ADVERTISEMENT

ಪ್ರತಿಭೆ ಆಧರಿಸಿ ಆಟಗಾರರಿಗೆ ಅವಕಾಶ: ವೆಂಕಟೇಶ್ ಪ್ರಸಾದ್‌

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ವೆಂಕಟೇಶ್ ಪ್ರಸಾದ್‌

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 5:53 IST
Last Updated 11 ಡಿಸೆಂಬರ್ 2025, 5:53 IST
ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ (ಕೆಎಸ್‌ಸಿಎ) ಅಧ್ಯಕ್ಷ ವೆಂಕಟೇಶ್‌ ಪ್ರಸಾದ್ ಅವರು ಹುಬ್ಬಳ್ಳಿಯ ರಾಜನಗರದ ಕ್ರೀಡಾಂಗಣಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು
ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ (ಕೆಎಸ್‌ಸಿಎ) ಅಧ್ಯಕ್ಷ ವೆಂಕಟೇಶ್‌ ಪ್ರಸಾದ್ ಅವರು ಹುಬ್ಬಳ್ಳಿಯ ರಾಜನಗರದ ಕ್ರೀಡಾಂಗಣಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ   

ಹುಬ್ಬಳ್ಳಿ: ‘ಬೆಳಗಾವಿ, ಹುಬ್ಬಳ್ಳಿಯಲ್ಲಿನ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಕ್ರೀಡಾಂಗಣದಲ್ಲಿ ಕಾಡುತ್ತಿರುವ ಮೂಲ ಸೌಲಭ್ಯ ಸಮಸ್ಯೆ ಪರಿಹರಿಸಿ, ಕಾಮಗಾರಿ ಪೂರ್ಣಗೊಳಿಸಲಾಗುವುದು’ ಎಂದು ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಹೇಳಿದರು. 

ಇಲ್ಲಿನ ರಾಜನಗರದಲ್ಲಿ ಇರುವ ಕ್ರೀಡಾಂಗಣಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.  ಧಾರವಾಡ ವಲಯದ ನಿಮಂತ್ರಕ ವೀರಣ್ಣ ಸವಡಿ ಅವರಿಂದ ಕಾಮಗಾರಿ ಕುರಿತು ಮಾಹಿತಿ ಪಡೆದರು. 

‘ಈ ಭಾಗದಿಂದ ಸುನಿಲ್‌ ಜೋಶಿ, ಅವಿನಾಶ ವೈದ್ಯ ಅವರಂತಹ ಪ್ರತಿಭಾನ್ವಿತ ಆಟಗಾರರು ಬಂದಿದ್ದಾರೆ. ಬೆಂಗಳೂರು ಅಲ್ಲದೆ ರಾಜ್ಯದ ಎಲ್ಲೆಡೆ ಪ್ರತಿಭಾವಂತ ಆಟಗಾರರಿದ್ದಾರೆ. ಅವರ ಪ್ರತಿಭೆ ಅನುಸಾರ ಅವಕಾಶ ನೀಡಲಾಗುವುದು’ ಎಂದು ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ಕೆಎಸ್‌ಸಿಎ ಕಾರ್ಯದರ್ಶಿ ಸಂತೋಷ್ ಮೆನನ್‌ ಮಾತನಾಡಿ, ‘ಐ.ಎಂ ಕ್ಲಬ್‌ಗಳು ಅಲ್ಲದೆ ಇತರ ಕ್ಲಬ್‌ಗಳ ಆಟಗಾರರಿಗೂ ಟಿಎ (ಟ್ರಾವೆಲ್‌ ಭತ್ಯೆ) ನೀಡಲು ಪರಿಶೀಲಿಸುತ್ತೇವೆ. ಕ್ಲಬ್ ಹೌಸ್ ಕಾಮಗಾರಿ ಮುಗಿದ ಬಳಿಕ ಇಲ್ಲಿ ಸದಸ್ಯತ್ವ ನೀಡುವ ಚಿಂತನೆ ಇದೆ ಎಂದರು. 

ಸಂಸ್ಥೆಯ ಉಪಾಧ್ಯಕ್ಷ ಸುಜಿತ್ ಸೋಮಸುಂದರ್, ‘ವಲಯಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸುವ ಗುರಿ ಇದೆ. ಉತ್ತಮ ಕೋಚ್‌ಗಳು, ಒಳಾಂಗಣ ಕ್ರೀಡಾಂಗಣ ಸೌಲಭ್ಯವನ್ನು ಬೆಂಗಳೂರು ಮಾದರಿಯಲ್ಲಿ ಕಲ್ಪಿಸಲಾಗುವುದು. ಹೆಚ್ಚು ಪಂದ್ಯಗಳನ್ನು ಆಯೋಜಿಸಿ, ತಳಮಟ್ಟದಿಂದ ಪ್ರತಿಭೆಗಳನ್ನು ಬೆಳೆಸುವ ಉದ್ದೇಶ ಇದೆ’ ಎಂದರು. 

ಕೆಎಸ್‌ಸಿಎ ಧಾರವಾಡ ವಲಯದ ನಿಮಂತ್ರಕ ವೀರಣ್ಣ ಸವಡಿ,  ಕೆಎಸ್‌ಸಿಎ ವಕ್ತಾರ ವಿನಯ ಮೃತ್ಯುಂಜಯ, ಅಲ್ತಾಫ್ ಕಿತ್ತೂರ, ಅಹ್ಮದ್ ರಝಾ ಕಿತ್ತೂರ, ವೀರೇಶ ಉಂಡಿ, ರಜತ್ ಉಳ್ಳಾಗಡ್ಡಿಮಠ ಇದ್ದರು.

‘ಕ್ರೀಡಾ ಕೇಂದ್ರ; ತಿಂಗಳಲ್ಲಿ ವರದಿಗೆ ಸೂಚನೆ’

‘ಹುಬ್ಬಳ್ಳಿ ಬೆಳಗಾವಿಯಲ್ಲಿ 2022ರ ನವೆಂಬರ್‌ನಿಂದ ಕ್ರೀಡಾ ಕೇಂದ್ರ (ಕ್ಲಬ್‌ ಹೌಸ್‌) ಕಾಮಗಾರಿ ಸ್ಥಗಿತ ಆಗಿದೆ. ಇದಕ್ಕೆ ಅನುದಾನ ಕೊರತೆಯಿದೆ ಎಂಬುದು ಸುಳ್ಳು’ ಎಂದು ಕೆಎಸ್‌ಸಿಎ ಕಾರ್ಯದರ್ಶಿ ಸಂತೋಷ್ ಮೆನನ್‌ ಹೇಳಿದರು. ‘ಸಂಸ್ಥೆಯ ಎಂಜಿನಿಯರ್‌ಗಳು ಎರಡೂ ಕಡೆ ಪರಿಶೀಲಿಸಿದ್ದಾರೆ. ಯಾವ ಕಾಮಗಾರಿ ಆಗಬೇಕು ಎಷ್ಟು ಅನುದಾನ ಎಷ್ಟು ಸಮಯ ಬೇಕು ಎಂಬ ಬಗ್ಗೆ ಎಂಜಿನಿಯರ್‌ಗಳು 15ರಿಂದ ಒಂದು ತಿಂಗಳ ಒಳಗೆ ವರದಿ ನೀಡುವರು. ಆ ನಂತರ ತಾಂತ್ರಿಕ ಸಮಿತಿಯಲ್ಲಿ ಚರ್ಚಿಸಿ ಕಾಮಗಾರಿ ಆರಂಭಿಸಲಾಗುವುದು’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.