ಹುಬ್ಬಳ್ಳಿ: ‘ನಗರದ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ 6ನೇ ಘಟಿಕೋತ್ಸವವನ್ನು ನ.16ರಂದು ಬೆಳಿಗ್ಗೆ 10.30ಕ್ಕೆ ಇಲ್ಲಿನ ಡಾ. ಪ್ರಭಾಕರ ಕೋರೆ ಸ್ಪೋರ್ಟ್ಸ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಕುಲಪತಿ ಪ್ರಕಾಶ ತೆವರಿ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘1947ರಲ್ಲಿ ಕೆಎಲ್ಇ ಸಂಸ್ಥೆ ಆರಂಭವಾಗಿದ್ದು, 2014ರಲ್ಲಿ ವಿಶ್ವವಿದ್ಯಾಲಯವಾಗಿದೆ. ಈಗ 6ನೇ ಘಟಿಕೋತ್ಸವ ಆಚರಿಸುತ್ತಿದೆ. ಸಮಾರಂಭದಲ್ಲಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಪ್ರೊ. ಅಭಯ ಕರಂಡಿಕರ್ ಅವರು ಅತಿಥಿಯಾಗಿ ಭಾಗವಹಿಸುವರು. ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವ ಮುರುಗೇಶ ನಿರಾಣಿ ಹಾಗೂ ಏಕಸ್ ಚೇರ್ಮನ್ ಅರವಿಂದ ಮೆಳ್ಳಿಗೇರಿ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗುವುದು’ ಎಂದು ತಿಳಿಸಿದರು.
‘ಪದವಿ, ಸ್ನಾತಕೋತ್ತರ ಹಾಗೂ ಡಾಕ್ಟರೇಟ್ ಪಡೆದ ಒಟ್ಟು 1,677 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತದೆ. ಪದವಿ ವಿಭಾಗದಲ್ಲಿ 850 ವಿದ್ಯಾರ್ಥಿಗಳು, 517 ವಿದ್ಯಾರ್ಥಿನಿಯರು ಸೇರಿ 1,367 ಮಂದಿಗೆ, ಸ್ನಾತಕೋತ್ತರ ವಿಭಾಗದಲ್ಲಿ 138 ವಿದ್ಯಾರ್ಥಿಗಳು, 155 ವಿದ್ಯಾರ್ಥಿನಿಯರು ಸೇರಿ 293 ಮಂದಿ ಹಾಗೂ 14 ವಿದ್ಯಾರ್ಥಿಗಳು ಹಾಗೂ ಮೂವರು ವಿದ್ಯಾರ್ಥಿಯರು ಸೇರಿ ಒಟ್ಟು 17 ಮಂದಿಗೆ ಡಾಕ್ಟರೇಟ್ ನೀಡಲಾಗುವುದು’ ಎಂದು ಹೇಳಿದರು.
‘ಪದವಿಯ 12 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ 13 ವಿದ್ಯಾರ್ಥಿಗಳಿಗೆ ಬೆಳ್ಳಿ ಪದಕ ನೀಡಲಾಗುವುದು. ಸ್ನಾತಕೋತ್ತರ ಪದವಿಯ ಆರು ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ಆರು ವಿದ್ಯಾರ್ಥಿಗಳಿಗೆ ಬೆಳ್ಳಿ ಪದಕ ನೀಡಲಾಗುತ್ತಿದೆ. ಸಿವಿಲ್ ವಿಭಾಗದಲ್ಲಿ ಟಾಪರ್ ಆದವರಿಗೆ ‘ಡಾ. ಎಸ್. ಎಸ್. ಭಾವಿಕಟ್ಟಿ’ ಚಿನ್ನದ ಪದಕ ನೀಡಲಾಗುವುದು’ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಸವರಾಜ ಅನಾಮಿ, ವಿ.ಎಲ್. ದೇಸಾಯಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.