಸುಳ್ಳುಗಾರ. ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು.
ಸಿದ್ದರಾಮಯ್ಯ ಮುಖ್ಯಮಂತ್ರಿ
ಪ್ರಲ್ಹಾದ ಜೋಶಿ ಅವರೇ ನೀವು ಮಹದಾಯಿ ಯೋಜನೆ ಅನುಷ್ಠಾನಕ್ಕೆ ಕೇಂದ್ರದ ಪರಿಸರ ಇಲಾಖೆಯಿಂದ ಅನುಮತಿ ಕೊಡಿಸಬೇಕು. ಇಲ್ಲದಿದ್ದರೆ ನಮ್ಮ ಭಾಗದಲ್ಲಿ ಕಾಲಿಡಲು ನಿಮಗೆ ನೈತಿಕ ಹಕ್ಕಿಲ್ಲ
ಎಚ್‌.ಕೆ.ಪಾಟೀಲ ಕಾನೂನು ಸಚಿವ

‘ವಿಬಿ ಜಿ ರಾಮ್‌ ಜಿ ಯೋಜನೆಯಲ್ಲಿ ಶ್ರೀರಾಮ ಇಲ್ಲ’

‘ವಿಬಿ ಜಿ ರಾಮ್‌ ಜಿ’ ‌ಯೋಜನೆಯಲ್ಲಿ ಶ್ರಿರಾಮನ ಹೆಸರಿದೆ ಎಂದು ಬಿಜೆಪಿಯವರು ಹೇಳುತ್ತಾರೆ. ಇದರ ಹೆಸರು ‘ವಿಕಸಿತ ಭಾರತ – ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ)‘. ಇದರಲ್ಲಿ ಯಾವ ರಾಮನೂ ಇಲ್ಲ. ಕೌಶಲ್ಯ ರಾಮನೂ ಇಲ್ಲ. ದಶರಥ ರಾಮನೂ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.  ‘ಮನರೇಗಾ’ ಯೋಜನೆಬಹ ಪುನರ್‌ ಸ್ಥಾಪನೆ ಆಗುವವರೆಗೆ ನಾವು ಹೋರಾಟ ಮಾಡುತ್ತೇವೆ. ನಮ್ಮೊಂದಿಗೆ ನೀವು ಎಲ್ಲರೂ ಕೈಜೋಡಿಸಬೇಕು‘ ಎಂದು ಸಭಿಕರಿಗೆ ಹೇಳಿದರು.

ಬೆಣ್ಣೆಹಳ್ಳ ಯೋಜನೆ ಕಾಮಗಾರಿಗೆ ₹200 ಕೋಟಿ 

‘ಬೆಣ್ಣೆ ಹಳ್ಳ ಪ್ರವಾಹದಿಂದ ಧಾರವಾಡ ಹಾವೇರಿ ಹಾಗೂ ಗದಗ ಜಿಲ್ಲೆಗಳಲ್ಲಿನ 37 ಗ್ರಾಮಗಳಿಗೆ ತೊಂದರೆ ಆಗುತ್ತಿತ್ತು. 20 ಸಾವಿರ ಹೆಕ್ಟೇರ್‌ ಪ್ರದೇಶದ ಬೆಳೆ ಹಾನಿ ಆಗುತ್ತಿತ್ತು. ಇದರ ತಪ್ಪಿಸಲು ಬೆಣ್ಣೆಹಳ್ಳ ಯೋಜನೆಯಡಿ ವಿವಿಧ ಕಾಮಗಾರಿಗಳಿಗೆ ಬಜೆಟ್‌ನಲ್ಲಿ ಘೋಷಿಸಿದಂತೆ ₹200 ಕೋಟಿ ಬಿಡುಗಡೆ ಮಾಡಿದ್ದೇನೆ. ಶಂಕುಸ್ಥಾಪನೆ ಮಾಡಲಾಗಿದೆ. ಕಾಮಗಾರಿಬಹ ಆರಂಭವೂ ಆಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.