ಕೆ.ಪಿ.ನಂಜುಂಡಿ
ಹುಬ್ಬಳ್ಳಿ: ‘ವಿಶ್ವಕರ್ಮ ಸಮಾಜದಲ್ಲಿ 39 ಉಪಜಾತಿಗಳಿವೆ. ಜಾತಿ ಗಣತಿ ಸಂದರ್ಭದಲ್ಲಿ ಜಾತಿ ಕಾಲಂನಲ್ಲಿ ಉಪಜಾತಿಗಳ ಹೆಸರು ನಮೂದಿಸದೆ, ವಿಶ್ವಕರ್ಮ ಎಂದು ಬರೆಸಬೇಕು’ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಕೆ.ಪಿ.ನಂಜುಂಡಿ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಂಚ ಕುಲಕಸುಬುಗಳನ್ನು ಮಾಡುವರೆಲ್ಲರೂ ವಿಶ್ವಕರ್ಮರು. ವಿಶ್ವ ಬ್ರಾಹ್ಮಣ ಎಂಬುದು ವಿಶ್ವಕರ್ಮ ಜಾತಿಯ ಉಪಜಾತಿಯಾಗಿದೆ. ಇದಕ್ಕೂ, ಬ್ರಾಹ್ಮಣ ಜಾತಿಗೂ ಸಂಬಂಧವಿಲ್ಲ’ ಎಂದರು.
‘ರಾಜ್ಯದಲ್ಲಿ ಮುಂದಿನ ವರ್ಷದಿಂದ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದಿಂದ ಐದು ಸಾವಿರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.
‘ರಾಜ್ಯ ಸರ್ಕಾರ ಮರು ಜಾತಿ ಸಮೀಕ್ಷೆ ನಡೆಸಲು ಮುಂದಾಗಿದೆ. ಎಲ್ಲ ಸಮಾಜಗಳು ಜಾಗೃತರಾಗಬೇಕು. ಇಲ್ಲದಿದ್ದರೆ, ಧ್ವನಿ ಇಲ್ಲದ ಸಮಾಜಗಳಿಗೆ ಅನ್ಯಾಯವಾಗುತ್ತದೆ. ರಾಜಕೀಯ ಜ್ಞಾನ ಇರುವ ಸಮಾಜದವರು ಪ್ರಬಲರಾಗುತ್ತಾರೆ’ ಎಂದರು.
‘ನಾನು ವಿಧಾನ ಪರಿಷತ್ ಸ್ಥಾನದ ಆಕಾಂಕ್ಷಿಯಲ್ಲ. ಯಾವುದೇ ಸ್ಥಾನಮಾನಕ್ಕಿಂತ ನಮ್ಮ ಸಮಾಜಕ್ಕೆ ನ್ಯಾಯ ಸಿಗಬೇಕು ಎಂಬುದು ನನ್ನ ಉದ್ದೇಶ. ಕಾಂಗ್ರೆಸ್ ಸೇರುವ ಸಂದರ್ಭದಲ್ಲಿ ಯಾವುದೇ ಸ್ಥಾನಮಾನಕ್ಕಾಗಿ ಷರತ್ತು ಹಾಕಿಲ್ಲ’ ಎಂದು ಹೇಳಿದರು.
‘ವಿಶ್ವಕರ್ಮ ಸಮಾಜಕ್ಕೆ ಸದ್ಯ 2ಎ ಮೀಸಲಾತಿ ಕಲ್ಪಿಸಲಾಗಿದೆ. ಪ್ರಬಲ ಜಾತಿಗಳ ನಡುವೆ ನಮ್ಮ ಸಮಾಜಕ್ಕೆ ಮೀಸಲಾತಿಯ ಲಾಭ ಸಿಗುತ್ತಿಲ್ಲ. ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.