ADVERTISEMENT

ರೋಗಿಗೆ ವೈದ್ಯರಲ್ಲಿ ನಂಬಿಕೆ ಬರಲಿ: ನಾಗಾಭರಣ

ಕಿಮ್ಸ್‌ನಲ್ಲಿ ಕನ್ನಡದ ಹಬ್ಬ; ವಿಜೇತರಿಗೆ ಬಹುಮಾನ ವಿತರಣೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2022, 5:17 IST
Last Updated 31 ಜುಲೈ 2022, 5:17 IST
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌. ನಾಗಾಭರಣ ಅವರನ್ನು ಶನಿವಾರ ಹುಬ್ಬಳ್ಳಿ ಕಿಮ್ಸ್‌ ಆವರಣದಲ್ಲಿ ಸಂಭ್ರಮದಿಂದ ಸ್ವಾಗತಿಸಲಾಯಿತು /ಪ್ರಜಾವಾಣಿ ಚಿತ್ರ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌. ನಾಗಾಭರಣ ಅವರನ್ನು ಶನಿವಾರ ಹುಬ್ಬಳ್ಳಿ ಕಿಮ್ಸ್‌ ಆವರಣದಲ್ಲಿ ಸಂಭ್ರಮದಿಂದ ಸ್ವಾಗತಿಸಲಾಯಿತು /ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ‘ಮನುಷ್ಯನ ದೇಹಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಜೀವದ ಬೆಲೆ ಗೊತ್ತಿರುವವರು ಬೆಲೆ ಕಟ್ಟಲಾರರು. ವೈದ್ಯರ ಮೇಲೆ ನಂಬಿಕೆ ಇಟ್ಟು ಬರುವ ರೋಗಿಗೆ ಗುಣಮುಖನಾಗಿಯೇ ತೆರಳುತ್ತೇನೆ ಎನ್ನುವ ನಂಬಿಕೆ ಬರಬೇಕು. ಅಂತಹ ಬದುಕು, ವೃತ್ತಿ ವೈದ್ಯರದ್ದಾಗಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌. ನಾಗಾಭರಣ ಹೇಳಿದರು.

ಇಲ್ಲಿನ ಕಿಮ್ಸ್ ಆಸ್ಪತ್ರೆಯ ಸಭಾಭವನದಲ್ಲಿ ಕಿಮ್ಸ್ ಕನ್ನಡ ಸಂಘ ಶನಿವಾರ ಹಮ್ಮಿಕೊಂಡಿದ್ದ ಆರವ (ಕಿಮ್ಸ್‌ನಲ್ಲಿ ಕನ್ನಡದ ಕಲರವ) ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಜಗತ್ತಿನಲ್ಲಿ ಪ್ರತಿಯೊಂದರಲ್ಲೂ ಅಪನಂಬಿಕೆ. ನಾಳೆಗಳ ಬಗ್ಗೆ ನಂಬಿಕೆಯೇ ಇಲ್ಲ. ವೈದ್ಯ ವೃತ್ತಿಯಲ್ಲಿರುವವರು ರೋಗಿಗಳಿಗೆ ತಮ್ಮ ವೃತ್ತಿ ಬಗ್ಗೆ ನಂಬಿಕೆ ಹುಟ್ಟಿಸಬೇಕು. ಅಂತಹ ವೈದ್ಯ ವೃತ್ತಿ ಇದೆಯಾ? ಎಂದು ಪ್ರಶ್ನಿಸಿದರು.

‌ಕನ್ನಡ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಿಮ್ಸ್‌ ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ ಅಧ್ಯಕ್ಷತೆ ವಹಿಸಿದ್ದರು.ಕನ್ನಡ ಸಂಘದ ಕಾರ್ಯಾಧ್ಯಕ್ಷ ಸುನೀಲಕುಮಾರ ಪ್ರಾಸ್ತಾವಿಕ ಮಾತನಾಡಿದರು. ವೈದ್ಯಕೀಯ ಅಧೀಕ್ಷಕ ಅರುಣಕುಮಾರ ಸಿ., ಎಸ್.ವೈ. ಮುಲ್ಕಿಪಾಟೀಲ, ಡಾ. ಈಶ್ವರ ಹೊಸಮನಿ ಇದ್ದರು.

ADVERTISEMENT

ಕನ್ನಡ ಕಲರವ: ಕನ್ನಡ ಹಬ್ಬದ ಅಂಗವಾಗಿ ಕಿಮ್ಸ್‌ ಆವರಣದಲ್ಲಿ ಕೆಂಪು, ಹಳದಿ ಬಾವುಟಗಳು ರಾರಾಜಿಸಿದವು. ವಿದ್ಯಾರ್ಥಿಗಳು ವಿವಿಧ ವಾದ್ಯ–ಮೇಳಗಳ ತಂಡಗಳ ಸದಸ್ಯರ ಜೊತೆ ಡೋಲು ಬಾರಿಸುತ್ತ ಸಂಭ್ರಮಿಸಿದರು. ವಿವಿಧ ವಿಭಾಗಗಳ ಮುಖ್ಯಸ್ಥರು ಟಿ. ಎಸ್‌. ನಾಗಾಭರಣ ಅವರ ಜೊತೆ ಹೆಜ್ಜೆ ಹಾಕಿ ಕುಣಿದರು.

ಯಶ್‌ ಸಾಧನೆಗೆ ಮೆಚ್ಚುಗೆ

‘ಯಶ್‌ ನನ್ನ ಶಿಷ್ಯ ಎನ್ನಲು ಹೆಮ್ಮೆ. ಅವನು ಬೆನಕ ನಾಟಕ ತಂಡದ ಸದಸ್ಯನಾಗಿದ್ದ. ವಿವಿಧೆಡೆ ನಾಟಕ ಪ್ರದರ್ಶನಕ್ಕೆ ತೆರಳುವಾಗ ಅವನು, ಬೆಂಗಳೂರಿನಲ್ಲಿ ನಮ್ಮ ಕಚೇರಿಯ ಎರಡನೇ ಮಹಡಿಯಿಂದ ನಾಟಕ ಸಲಕರಣೆಗಳನ್ನು ವಾಹನಕ್ಕೆ ತುಂಬಿ, ಇಳಿಸುವ ಕೆಲಸ ಅವನದ್ದಾಗಿತ್ತು.ಅಂದಿನ ಅವನ ಪರಿಶ್ರಮ, ನಂಬಿಕೆ, ಆತ್ಮಸ್ಥೈರ್ಯ ಇಂದು ಮಹಾನ್‌ ನಟನನ್ನಾಗಿಸಿದೆ. ಸಾಧನೆ ಜೊತೆ ಸಾಮಾಜಿಕ ಕಳಕಳಿಯೂ ಅಗತ್ಯ. ಬೇಡ ಅನ್ನೋದನ್ನು ಸಿನಿಮಾ ಬೇಕು ಎನ್ನುವಂತೆ ಮಾಡುತ್ತದೆ’ ಎಂದು ನಟ ಯಶ್‌ ಸಾಧನೆ ಬಗ್ಗೆ ನಾಗಾಭರಣ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.