
ಚಿರತೆ
(ಪ್ರಾತಿನಿಧಿಕ ಚಿತ್ರ)
ಹುಬ್ಬಳ್ಳಿ: ನಗರದ ಹೊರವಲಯದ ವಿಮಾನ ನಿಲ್ದಾಣ ರಸ್ತೆ ಮತ್ತು ಗಾಮನಗಟ್ಟಿ ಮಧ್ಯದ ರಸ್ತೆಯಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ.
ಈ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು ಚಿರತೆಯ ಚಲನವಲನ ಗಮನಿಸಿ ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸಿದ್ದಾರೆ. ಸಾರ್ವಜನಿಕರು ಸಂಚರಿಸುವಾಗ ಜಾಗೃತರಾಗಿರಬೇಕು ಎಂದು ಅರಣ್ಯ ಇಲಾಖೆ ಸೂಚನೆ ನೀಡಿದೆ. ವಿಮಾನ ನಿಲ್ದಾಣದ ಕಾಂಪೌಂಡ್ ಮೇಲೆ ಚಿರತೆ ಕುಳಿತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗಿದೆ.
ಈ ಕುರಿತು ಮಾಹಿತಿ ನೀಡಿದ ಆರ್‌ಎಫ್‌ಒ ಆರ್.ಎಸ್. ಉಪ್ಪಾರ, ‘ಮೂರ್ನಾಲ್ಕು ದಿನಗಳಿಂದ ಈ ಭಾಗದಲ್ಲಿ ಚಿರತೆ ಓಡಾಡುತ್ತಿರುವುದನ್ನು ಕೆಲವರು ನೋಡಿದ್ದಾರೆ. ಅದು ಒಮ್ಮೊಮ್ಮೆ ವಿಮಾನ ನಿಲ್ದಾಣದ ಆವರಣಕ್ಕೂ ಪ್ರವೇಶಿಸಿದೆ. ಇಲಾಖೆಯ ಸಿಬ್ಬಂದಿಯನ್ನು ಅಲ್ಲಿ ನಿಯೋಜಿಸಲಾಗಿದ್ದು, ಅವರು ನಿಗಾ ವಹಿಸಿದ್ದಾರೆ’ ಎಂದರು.
‘ಮುನ್ನೆಚ್ಚರಿಕೆ ಕ್ರಮವಾಗಿ ಈ ಭಾಗದಲ್ಲಿ ಒಡಾಡುವವರಿಗೆ ಚಿರತೆ ಸಂಚಾರದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ದೇವರಗುಡಿಹಾಳ ಬಳಿಯ ಅರಣ್ಯ ಪ್ರದೇಶದಿಂದ ಚಿರತೆ ಬಂದಿರಬಹುದು ಎಂದು ಊಹಿಸಲಾಗಿದೆ. ಒಂದೆರಡು ದಿನಗಳಲ್ಲಿ ನಗರ ಬಿಟ್ಟು ಹೋಗುವ ಸಾಧ್ಯತೆ ಇದೆ. ಹೋಗದಿದ್ದರೆ ಮುಂದಿನ ಕ್ರಮಗಳ ಬಗ್ಗೆ ನಿರ್ಧಾರಿಸಲಾಗುವುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.