ADVERTISEMENT

ಕರ್ನಾಟಕ ವಿವಿ: ಕುಲಪತಿ ಹುದ್ದೆಗೆ 170 ಅರ್ಜಿ

ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು ಆಕಾಂಕ್ಷಿಗಳು

ಬಿ.ಜೆ.ಧನ್ಯಪ್ರಸಾದ್
Published 10 ಏಪ್ರಿಲ್ 2025, 7:34 IST
Last Updated 10 ಏಪ್ರಿಲ್ 2025, 7:34 IST
ಡಾ.ಎಂ.ಸಿ.ಸುಧಾಕರ
ಡಾ.ಎಂ.ಸಿ.ಸುಧಾಕರ   

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ 170 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಅವರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ 20 ಪ್ರಾಧ್ಯಾಪಕರು ಇದ್ದಾರೆ.

ಕರ್ನಾಟಕ ವಿ.ವಿ ಪರೀಕ್ಷಾಂಗ ಕುಲಸಚಿವ ಪ್ರೊ.ಎನ್‌.ವೈ.ಮಟ್ಟಿಹಾಳ್‌, ಪ್ರೊ.ಟಿ.ಟಿ.ಬಸವನಗೌಡ, ಪ್ರೊ.ಕಮನವಲ್ಲಿ, ಪ್ರೊ.ಎಂ.ಎಚ್‌.ಅಗಡಿ, ಪ್ರೊ.ಆರ್‌.ಎಲ್‌.ಹೈದರಾಬಾದ್‌, ಪ್ರೊ,.ಎ.ಬಿ.ವೇದಮೂರ್ತಿ,ಪ್ರೊ.ಶೌಕತ್‌ ಅಜೀಂ, ಪ್ರೊ.ಮಲ್ಲಿಕಾರ್ಜುನ ಪಾಟೀಲ, ಪ್ರೊ.ಕೃಷ್ಣ ನಾಯಕ , ಪ್ರೊ.ಎಸ್‌.ಕೆ.ಪವಾರ್‌, ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪ್ರೊ. ಓಂಕಾರ ಕಾಕಡೆ ಸೇರಿ ಹಲವರು ಅರ್ಜಿ ಸಲ್ಲಿಸಿದ್ದಾರೆ. ಕುವೆಂಪು ವಿಶ್ವವಿದ್ಯಾಲಯ, ಮೈಸೂರು ವಿಶ್ವವಿದ್ಯಾಲಯ, ಮಂಗಳೂರು ವಿಶ್ವವಿದ್ಯಾಲಯ ಸೇರಿ ಇತರ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು ಅರ್ಜಿ ಸಲ್ಲಿಸಿದ್ದಾರೆ.

ಕುಲಪತಿ ನೇಮಕಾತಿಗೆ ಶೋಧನಾ ಸಮಿತಿ ರಚಿಸಲಾಗಿದೆ. ನಿವೃತ್ತ ಕುಲಪತಿಗಳಾದ ಪ್ರೊ.ಎ.ಎಚ್‌.ರಾಜಾಸಾಬ್‌, ಪ್ರೊ.ಕೈಲಾಶ್‌ಚಂದ್ರ ಶರ್ಮಾ, ಪ್ರೊ.ವಿ.ಜಿ.ತಳವಾರ, ಬುಂದೇಲ್‌ಖಂಡ ವಿ.ವಿ ಮಾಜಿ ಉಪಾಧ್ಯಕ್ಷ ಟಿ.ಆರ್‌.ಥಾಪಕ್‌ ಮತ್ತು ಉನ್ನತ ಶಿಕ್ಷಣ ಇಲಾಖೆಯ ಉಪಕಾರ್ಯದರ್ಶಿ ಶಶಿಧರ ಜಿ. ಸಮಿತಿಯಲ್ಲಿ ಇದ್ದಾರೆ.

ADVERTISEMENT

ಕರ್ನಾಟಕ ವಿಶ್ವವಿದ್ಯಾಲಯ ಈಚೆಗಷ್ಟೇ ಅಮೃತ ವರ್ಷ ಪೂರೈಸಿದ್ದು, ಕುಲಪತಿ ಹುದ್ದೆ ಕಳೆದ ಸೆಪ್ಟೆಂಬರ್‌ನಲ್ಲಿ ತೆರವಾಗಿದೆ. 6 ತಿಂಗಳುಗಳಿಂದ ಪ್ರಭಾರ ಕುಲಪತಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನೇಮಕಾತಿ ಪ್ರಕ್ರಿಯೆ ಸೇರಿದಂತೆ ವಿಶ್ವವಿದ್ಯಾಲಯ ಕಾರ್ಯಚಟುವಟಿಕೆಗಳಿಗೆ ಹಿನ್ನಡೆ ಉಂಟಾಗಿದೆ.

‘ಕರ್ನಾಟಕ ವಿಶ್ವವಿದ್ಯಾಲಯದ ಆರಂಭವಾದಾಗಿನಿಂದ ಈವರೆಗೆ (1949ರಿಂದ 2024) 17 ಮಂದಿ ಕುಲಪತಿ ಹುದ್ದೆ ನಿರ್ವಹಿಸಿದ್ಧಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಒಬ್ಬರೂ ಈ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಯನ್ನೂ ಈವರೆಗೆ ಅಲಂಕರಿಸಿಲ್ಲ. ಈ ಬಾರಿ ಎಸ್‌ಸಿ ಅಥವಾ ಎಸ್‌ಟಿ ಅಭ್ಯರ್ಥಿಯನ್ನು ಈ ಹುದ್ದೆಗೆ ಪರಿಗಣಿಸುವುದು ಸೂಕ್ತ’ ಎಂದು ಕುಲಪತಿ ಹುದ್ದೆ ಆಕಾಂಕ್ಷಿಯೊಬ್ಬರು ತಿಳಿಸಿದರು.

ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ 170 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಏ‌ಪ್ರಿಲ್ 22ರಂದು ಶೋಧನಾ ಸಮಿತಿ ಸಭೆ ನಡೆಯಲಿದೆ. ಇನ್ನೊಂದು ತಿಂಗಳಲ್ಲಿ ನೇಮಕಾತಿ ಪ್ರಕ್ರಿಯೆ ಪೂರ್ಣವಾಗಲಿದೆ.
-ಡಾ.ಎಂ.ಸಿ.ಸುಧಾಕರ್ ಉನ್ನತ ಶಿಕ್ಷಣ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.