ADVERTISEMENT

ಕರ್ನಾಟಕ ವಿಶ್ವವಿದ್ಯಾಲಯ: ಕ್ರೀಡಾಪಟುಗಳ ದಿನಭತ್ಯೆಗೆ ಕತ್ತರಿ; ಆಕ್ಷೇಪ

ಕ್ರೀಡಾ ತರಬೇತಿ ಶಿಬಿರ

ಬಿ.ಜೆ.ಧನ್ಯಪ್ರಸಾದ್
Published 3 ಜನವರಿ 2026, 5:14 IST
Last Updated 3 ಜನವರಿ 2026, 5:14 IST
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಯೋಗ ತರಬೇತಿ ಶಿಬಿರದಲ್ಲಿ ಯೋಗಪಟುಗಳು ಯೋಗಾಭ್ಯಾಸದಲ್ಲಿ ತೊಡಗಿದ್ದರು  –ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಯೋಗ ತರಬೇತಿ ಶಿಬಿರದಲ್ಲಿ ಯೋಗಪಟುಗಳು ಯೋಗಾಭ್ಯಾಸದಲ್ಲಿ ತೊಡಗಿದ್ದರು  –ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರನಾಥ   

ಧಾರವಾಡ: ಕ್ರೀಡಾ ತರಬೇತಿ ಶಿಬಿರದ (ಕೋಚಿಂಗ್‌ ಕ್ಯಾಂಪ್‌) ಅವಧಿಯಲ್ಲಿ ಕ್ರೀಡಾಪಟುಗಳಿಗೆ ನೀಡುವ ದಿನಭತ್ಯೆಗೆ ಕರ್ನಾಟಕ ವಿಶ್ವವಿದ್ಯಾಲಯ ಕತ್ತರಿ ಹಾಕಿದೆ. ವಿಶ್ವವಿದ್ಯಾಲಯದ ಈ ನಡೆಗೆ ಆಕ್ಷೇಪ ವ್ಯಕ್ತವಾಗಿದೆ.

ವಿವಿಧ ಕ್ರೀಡೆಗಳ ತರಬೇತಿ ಶಿಬಿರ ಅವಧಿಯಲ್ಲಿ ಕ್ರೀಡಾಪಟುಗಳಿಗೆ ತಲಾ ₹250 ದಿನಭತ್ಯೆ ನೀಡಲಾಗುತ್ತಿತ್ತು. ವಿಶ್ವವಿದ್ಯಾಲಯದಲ್ಲಿ ಈಗ ಫುಟ್ಬಾಲ್‌, ಬ್ಯಾಡ್ಮಿಂಟನ್‌ (ಮಹಿಳಾ) ತರಬೇತಿ ಶಿಬಿರಗಳು ನಡೆಯುತ್ತಿವೆ. ಉತ್ತರ ಕನ್ನಡ, ಧಾರವಾಡ, ಹಾವೇರಿ ಸಹಿತ ವಿವಿಧ ಜಿಲ್ಲೆಗಳ ವಿವಿಧ ಪದವಿ ಕಾಲೇಜುಗಳ ಕ್ರೀಡಾಪಟುಗಳು ತರಬೇತಿ ಶಿಬಿರಗಳಲ್ಲಿ ಪಾಲ್ಗೊಂಡಿದ್ದಾರೆ.

ಎರಡು ದಿನಗಳ ಹಿಂದೆ ಕುಸ್ತಿ ಶಿಬಿರ ಮುಗಿದಿದೆ. ಕುಸ್ತಿ ಕ್ರೀಡಾಪಟುಗಳು ಅಂತರ ವಿಶ್ವವಿದ್ಯಾಲಯ ಕುಸ್ತಿ ಸ್ಪರ್ಧೆಗೆ ಪಂಜಾಬ್‌ಗೆ ತೆರಳಿದ್ದಾರೆ. ಈ ತಂಡಕ್ಕೆ ದಿನಭತ್ಯೆ ನೀಡಿಲ್ಲ.

ADVERTISEMENT

‘ಪದವಿ ಕೋರ್ಸ್‌ನ ಪ್ರತಿ ವಿದ್ಯಾರ್ಥಿಯು ವಾರ್ಷಿಕ ₹370 ಕ್ರೀಡಾ ಶುಲ್ಕ (ಕ್ರೀಡಾ ನಿಧಿ) ಪಾವತಿಸಿರುತ್ತಾರೆ. ಕ್ರೀಡಾಪಟುಗಳ ದಿನಭತ್ಯೆಗೆ ಕತ್ತರಿ ಹಾಕಿರುವುದು ಸರಿಯಲ್ಲ. ತರಬೇತಿ ಶಿಬಿರದ ಅವಧಿಯಲ್ಲಿ ಕ್ರೀಡಾಪಟುಗಳ ಊಟ, ಉಪಾಹಾರಕ್ಕಾಗಿ ಈ ಭತ್ಯೆ ನೀಡಲಾಗುತ್ತದೆ’ ಎಂದು ಹುಬ್ಬಳ್ಳಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀಪಾಲ ಕುರಕುರಿ ತಿಳಿಸಿದರು.

‘ಈ ಹಿಂದೆ 10 ದಿನ ಶಿಬಿರ ನಡೆಯುತ್ತಿದ್ದವು. ಈಗ ಐದು ದಿನ ನಡೆಯುತ್ತಿವೆ. ಸಿದ್ಧತೆ, ತಂಡ ಸಮನ್ವಯ ನಿಟ್ಟಿನಲ್ಲಿ ಶಿಬಿರದ ಅವಧಿಯನ್ನು ಹಿಂದಿನಂತೆ 10 ದಿನಕ್ಕೆ ನಿಗದಿಪಡಿಸಬೇಕು’ ಎಂದು ಕೋಚ್‌ವೊಬ್ಬರು ಮನವಿ ಮಾಡಿದರು.

ಪುಟ್ಬಾಲ್‌ ತರಬೇತಿ ಶಿಬಿರದಲ್ಲಿ ಭಾಗವಹಿಸಿರುವ ಕ್ರೀಡಾಪಟುಗಳು ಅಂತರ ವಿಶ್ವವಿದ್ಯಾಲಯ ಸ್ಪರ್ಧೆಗೆ ತೆಲಂಗಾಣಕ್ಕೆ ತೆರಳಲು, ಬ್ಯಾಡ್ಮಿಂಟನ್‌ ತರಬೇತಿ ಶಿಬಿರದ ವಿದ್ಯಾರ್ಥಿನಿಯರು ಹೈದರಾಬಾದ್‌ನಲ್ಲಿ ನಡೆಯುವ ಟೂರ್ನಿಗೆ ತೆರಳಲು ಸಿದ್ಧತೆ ನಡೆಸಿದ್ದಾರೆ.

ಕೋಚಿಂಗ್‌ ಕ್ಯಾಂಪ್‌ಗೆ ಬಹಳಷ್ಟು ಕ್ರೀಡಾಪಟುಗಳು ಹೊರ ‌ಊರುಗಳಿಂದ ಬರುತ್ತಾರೆ. ವಿಶ್ವವಿದ್ಯಾಲಯದವರು ದಿನಭತ್ಯೆ ಕೊಟ್ಟರೆ ಅನುಕೂಲವಾಗುತ್ತದೆ
-ಶರತ್‌ ಕಲ್ಲಕುಂಟ್ಲ, ಫುಟ್ಬಾಲ್‌ ಕ್ರೀಡಾಪಟು
ಕೆಲ ಗೊಂದಲದಿಂದಾಗಿ ಸಮಸ್ಯೆಯಾಗಿದೆ. ಕ್ರೀಡಾಪಟುಗಳಿಗೆ ದಿನಭತ್ಯೆ ನೀಡುವಂತೆ ಹಣಕಾಸು ಅಧಿಕಾರಿಗೆ ತಿಳಿಸಿದ್ದೇನೆ. ಅವರು ಒಪ್ಪಿಕೊಂಡಿದ್ದಾರೆ.
-ಪ್ರೊ.ಎ.ಎಂ.ಖಾನ್‌, ಕುಲಪತಿ ಕರ್ನಾಟಕ ವಿಶ್ವವಿದ್ಯಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.