ADVERTISEMENT

ಕಮಿಷನ್‌ ಆರೋಪ ಕೇಳಿದ್ದೇನೆ, ಅನುಭವಕ್ಕೆ ಬಂದಿಲ್ಲ: ಚನ್ನಬಸವಾನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2022, 9:41 IST
Last Updated 20 ಏಪ್ರಿಲ್ 2022, 9:41 IST
ಚನ್ನಬಸವಾನಂದ ಸ್ವಾಮೀಜಿ
ಚನ್ನಬಸವಾನಂದ ಸ್ವಾಮೀಜಿ   

ಹುಬ್ಬಳ್ಳಿ: ಮಠ ಹಾಗೂ ಮಂದಿರಗಳಿಗೆ ಸರ್ಕಾರದ ಅನುದಾನ ನೀಡಲು ಅಧಿಕಾರಿಗಳು ಹಾಗೂ ರಾಜಕಾರಣಿಗಳು ಕಮಿಷನ್‌ ಪಡೆಯುತ್ತಾರೆ ಎನ್ನುವುದನ್ನು ಕೇಳಿದ್ದೇನೆ. ಸ್ವತಃ ಅನುಭವಕ್ಕೆ ಬಂದಿಲ್ಲ ಎಂದು ಬೆಂಗಳೂರಿನ ಚನ್ನಬಸವೇಶ್ವರ ಜ್ಞಾನಪೀಠದ ಚನ್ನಬಸವಾನಂದ ಸ್ವಾಮೀಜಿ ಹೇಳಿದರು.

ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ನಮ್ಮ ಪೀಠಕ್ಕೂ ಅನುದಾನ ಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಇನ್ನೂ ಕೊಟ್ಟಿಲ್ಲ. ಆದರೆ, ಕಮಿಷನ್‌ ಪಡೆಯುತ್ತಾರೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿರುವುದರಲ್ಲಿ ಸತ್ಯವಿದೆ. ಬಿಜೆಪಿ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದರೆ ಕಮಿಷನ್‌ ಪಡೆಯುತ್ತವೆ. ಪಡೆಯುವ ಪ್ರಮಾಣ ಹೆಚ್ಚು, ಕಡಿಮೆ ಇರುತ್ತದೆ ಅಷ್ಟೇ’ ಎಂದರು.

‘ರಾಜಕಾರಣಿಗಳು ಹಾಗೂ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಅವರು ಭ್ರಷ್ಟಾಚಾರ ಮಾಡದಿದ್ದರೆ ಅವರ ಮನೆಗಳ ಮೇಲೆ ತನಿಖಾ ಸಂಸ್ಥೆಗಳು ದಾಳಿ ನಡೆಸಿದರೆ ಕೋಟಿಗಟ್ಟಲೆ ಹಣ ಪತ್ತೆಯಾಗುವುದು ಹೇಗೆ. ಕಮಿಷನ್‌ ದಂಧೆ ದೇಶದಲ್ಲಿ ಇದು ಮೊದಲೇನಲ್ಲ. ಕೊನೆಯೂ ಇಲ್ಲ’ ಎಂದರು.

ಚುನಾವಣೆ ಸ್ಪರ್ಧೆ, ತಪ್ಪೇನಿದೆ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಮುಖ್ಯಮಂತ್ರಿಯಾಗುವುದಾದರೆ ಕರ್ನಾಟಕದಲ್ಲಿ ಸ್ವಾಮೀಜಿಗಳು ಯಾಕೆ ಶಾಸಕ, ಸಚಿವರಾಗಬಾರದು. ಅವಕಾಶ ಸಿಕ್ಕರೆ ನಾನೂ ಚುನಾವಣೆಗೆ ಸ್ಪರ್ಧಿಸುವೆ ಎಂದರು.

‘ತ್ಯಾಗಿಗಳ ಕೈಯಲ್ಲಿ ಅಧಿಕಾರ ಬಂದಾಗ ಮಾತ್ರ ಸಮಾಜ ಸುಧಾರಣೆಯಾಗುತ್ತದೆ. ತ್ಯಾಗಿಗಳು ಚುನಾವಣೆಗೆ ನಿಲ್ಲುವುದು ತಪ್ಪೇನೂ ಅಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.