ಹುಬ್ಬಳ್ಳಿ: ನಗರದ ಕೆಎಂಸಿ–ಆರ್‌ಐ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ವಾರ್ಡ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಹನುಮಂತ ಚಲವಾದಿ ಅವರು, ‘ಷಡ್ಯಂತ್ರ ನಡೆಸಿ ತಮ್ಮನ್ನು ಕೆಲಸದಿಂದ ತೆಗಿದಿದ್ದಾರೆ’ ಎಂದು ಆರೋಪಿಸಿ ಬುಧವಾರ ಆಸ್ಪತ್ರೆ ಆವರಣದಲ್ಲಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು.
ಸ್ಥಳಕ್ಕೆ ಬಂದ ಗೃಹರಕ್ಷಕದಳ ಮತ್ತು ಪೊಲೀಸ್ ಸಿಬ್ಬಂದಿ ಅವರನ್ನು ತಡೆದು, ವಿದ್ಯಾನಗರ ಠಾಣೆಗೆ ಕರೆದೊಯ್ದರು.
‘ಕೆಲ ತಿಂಗಳ ಹಿಂದೆ ಚಾಕು ಇರಿತಕ್ಕೊಳಗಾದ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ಬಂದಿದ್ದರು. ಅವರಿಗೆ ನಾನೇ ಹೊಲಿಗೆ ಹಾಕಿದ್ದೇನೆ ಎಂದು ಆರೋಪಿಸಿ ಕೆಲಸದಿಂದ ತೆಗೆದಿದ್ದಾರೆ. ವಾರ್ಡ್ ಬಾಯ್ ಆದ ನಾನು, ವೈದ್ಯರ ಕೆಲಸವನ್ನು ಹೇಗೆ ಮಾಡಲಿ? ನಾನು ಹೊಲಿಗೆ ಹಾಕಿಲ್ಲ ಎಂದು ರೋಗಿಯ ಕಡೆಯವರೇ ಬಂದು ಹೇಳಿದ್ದಾರೆ. ಈ ಕುರಿತು ನಿರ್ದೇಶಕರ ಗಮನಕ್ಕೂ ತಂದಿದ್ದೇನೆ. ಆದರೂ ಕೆಲಸಕ್ಕೆ ಸೇರಿಸಿಕೊಂಡಿಲ್ಲ’ ಎಂದು ಹನುಮಂತ ಆರೋಪಿಸಿದರು.
‘ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡ ಕಂಪನಿ ನೋಟಿಸ್ ನೀಡಿ, ಏಕಾಏಕಿ ಕೆಲಸದಿಂದ ತೆಗೆದು ಹಾಕಿದೆ. ಎರಡು ಮಕ್ಕಳು, ಹೆಂಡತಿಯೊಂದಿಗೆ ಜೀವನ ನಡೆಸುತ್ತಿರುವ ನನಗೆ, ಬೇರೆ ಆದಾಯವಿಲ್ಲ’ ಎಂದರು.
‘ಸಿಬ್ಬಂದಿ ನೇಮಕಕ್ಕೆ ಗುತ್ತಿಗೆ ನೀಡಿರುವುದರಿಂದ, ಎಲ್ಲವೂ ಅವರೇ ನೋಡಿಕೊಳ್ಳುತ್ತಾರೆ. ಒಮ್ಮೆ ನೇಮಕವಾದ ಸಿಬ್ಬಂದಿಯನ್ನು ನಿಯಮಾವಳಿ ಪ್ರಕಾರವೇ ತೆಗೆಯಬೇಕು. ಆ ಕುರಿತು ಗುತ್ತಿಗೆದಾರರಿಂದ ಮಾಹಿತಿ ಪಡೆಯಲಾಗುವುದು’ ಎಂದು ಕೆಎಂಸಿ–ಆರ್‌ಐ ನಿರ್ದೇಶಕ ಈಶ್ವರ ಹೊಸಮನಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.