
ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ 75ನೇ ಘಟಿಕೋತ್ಸವ ನಡೆದಿಲ್ಲ. 2023–24 ಮತ್ತು 2024–25ನೇ ಸಾಲಿನಲ್ಲಿ ವಿವಿಧ ಕೋರ್ಸ್ ಪೂರೈಸಿದವರು ಅರ್ಜಿ ಸಲ್ಲಿಸಿ ಘಟಿಕೋತ್ಸವ ಪ್ರಮಾಣ ಪತ್ರಕ್ಕಾಗಿ ಕಾಯುವಂತಾಗಿದೆ.
2024 ಸೆಪ್ಟೆಂಬರ್‌ನಲ್ಲಿ 74ನೇ ಘಟಿಕೋತ್ಸವ ಜರುಗಿತ್ತು. 2025ರಲ್ಲಿ ಘಟಿಕೋತ್ಸವ ಈವರೆಗೆ ನಡೆದಿಲ್ಲ. ಉದ್ಯೋಗ, ವಿದೇಶದಲ್ಲಿ ವಿದ್ಯಾಭ್ಯಾಸ, ಅನ್ಯ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವ್ಯಾಸಂಗಕ್ಕೆ ಅರ್ಜಿ ಸಲ್ಲಿಕೆಗೆ ಘಟಿಕೋತ್ಸವ ಪ್ರಮಾಣ ಅಗತ್ಯವಾಗಿದೆ.
ಕರ್ನಾಟಕ ವಿಶ್ವವಿದ್ಯಾಲಯವು ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿ ಹೊಂದಿದೆ. ಗದಗ ಮತ್ತು ಕಾರವಾರವದಲ್ಲಿ ಸ್ನಾತಕೋತ್ತರ ಕೇಂದ್ರಗಳನ್ನು ಹೊಂದಿದೆ. 266 ಸಂಯೋಜಿತ ಕಾಲೇಜುಗಳು ಇವೆ.
ಪದವಿ, ಸ್ನಾತಕೋತ್ತರ ಪದವಿ, ಪಿಎಚ್.ಡಿ ಸಹಿತ ವಿವಿಧ ಕೋರ್ಸ್ ಪೂರೈಸಿದವರು ಘಟಿಕೋತ್ಸವ ಪ್ರಮಾಣ ಪತ್ರ ನಿರೀಕ್ಷೆಯಲ್ಲಿದ್ಧಾರೆ. ಹಲವರು ತಾತ್ಕಾಲಿಕ ಪ್ರಮಾಣ ಪತ್ರ (ಪ್ರಾವಿಷನಲ್ ಸರ್ಟಿಫಿಕೇಟ್) ಪಡೆದು ಅರ್ಜಿ ಸಲ್ಲಿಸಿದ್ದಾರೆ.
‘ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದೇನೆ. ಘಟಿಕೋತ್ಸವ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿ, ಶುಲ್ಕ ಪಾವತಿಸಿದ್ದೇನೆ. ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಘಟಿಕೋತ್ಸವ ಪ್ರಮಾಣ ಪತ್ರ ಬೇಕು. ವಿಶ್ವವಿದ್ಯಾಲಯದವರು ಘಟಿಕೋತ್ಸವ ಆಯೋಜನೆಗೆ ವಿಳಂಬ ಮಾಡುತ್ತಿದ್ದಾರೆ’ ಎಂದು ರಸಾಯನವಿಜ್ಞಾನ ಸ್ನಾತಕೋತ್ತರ ಪದವೀಧರೆಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಹುಬ್ಬಳ್ಳಿಯ ಕಾನೂನು ವಿಶ್ವವಿದ್ಯಾಲಯ, ಧಾರವಾಡ ಕೃಷಿ ವಿಶ್ವವಿದ್ಯಾಲಯಗಳು ಘಟಿಕೋತ್ಸವ ನಡೆಸಿವೆ. ಕರ್ನಾಟಕ ವಿಶ್ವವಿದ್ಯಾಲಯ ತಡ ಮಾಡುತ್ತಿದೆ. ಈ ವಿಶ್ವವಿದ್ಯಾಲಯ ಹಣಕಾಸಿನ ತೀವ್ರ ಬಿಕ್ಕಟ್ಟು ಎದುರಿಸುತ್ತಿದೆ.
‘ಬೇರೆ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಕೋರ್ಸ್‌ಗೆ ಅರ್ಜಿ ಸಲ್ಲಿಸಿದ್ದೇನೆ. ಈಗ ತಾತ್ಕಾಲಿಕ ಸರ್ಟಿಫಿಕೇಟ್ ಸಲ್ಲಿಸಿದ್ದೇನೆ. ಆಯ್ಕೆಯಾದರೆ ಸೂಚಿತ ಸಮಯದೊಳಗೆ ಘಟಿಕೋತ್ಸವ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಆ ವಿಶ್ವವಿದ್ಯಾಲಯದವರು ತಿಳಿಸಿದ್ಧಾರೆ’ ಎಂದು ಕವಿವಿ ಸ್ನಾತಕೋತ್ತರ ಪದವೀಧರರೊಬ್ಬರು ತಿಳಿಸಿದರು.
‘74ನೇ ಘಟಿಕೋತ್ಸವ ಮುಗಿದ ಬಳಿಕ ಒಂಬತ್ತು ತಿಂಗಳು ಪ್ರಭಾರ ಕುಲಪತಿಗಳು ಆಡಳಿತ ನಿರ್ವಹಿಸಿದರು. ಘಟಿಕೋತ್ಸವ ಆಯೋಜನೆಗೆ ಅವರು ಆಸಕ್ತಿ ತೋರಲಿಲ್ಲ. ಐದು ತಿಂಗಳ ಹಿಂದೆ ಕುಲಪತಿ ನೇಮಕವಾಗಿದ್ದಾರೆ, ಘಟಿಕೋತ್ಸವ ಆಯೋಜನೆಗೆ ಸಂಬಂಧಿಸಿದಂತೆ ಅವರು ಸಭೆ ನಡೆಸಿದ್ದಾರೆ’ ಎಂದು ವಿಶ್ವವಿದ್ಯಾಲಯದ ಅಧಿಕಾರಿಯೊಬ್ಬರು ತಿಳಿಸಿದರು.
ಕರ್ನಾಟಕ ವಿಶ್ವವಿದ್ಯಾಲಯ
2026 ಜನವರಿ ಎರಡನೇ ವಾರದಲ್ಲಿ ಘಟಿಕೋತ್ಸವ ಆಯೋಜಿಸಲಾಗುವುದು. ಸಭೆ ನಡೆಸಲಾಗಿದೆ. ಸಿದ್ದತೆ ಮಾಡಿಕೊಳ್ಳಲಾಗಿದೆ. ರಾಜ್ಯಪಾಲರ ದಿನಾಂಕ ಕೋರಿ ರಾಜಭವನದ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆಪ್ರೊ.ಎ.ಎಂ.ಖಾನ್ ಕುಲಪತಿ ಕ.ವಿ.ವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.