
ಹುಬ್ಬಳ್ಳಿ: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಏಳನೇ ಘಟಿಕೋತ್ಸವವನ್ನು ನ.5ರಂದು ಬೆ.11.30ಕ್ಕೆ ಧಾರವಾಡ ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿ.ವಿಯ ಕುಲಪತಿ ಪ್ರೊ.ಸಿ.ಬಸವರಾಜು ತಿಳಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲ, ವಿ.ವಿಯ ಕುಲಾಧಿಪತಿ ಥಾವರಚಂದ್ ಗೆಹಲೋತ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾನೂನು ಸಚಿವ ಎಚ್.ಕೆ.ಪಾಟೀಲ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ ವಿ.ಪಾಟೀಲ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದರು.
ಆಂದ್ರಪ್ರದೇಶದ ರಾಜ್ಯಪಾಲ ಎಸ್.ಅಬ್ದುಲ್ ನಜೀರ್, ಹಿರಿಯ ವಕೀಲ ವಿ.ಸುಧೀಶ್ ಪೈ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು. ಕಾನೂನು ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದನ್ನು ಪರಿಗಣಿಸಿ ಗೌರವ ಡಾಕ್ಟರೇಟ್‌ಗೆ ರಾಜ್ಯಪಾಲರು ನೇಮಕ ಮಾಡಿರುವ ಸಮಿತಿ ಅವರನ್ನು ಆಯ್ಕೆ ಮಾಡಿದೆ ಎಂದು ಹೇಳಿದರು.
ಘಟಿಕೋತ್ಸವದಲ್ಲಿ 4053 ವಿದ್ಯಾರ್ಥಿಗಳು, 3663 ವಿದ್ಯಾರ್ಥಿನಿಯರು ಸೇರಿ 7716 ಪದವೀಧರರಿಗೆ ಪದವಿ ಪ್ರಮಾಣ ಪತ್ರ ನೀಡಲಾಗುವುದು. ಪ್ರತಿ ಕೋರ್ಸ್‌ಗೆ ಒಂದರಂತೆ ವಿ.ವಿಯಿಂದ 20 ಮತ್ತು ದಾನಿಗಳಿಂದ 8 ಚಿನ್ನದ ಪದಕ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
29 ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಏಳು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುವುದು. ಇಬ್ಬರಿಗೆ ಪಿಎಚ್.ಡಿ ಪ್ರದಾನ ಮಾಡಲಾಗುವುದು. ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಸೇರಿ 150 ವಿದ್ಯಾರ್ಥಿಗಳಿಗೆ ರ‍್ಯಾಂಕ್ ಪ್ರಮಾಣಪತ್ರ ನೀಡಲಾಗುವುದು ಎಂದರು.
ಕಾನೂನು ವಿ.ವಿಯು 15 ವರ್ಷಗಳಿಂದ ಉತ್ಕೃಷ್ಟ ಕಾನೂನು ಶಿಕ್ಷಣ ನೀಡುತ್ತಿದೆ. ಕೆಲವು ಕಾರಣಗಳಿಂದಾಗಿ 2022–23, 2023–24ನೇ ಸಾಲಿನಲ್ಲಿ ಘಟಿಕೋತ್ಸವ ನಡೆಸಲು ಸಾಧ್ಯವಾಗಿರಲಿಲ್ಲ. ಈಗ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ವಿ.ವಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿದೆ. ವಿ.ವಿ ಕ್ಯಾಂಪಸ್‌ನಲ್ಲಿ 1500 ವಿದ್ಯಾರ್ಥಿಗಳಿದ್ದಾರೆ. ಹೀಗಾಗಿ ಹೆಚ್ಚಿನ ಸಿಬ್ಬಂದಿಯ ಅಗತ್ಯವಿದ್ದು, ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದರು.
ಮಹಾನಗರ ಪಾಲಿಕೆಯಿಂದ ವಿ.ವಿಗೆ 39 ಗುಂಟೆ ಜಾಗ ನೀಡಲಾಗಿದೆ. ಆದರೆ, ಹಳೇ ಕೋರ್ಟ್ ಕಟ್ಟಡವನ್ನು ಪಾಲಿಕೆಗೆ ಹಸ್ತಾಂತರಿಸುವುದು ವಿ.ವಿಯ ವ್ಯಾಪ್ತಿಗೆ ಬರುವುದಿಲ್ಲ. ಆ ಬಗ್ಗೆ ಸರ್ಕಾರದ ಮಟ್ಟದಲ್ಲಿ ತೀರ್ಮಾನ ಕೈಗೊಳ್ಳಬೇಕಿದೆ. ಈ ಬಗ್ಗೆ ಸಂಬಂಧಪಟ್ಟ ಸಚಿವರ ಗಮನಕ್ಕೆ ತರಲಾಗುವುದು ಎಂದರು.
ವಿ.ವಿ ಆವರಣದಲ್ಲಿ ದೇವಸ್ಥಾನಕ್ಕೆ ತೊಂದರೆಯಾಗದ ರೀತಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಈ ವಿಷಯದಲ್ಲಿ ವಿ.ವಿಯಿಂದ ಕಾನೂನು ಉಲ್ಲಂಘನೆಯಾಗಿದ್ದರೆ ಆ ಬಗ್ಗೆ ಪರಿಶೀಲಿಸಿ ಸರಿಪಡಿಸಲಾಗುವುದು ಎಂದು ಹೇಳಿದರು.
ಮೌಲ್ಯಮಾಪನದಲ್ಲಿ ಸಮಸ್ಯೆಯಾದ ಬಗ್ಗೆ ಮೌಲ್ಯಮಾಪಕರೊಬ್ಬರ ವಿರುದ್ಧ ತನಿಖೆ ನಡೆಸಿ, ದಂಡ ವಿಧಿಸಲಾಗಿದೆ. ಅಂತಹ ಘಟನೆಗಳು ಪುನರಾವರ್ತನೆಯಾದರೆ ಅವರನ್ನು ಮೌಲ್ಯಮಾಪಕರ ಪ್ಯಾನಲ್‌ನಿಂದ ತೆಗೆದು ಹಾಕಲಾಗುತ್ತದೆ. ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಯಾವುದೇ ತೊಂದರೆಯನ್ನು ನಮ್ಮ ಗಮನಕ್ಕೆ ತಂದರೆ ಸರಿಪಡಿಸಲಾಗುವುದು ಎಂದರು.
ಆಡಳಿತಾಂಗ ಕುಲಸಚಿವೆ ಗೀತಾ ಕೌಲಗಿ, ಮೌಲ್ಯಮಾಪನ ಕುಲಸಚಿವೆ ರತ್ನಾ ಆರ್.ಭರಮಗೌಡರ್ ಇದ್ದರು.
ಸಂಶೋಧನೆಗೆ ಒತ್ತು; ಕುಲಪತಿ
ಕಳೆದ ಘಟಿಕೋತ್ಸವದಲ್ಲಿ 12 ವಿದ್ಯಾರ್ಥಿಗಳಿಗೆ ಪಿಎಚ್.ಡಿ ಪ್ರದಾನ ಮಾಡಲಾಗಿತ್ತು. ಈಗ ಇಬ್ಬರಿಗೆ ಮಾತ್ರ ಪಿಎಚ್.ಡಿ ನೀಡಲಾಗುತ್ತಿದೆ. ವಿ.ವಿಯಲ್ಲಿ ಸಂಶೋಧನೆ ಕುಂಠಿತವಾಗುತ್ತಿದೆ. 2025–26ನೇ ಸಾಲಿನಲ್ಲಿ ಸಂಶೋಧನೆಯನ್ನು ಗಟ್ಟಿಗೊಳಿಸಲು ಆದ್ಯತೆ ನೀಡಲಾಗುವುದು ಎಂದು ಕುಲಪತಿ ಪ್ರೊ.ಸಿ.ಬಸವರಾಜು ತಿಳಿಸಿದರು. ಈಗಾಗಲೇ 18 ಸಂಶೋಧನಾ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಏಳು ವಿದ್ಯಾರ್ಥಿಗಳ ಸಂಶೋಧನೆ ಇನ್ನೆರಡು ತಿಂಗಳಲ್ಲಿ ಮುಗಿಯಲಿದೆ. ಸಂಶೋಧನೆಗೆ ಪ್ರೋತ್ಸಾಹಿಸಲು ವಿ.ವಿ.ಯಿಂದ ಸಂಶೋಧನಾರ್ಥಿಗಳಿಗೆ ನಗದು ಬಹುಮಾನ ನೀಡಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವವರಿಗೆ ವಿಶೇಷ ಸೌಲಭ್ಯ ನೀಡಲಾಗುತ್ತಿದೆ ಎಂದು ಹೇಳಿದರು.
ಆಡತಾಂಗ ಕಟ್ಟಡ ಗ್ರಂಥಾಲಯ ಅತಿಥಿಗೃಹ ಕ್ಯಾಂಟೀನ್ ನಿರ್ಮಾಣಕ್ಕೆ ಅನುದಾನ ಬೇಕಿದೆ. ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು–ಪ್ರೊ.ಸಿ.ಬಸವರಾಜು, ಕುಲಪತಿ ಕಾನೂನು ವಿ.ವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.